ಕರಾವಳಿ

ಜಿಲ್ಲೆಯ ಅಭಿವೃದ್ಧಿಗೆ ಸರಕಾರಿ ನೌಕರರ ಸೇವಾ ಮನೋಭಾವ ಕಾರಣ: ದಿನಕರ ಬಾಬು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಪ್ರಗತಿ ಮತ್ತು ಅಭಿವೃದ್ಧಿಗೆ ಜಿಲ್ಲೆಯ ಸರಕಾರಿ ನೌಕರರಲ್ಲಿನ ಸೇವಾ ಮನೋಭಾವ ಕಾರಣ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಇತರ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಉಡುಪಿಯು ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಮುಂದಿದ್ದು, ಇದಕ್ಕೆ ಜಿಲ್ಲೆಯ ಸರಕಾರಿ ನೌಕರರ ಸೇವಾ ಮನೋಭಾವವೇ ಕಾರಣ. ಜಿಲ್ಲೆಯ ನೌಕರರು ಮತ್ತು ಹೊರ ಜಿಲ್ಲೆಯಿಂದ ವರ್ಗಾವಣೆಯಾಗಿ ಬರುವ ನೌಕರರ ಕೆಲಸದ ಶೈಲಿ ಜಿಲ್ಲೆಯ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಜಿಲ್ಲೆಯ ಮಣ್ಣಿನ ಗುಣ ಸಹ ಇದಕ್ಕೆ ಕಾರಣ. ನೌಕರರು ಕ್ರೀಡಾಕೂಟದಲ್ಲಿ ಸಂಭ್ರಮದಿಂದ ಭಾಗವಹಿಸಬೇಕೆಂದು ದಿನಕರ ಬಾಬು ಕರೆ ನೀಡಿದರು.

ಜಿಲ್ಲಾಧಿಕಾರಿ ಜಿ ಜಗದೀಶ್ ಮಾತನಾಡಿ, ಸರಕಾರಿ ನೌಕರರಿಗೆ ವರ್ಷ ಪೂರ್ತಿ ಕಚೇರಿ ಕೆಲಸವಿರುವುದರಿಂದ ಒತ್ತಡವನ್ನು ಅನುಭವಿಸುತ್ತಿರುತ್ತಾರೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ನೌಕರರಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಸರಕಾರಿ ನೌಕರರು ತಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡಿದ್ದರೆ ಉತ್ತಮ ರೀತಿಯಲ್ಲಿ ಸಾರ್ವಜನಿಕ ಸೇವೆ ಮಾಡಲು ಸಾಧ್ಯ. ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವದರ್ಜೆಯ ಸೌಲಭ್ಯಗಳಿದ್ದು, ನೌಕರರು ಇದರ ಸದುಪಯೋಗ ಪಡೆಯಬೇಕು, ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೆ ನಿಗದಿತ ಸಮಯದೊಳಗೆ ಕೆಲಸ ಮುಗಿಸಿ ವೈಯಕ್ತಿಕ ಜೀವನಕ್ಕೂ ಸಮಯ ಮೀಸಲಿಡಬೇಕು ಎಂದು ಹೇಳಿದರು.
ಉಡುಪಿ ಜಿಲ್ಲೆಯ ಸಿಬ್ಬಂದಿಯ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಹೊಗಳಿದ ಜಿಲ್ಲಾಧಿಕಾರಿ, ರಾಜ್ಯಮಟ್ಟದಲ್ಲಿ ಜಿಲ್ಲೆಯ ಮೇಲೆ ಹೆಚ್ಚು ನಿರೀಕ್ಷೆಗಳಿದ್ದು, ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತಾಗಬೇಕು, ಜಿಲ್ಲೆಯ ಸರಕಾರಿ ನೌಕರರಿಗೆ ಕೆಲಸದ ಸಂದರ್ಭದಲ್ಲಿ ಒತ್ತಡ ನಿವಾರಣೆ ಕುರಿತಂತೆ, ಆಧ್ಯಾತ್ಮಿಕ ಚಿಂತಕರಾದ ಶಿವಾನಿ ಅವರಿಂದ ಫೆಬ್ರವರಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಕ್ರೀಡಾಪಟು ಉದಯ್‍ಕುಮಾರ್ ಶೆಟ್ಟಿ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ರೀಡಾಧಿಕಾರಿ ಮಧುಕರ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಅಧ್ಯಕ್ಷ ಕಿರಣ್ ಹೆಗ್ಡೆ, ಖಜಾಂಚಿ ಚಂದ್ರಶೇಖರ್, ಕ್ರೀಡಾ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಕಾರ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೊಕಿಂ ಪಿಂಟೋ, ಹೆಬ್ರಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಉಪಸ್ಥಿತರಿದ್ದರು.

ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ವಂದಿಸಿದರು.

Comments are closed.