ಕರಾವಳಿ

ಪಿಡಿಓ ಹುದ್ದೆ ಮೇಲ್ದರ್ಜೆಗೇರಿಸಲು ಸಚಿವ ಈಶ್ವರಪ್ಪರಿಗೆ ಮನವಿ

Pinterest LinkedIn Tumblr

ಉಡುಪಿ: ಗ್ರಾಮ ಪಂಚಾಯತ್‍ಗಳ ಅಧಿಕಾರ ವಿಕೇಂದ್ರೀಕರಣವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಮತ್ತು ಗ್ರಾಮ ಮಟ್ಟದಲ್ಲಿ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಸಮನ್ವಯ ಮತ್ತು ಅನುಷ್ಟಾನಕ್ಕೆ ಪೂರಕವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು “ಬಿ” ದರ್ಜೆಗೇರಿಸಲು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರನ್ನು ಭೇಟಿಮಾಡಿದ ಸಂಘದ ಪದಾಧಿಕಾರಿಗಳು ಹುದ್ದೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯತೆ ಕುರಿತು ವಿವರಿಸಿ, ಪಂಚಾಯತ್ ಅಧಿಕಾರಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ವಿನಂತಿಸಿದರು.

ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ, ಕೆಡಿಪಿ ಸಭೆಯನ್ನು ನಡೆಸುವ ಮಹತ್ವದ ಅಧಿಕಾರ ಪಂಚಾಯತ್‍ಗಳಿಗೆ ಲಭ್ಯವಾಗಿದ್ದು, ಇದರ ಇಲಾಖಾ ಸಮನ್ವಯ ಹಾಗೂ ಪಂಚಾಯತ್ ಗಳಿಗೆ ಹೆಚ್ಚಿನ ಆರ್ಥಿಕ ಅಧಿಕಾರ ಪ್ರಾಪ್ತಿಯಾಗಿದ್ದು ಇದರ ವ್ಯವಸ್ಥಿತ ನಿರ್ವಹಣೆ ಹಾಗೂ ಈ ಕುರಿತ ಹಲವು ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಹುದ್ದೆ ಮೇಲ್ದರ್ಜೆಗೇರಿಸುವುದು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಪೂರಕ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ಮನವಿ ಆಲಿಸಿದ ಸಚಿವರು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸುವುದಾಗಿ ತಿಳಿಸುವುದರೊಂದಿಗೆ ಪಂಚಾಯತ್‍ಗಳಲ್ಲಿ ಸೋಲಾರ್ ಅಳವಡಿಕೆ ಹಾಗೂ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಹೆಚ್ಚು ಆದ್ಯತೆ ನೀಡಿ ಅನುಷ್ಟಾನ ಮಾಡಲು ತಿಳಿಸಿದರು.

ಕಾರ್ಕಳದ ಶಾಸಕರಾದ ಸುನಿಲ್ ಕುಮಾರ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇಜರ್ ಹರ್ಷ ಕೆ. ಜಿಲ್ಲಾ ಸಂಘದ ಕಾರ್ಯದರ್ಶಿ ಮಹೇಶ್, ಉಡುಪಿ ತಾಲೂಕು ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಕಳ ತಾಲೂಕು ಸಂಘದ ಅಧ್ಯಕ್ಷ ಸದಾಶಿವ, ಮತ್ತಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.