ಕುಂದಾಪುರ: ಇತಿಹಾಸ ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವರ ಕೊಡಿಹಬ್ಬದ ಪೂರ್ವ ತಯಾರಿ ಕುರಿತು ಶುಕ್ರವಾರ ಎಸ್ಪಿ ನೀಶಾ ಜೇಮ್ಸ್ ಅವರು ಕೋಟೇಶ್ವರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವಳದ ಒಳ ಹಾಗೂ ಹೊರಭಾಗದ ವ್ಯವಸ್ಥೆ, ಕೋಟಿ ತೀರ್ಥ ಪುಷ್ಕರಣಿಯ ಬಗ್ಗೆ ಎಚ್ಚರಕೆಯ ನಾಮಫಲಕಗಳು ಸೇರಿದಂತೆ ಸಿಸಿ ಕ್ಯಾಮರ ಅಳವಡಿಕೆ ಹಾಗೂ ಸೂಕ್ತ ಭಧ್ರತೆಯ ಕ್ರಮಗಳ ಬಗ್ಗೆ, ಜಾತ್ರೆಯಲ್ಲಿ ಬರುವ ಅಂಗಡಿ ಮುಗ್ಗಟ್ಟುಗಳ ಸ್ಥಳಗಳು, ದೊಡ್ಡ ತೊಟ್ಟಿಲು, ಆಟವಾಡುವ ಜಾಯಿಂಟ್ ವೀಲ್ ಮೊದಲಾದ ಸ್ಥಳಗಳ ಬಗ್ಗೆ ಮಾಹಿತಿ ಸೇರಿದಂತೆ ರಥಬೀದಿಯಲ್ಲಿ ಸುಗುಮ ಸಂಚಾರಕ್ಕೆ ಅನೂಕೂಲವಾಗುವ ನಿಟ್ಟಿನಲ್ಲಿ ಅನುಸರಿಸಿದ ಕ್ರಮಗಳ ಬಗ್ಗೆ ಠಾಣಾಧಿಕಾರಿ ಹರೀಶ್ ನಾಯ್ಕ್ ಇವರಿಂದ ಮಾಹಿತಿಯನ್ನು ಪಡೆದರು. ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗದಂತೆ ವಾಹನವಾರು ವಿಂಗಡಿಸಿ ಪಾರ್ಕಿಂಗ್ ವ್ಯವಸ್ಥೆ ರೂಪಿಸಲು ಸೂಚಿಸಿದರು. ಜಾತ್ರೆ ಸುಗುಮವಾಗಿ ಯಶಸ್ವಿಯಾಗಲು ಮುಂಜಾಗೃತ ಕ್ರಮಗಳನ್ನು ಅನುಸರಿಸಲು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಸಮಿತಿ ಸದಸ್ಯರಿಗೆ ಸೂಚಿಸಿದರು.
ಎಸ್ಪಿ ಸೂಚನೆ ಏನು?
ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆ ದೇವಸ್ಥಾನ ಹಾಗೂ ಆಯಕಟ್ಟಿನ ವಿವಿಧ ಸ್ಥಳಗಳಲ್ಲ ಸಿಸಿ ಟಿವಿ ಅಳವಡಿಕೆ, ದೇವಸ್ಥಾನದ ವತಿಯಿಂದ ಸ್ವಯಂಸೇವಕರ ನಿಯೋಜನೆ ಮತ್ತು ಎಲ್ಲರಿಗೂ ಟೀ ಶರ್ಟ್, ಗುರುತಿನ ಚೀಟಿ ನೀಡುವ ಬಗ್ಗೆ, ತುರ್ತು ಚಿಕಿತ್ಸೆಗೆ ಸಹಕಾರಿಯಾಗಲು ಅಗತ್ಯ ಸ್ಥಳದಲ್ಲಿ ವೈದ್ಯರ ಸಹಿತ ಅಂಬುಲೆನ್ಸ್ ವಾಹನ ನಿಲುಗಡೆ, ಅನಿವಾರ್ಯ ಸಂದರ್ಭ ಜನಜಂಗುಳಿ ನಡುವೆಯೇ ಅಗತ್ಯ ತುರ್ತು ಪರಿಕರ ಸಾಗಿಸಲು ದ್ವಿಚಕ್ರ ವಾಹನ ಬಳಕೆ ಕುರಿತು, ಅಗ್ನಿಶಾಮಕದಳ ವಾಹನ ನಿಯೋಜನೆ ಜೊತೆಗೆ ಕಿರಿದಾದ ದಾರಿಯಲ್ಲೂ ಸಾಗಲು ಅನುಕೂಲವಾಗುವಂತೆ ಸಣ್ಣ ಅಗ್ನಿಶಾಮಕ ವಾಹನ ನಿಯೋಜಿಸಲು ಈ ಸಂದರ್ಭ ದೇವಸ್ಥಾನದವರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್, ಸಂಚಾರಿ ಠಾಣೆ ಉಪನಿರೀಕ್ಷಕಿ ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.