ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ, ಅಗತ್ಯವಿರುವೆಡೆ ಸರ್ವೀಸ್ ರಸ್ತೆ ನಿರ್ಮಾಣ ಮೊದಲಾದ ಸೌಕರ್ಯ ನೀಡಿದ ಬಳಿಕವೇ ಟೋಲ್ ಸಂಗ್ರಹ ಮಾಡಬೇಕೆಂದು ಆಗ್ರಹಿಸಿ ಬೈಂದೂರು-ವಂಡ್ಸೆ ಬ್ಲಾಕ್ ಕಾಂಗ್ರೆಸ್ ಶನಿವಾರದಂದು ಮರವಂತೆಯಿಂದ ಬೈಂದೂರಿನ ತನಕ ಬೃಹತ್ ಪಾದಯಾತ್ರೆ ನಡೆಸಿತು.
ಮರವಂತೆ ಬಸ್ ನಿಲ್ದಾಣ ಬಳಿಯಿಂದ ಆರಂಭಗೊಂಡ ಪಾದಯಾತ್ರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಿದರು. ಪಾದಯಾತ್ರೆಯು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಾಗಿ ಸುಮಾರು ೧೮ ಕಿ.ಮೀ ದೂರದ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿಯಲ್ಲಿ ಸಮಾಪ್ತಿಗೊಂಡಿತು. ಈ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.
ಬೈಂದೂರಿನ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕುಂದಾಪುರದ ಸಂಗಂ ಬಳಿಯಿಂದ ಬೈಂದೂರು ತನಕ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ಕೂಡಿದೆ. ಒಳಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ಪೈಪ್ ಹಾಳುಗೆಡವಿದೆ. ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಕಂಪೆನಿ ಶಿರೂರಿನಲ್ಲಿ ಟೋಲ್ ಸಂಗ್ರಹಕ್ಕೆ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ. ತಲ್ಲೂರಿನಿಂದ ಶಿರೂರು ತನಕದ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಬಗ್ಗೆ ಸಂಬಂದಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಒತ್ತಾಯದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ಮತ್ತು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಜನರಿಗೆ ಸ್ಪಂದಿಸಬೇಕು ಎಂಬ ಆಗ್ರಹದೊಂದಿಗೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈಗಾಗಲೇ ಎರಡೂ ಬ್ಲಾಕ್ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾ.ಪಂ.ಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದೆ. ಪ್ರತೀ ಗಾ.ಪಂ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟವರಿಗೆ ಕಳುಹಿಸುವ ಕೆಲಸಕ್ಕೆ ಮುಂದಾಗುತ್ತೇವೆ. ಈ ಹಿಂದೆ ಆಸ್ಕರ್ ಫೆರ್ನಾಂಡೀಸ್ ಸಚಿವರಾಗಿದ್ದ ವೇಳೆಯಲ್ಲಿ ಶಿರೂರು ಮತ್ತು ಬೈಂದೂರಿನಲ್ಲಿ ನಡೆಸಿದ ಸಭೆಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಹಾಗೂ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಆದರೆ ಇವೆಲ್ಲವನ್ನೂ ನಿರ್ಲಕ್ಷಿಸಿ ಗುತ್ತಿಗೆ ಕಂಪೆನಿ ತಮಗೆ ಮನಬಂದಂತೆ ವರ್ತಿಸುತ್ತಿದ್ದು, ಪಾದಚಾರಿಗಳು, ಹೆದ್ದಾರಿ ಹಾದುಹೋಗುವ ಊರುಗಳ ನಾಗರಿಕರು ಅನುಭವಿಸುತ್ತಿರುವ ಬವಣೆಯ ಹೇಳತೀರದು. ಅರೆಬರೆ ಕಾಮಗಾರಿ ನಡೆಸಿ ಶಿರೂರಿನಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ಧತೆ ನಡೆಸುವ ಹುನ್ನಾರ ನಡೆಯುತ್ತಿ ಎಂದ ಅವರು, ಇವೆಲ್ಲವನ್ನು ವಿರೋಧಿಸಿ ಮತ್ತು ಇವುಗಳನ್ನು ಸಮರ್ಪಕಗೊಳಿಸಿದ ಬಳಿಕವೇ ಶುಲ್ಕ ಸಂಗ್ರಹ ಆರಂಭಿಸಬೇಕೆಂದು ಆಗ್ರಹಿಸಿದರು.
ಐ.ಆರ್.ಬಿ. ಜೊತೆ ಬಿಜೆಪಿ ಶಾಮೀಲಿದೆ: ಪೂಜಾರಿ ಆರೋಪ
ಪಾದಯಾತ್ರೆಯ ಬಗ್ಗೆ ಜಿಲ್ಲಾಡಳಿತ ನೋಡಿರುವ ನೋಟೀಸ್ ಕುರಿತು ಪ್ರತಿಕ್ರಿಯಿಸಿದ ಕೆ. ಗೋಪಾಲ ಪೂಜಾರಿ ಅವರು, ಇಂತಹ ನೋಟೀಸ್‌ಗಳಿಗೆಲ್ಲಾ ನಾನು ಹೆದರುವುದಿಲ್ಲ. ರಾಜಕೀಯ ಜೀವನದಲ್ಲಿ ಸಾಕಷ್ಟು ಅಧಿಕಾರಿಗಳನ್ನು ನೋಡಿದ್ದೇನೆ. ಪ್ರತಿಭಟನೆ ಅಂದಮೇಲೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದು ಜಿಲ್ಲಾಧೀಕಾರಿಯವರ ಕರ್ತವ್ಯ. ಅದರಂತೆ ಅವರು ನಮಗೆ ನೋಟೀಸ್ ನೀಡಿದ್ದಾರೆ. ರಾ.ಹೆ ವಿಚಾರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹೇಳಿಕೆಗಳನ್ನು ನೀಡುತ್ತಾರೆಯೇ ವಿನಃ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನರು ಇಷ್ಟೆಲ್ಲಾ ಸಮಸ್ಯೆ ಅನುಭವಿಸುತ್ತಿದ್ದರೂ ಕೇಂದ್ರ, ರಾಜ್ಯ ಸರ್ಕಾರಗಳು ಮಾತನಾಡುತ್ತಿಲ್ಲ. ಇದನ್ನೆಲ್ಲ ಗಮನಿಸಿದರೆ ಐಆರ್‌ಬಿ ಕಂಪೆನಿಗೂ ಹಾಗೂ ಭಾರತೀಯ ಜನತಾ ಪಾರ್ಟಿಗೂ ಸಂಬಂಧವಿರಬಹುದು ಅನ್ನಿಸುತ್ತದೆ. ರಾಜ್ಯ, ಕೇಂದ್ರ ಸರ್ಕಾರಗಳು ಬಿಜೆಪಿ ಆಡಳಿತದಲ್ಲಿದೆ. ಕೇಂದ್ರ ಸಾರಿಗೆ ಸಚಿವರು ಬಿಜೆಪಿಯವರು. ಇಷ್ಟೆಲ್ಲಾ ಇದ್ದರೂ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಐಆರ್‌ಬಿ ಕಂಪೆನಿಯ ಜೊತೆ ಇವರೆಲ್ಲೂ ಶಾಮೀಲಾಗಿದ್ದಾರೆ. ತಮ್ಮ ರಾಜಕೀಯಕ್ಕೆ ತೊಂದರೆಯಾಗಬಹುದೆಂದು ಸುಮ್ಮನೆ ಕುಳಿತಿದ್ದಾರೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದರು.
ಸುಮಾರು 18 ಕಿ.ಮೀ. ದೂರ ಪಾದಯಾತ್ರೆಯ ಸಾವಿರಾರು ಕಾರ್ಯಕರ್ತರೊಂದಿಗೆ ಹೆಜ್ಜೆಹಾಕಿದ ಕೆ, ಗೋಪಾಲ ಪೂಜಾರಿ ಸ್ವತಃ ತಾವೇ ಕೇಂದ್ರ ಸರ್ಕಾರ, ಹೆದ್ದಾರಿ ಪ್ರಾಧಿಕಾರ, ಗುತ್ತಿಗೆ ಕಂಪೆನಿ, ಸಾರಿಗೆ ಸಚಿವರ ವಿರುದ್ದ ಆಕ್ರೋಶದ ಘೋಷಣೆಗಳನ್ನು ಕೂಗಿದರು. ಬಿರು ಬಿಸಿಲು ಲೆಕ್ಕಿಸದೆ ದಾರಿಯುದ್ದಕ್ಕೂ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಎಲ್ಲೂ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಪೊಲೀಸರೊಂದಿಗೆ ಸ್ವಯಂಸೇವಕರಾಗಿ ಶ್ರಮಿಸಿರುವ ದೃಶ್ಯಗಳು ದಾರಿಯೂದ್ದಕ್ಕೂ ಕಂಡುಬಂದವು.
ಈ ವೇಳೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ರಾ.ಹೆ ಸಮಸ್ಯೆಗಳ ಪಟ್ಟಿಯುಳ್ಳ ಮನವಿಯನ್ನು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಡಿಪೆಂಡೆಂಟ್ ಇಂಜಿನಿಯರ್ ಚೆನ್ನಪ್ಪ, ಐಆರ್‌ಬಿ ಅಧಿಕಾರಿಗಳಾದ ಗುರಣ್ಣ, ಇಂಜಿನಿಯರ್ ಯೋಗೀಂದ್ರಪ್ಪ ಅವರಿಗೆ ಮನವಿ ನೀಡಲಾಯಿತು.
ಬೇಡಿಕೆಗಳು:
೧. ತಲ್ಲೂರಿನಲ್ಲಿ ಅಂಡರ್‌ಪಾಸ್ ಹಾಗೂ ಬಸ್ ತಂಗುದಾಣ
೨. ಹೆಮ್ಮಾಡಿ ಜಂಕ್ಷನ್‌ನಿಂದ ಸಂತೋಷನಗರ ಟರ್ನ್‌ವರೆಗೆ ಸರ್ವಿಸ್ ರಸ್ತೆ. ಉಕ್ಕಿನ ಮೇಲ್‌ಸೇತುವೆ, ತಂಗುದಾಣ
೩. ಮುಳ್ಳಿಕಟ್ಟೆ ಜಂಕ್ಷನ್ ಅಗಲೀಕರಣ ಸರ್ವಿಸ್ ರಸ್ತೆ ಹಾಗೂ ಎರಡು ಬದಿ ಚರಂಡಿ ಹಾಗೂ ತಂಗುದಾಣ.
೪. ತ್ರಾಸಿಯಲ್ಲಿ ಅಂಡರ್‌ಪಾಸ್ ಸರ್ವಿಸ್ ರಸ್ತೆ ಹಾಗೂ ಎರಡು ಬದಿ ಚರಂಡಿ ಹಾಗೂ ತಂಗುದಾಣ.
೫. ಮರವಂತೆ ವರಹಾಸ್ವಾಮಿ ದೇವಳದ ಬಳಿ ಡಿವೈಡರ್, ಸರ್ವಿಸ್ ರಸ್ತೆ ಹಾಗೂ ತಂಗುದಾಣ. ಜಕ್ಕನ್‌ಕಟ್ಟೆಯಲ್ಲಿ ಯೂಟನ್
೬. ನಾವುಂದ ಶುಭದಾ ಶಾಲೆಯಿಂದ ಬಡಾಕೆರೆ ಕ್ರಾಸ್ ವರೆಗೆ ಸರ್ವಿಸ್ ರಸ್ತೆ ಹಾಗೂ ಎರಡು ಬದಿ ಚರಂಡಿ ಹಾಗೂ ತಂಗುದಾಣ.
೭. ನಾಗೂರಿನ ಯೂಟರ್ನ್ ಸರಿಪಡಿಸುವುದು ಸರ್ವಿಸ್ ರಸ್ತೆ ಹಾಗೂ ಎರಡು ಬದಿ ಚರಂಡಿ ಹಾಗೂ ತಂಗುದಾಣ.
೮. ಖಂಬದಕೋಣೆಯಲ್ಲಿ ಎರಡು ಬದಿ ಚರಂಡಿ ಹಾಗೂ ತಂಗುದಾಣ.
೯. ನಾಯ್ಕನಕಟ್ಟೆ ಯೂಟರ್ನ್ ಸರಿಪಡಿಸುವುದು ಹಾಗೂ ಸರ್ವಿಸ್ ರಸ್ತೆ ಹಾಗೂ ಎರಡು ಬದಿ ಚರಂಡಿ ಹಾಗೂ ತಂಗುದಾಣ.
೧೦. ಉಪ್ಪುಂದದಲ್ಲಿ ಸರ್ವಿಸ್ ರಸ್ತೆ ಹಾಗೂ ಎರಡು ಬದಿ ಚರಂಡಿ ಹಾಗೂ ತಂಗುದಾಣ.
೧೧. ಯಡ್ತರೆ ಜಂಕ್ಷನ್ ಸರಿಪಡಿವುದು ಹಾಗೂ ಬೈಂದೂರು ಹೊಸ ಬಸ್ ನಿಲ್ದಾಣದ ಬಲಿಯಲ್ಲಿರುವ ಯೂಟರ್ನ್ ಸರಿಪಡಿಸುವುದು.
೧೨. ಶಿರೂರು ಟೋಲ್‌ಗೇಟ್‌ನಿಂದ ಸ್ಥಳೀಯರಿಗೆ ವಿನಾಯಿತಿ ಮೊದಲಾದವುಗಳು.
ಇದೇ ಸಂದರ್ಭ ತಹಶೀಲ್ದಾರ್ ಬಸಪ್ಪ ಪೂಜಾರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ಗುಡಿಬೆಟ್ಟು, ಮುಖಂಡರಾದ ಎಸ್. ರಾಜು ಪೂಜಾರಿ, ವಾಸುದೇವ ಯಡಿಯಾಳ, ಶೇಖರ ಪೂಜಾರಿ, ಮಂಜುಳ, ರಾಜು ದೇವಾಡಿಗ, ಜಗದೀಶ್ ದೇವಾಡಿಗ, ಜ್ಯೋತಿ ಪುತ್ರನ್, ಗೌರಿ ದೇವಾಡಿಗ, ವಾಸುದೇವ ಪೈ, ಶರತ್ ಕುಮಾರ್ ಶೆಟ್ಟಿ, ದೀಪಕ್ ನಾವುಂದ, ದಿನೇಶ್ ನಾಕ್ ಹಳ್ಳಿಹೊಳೆ ಮೊದಲಾದವರು ಇದ್ದರು.
Comments are closed.