ಕರಾವಳಿ

ಸಹಕಾರಿ ಕ್ಷೇತ್ರ ದೇಶದಲ್ಲಿ ಬಲಿಷ್ಠವಾಗಿದೆ : ದ.ಕ. ಸಹಕಾರಿ ನೌಕರರ ಸಂಘದ ಸ್ವಂತ ಕಟ್ಟಡ ‘ಉನ್ನತಿ’ ಉದ್ಘಾಟಿಸಿ ಡಾ.ಎಮ್‌ಎನ್‍ಆರ್

Pinterest LinkedIn Tumblr

ಮಂಗಳೂರು : ದೊಡ್ಡ ಬ್ಯಾಂಕ್‌ಗಳಲ್ಲಿ ಸಾಲ ಒದಗಿಸಲು ಹಲವು ದಿನಗಳ ಕಾಲಾವಕಾಶದ ಅಗತ್ಯವಿದೆ. ಆದರೆ ಸಹಕಾರಿ ಸಂಘದ ಬ್ಯಾಂಕ್‌ಗಳಲ್ಲಿ ಕೇವಲ ಒಂದೇ ದಿನದಲ್ಲಿ ಸಾಲ ಮಂಜೂರಾಗುತ್ತದೆ. ಅಷ್ಟರ ಮಟ್ಟಿಗೆ ಸಹಕಾರಿ ಕ್ಷೇತ್ರ ದೇಶದಲ್ಲಿ ಬಲಿಷ್ಠವಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ನಗರದ ಕೊಡಿಯಾಲ್‌ಬೈಲ್‌ನ ಪಿವಿಎಸ್ ಕಲಾಕುಂಜ ಸಮೀಪ ನೂತನವಾಗಿ ನಿರ್ಮಿಸಲಾದ ದ.ಕ. ಸಹಕಾರಿ ನೌಕರರ ಸಂಘದ ಸ್ವಂತ ಕಟ್ಟಡ ‘ಉನ್ನತಿ’ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ. ಜಿಲ್ಲೆಯು ಸಹಕಾರಿ ಕ್ಷೇತ್ರ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹಲವು ಬ್ಯಾಂಕ್‌ಗಳ ತವರು ಎನಿಸಿದೆ. ದೇಶದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಕಾರಿ ಸಂಘಗಳು ಲಾಭದಾಯಕವಾಗಿವೆ. ಇವು ಸ್ಥಳೀಯರೊಂದಿಗೆ ಅವಿನಾಭವ ಸಂಬಂಧಗಳನ್ನು ಹೊಂದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಸಂಘದ ಉಪಾಧ್ಯಕ್ಷ ಎಸ್. ಜಗದೀಶ್ ಚಂದ್ರ ಅಂಚನ್ ಅವರ ಸಂಪಾದಕತ್ವದಲ್ಲಿ ಮೂಡಿಬಂದ ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ‘ಸಮನ್ವಯ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ನೀಡಲು ವ್ಯಕ್ತಿಯ ಮುಖ ನೋಡುತ್ತವೆ. ಆದರೆ ಸಹಕಾರಿ ಬ್ಯಾಂಕ್‌ಗಳು ಜನಪರವಾಗಿವೆ. ಈ ಮೂಲಕ ನೇರವಾಗಿ ಜನಸಾಮಾನ್ಯರನ್ನು ತಲುಪುತ್ತಿರುವುದೇ ಸಹಕಾರಿ ಬ್ಯಾಂಕ್‌ಗಳ ಯಶಸ್ಸಿಗೆ ಕಾರಣವಾಗಿದೆ.ಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಸಂಘಟನೆ, ಬ್ಯಾಂಕ್‌ಗಳು ಬಡವರ ಕಣ್ಣೀರನ್ನು ಒರೆಸುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಸುಧಾಕರ್ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಸಹಕಾರಿ ನೌಕರರ ಸಹಕಾರ ಸಂಘದಿಂದ ಎಸ್ ಸಿ ಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದ.ಕ. ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಭಾಸ್ಕರ್ ಎನ್. ಕೋಟ್ಯಾನ್, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಲೀಲಾವತಿ ಪ್ರಕಾಶ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ನಾರಾಯಣ, ಎಸ್ಸಿಡಿಸಿಸಿಯ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಪೂಜಾರಿ, ನಿರ್ದೇಶಕರಾದ ಪುಷ್ಪರಾಜ್ ಎಂ.ಎಸ್., ಕೃಷ್ಣ ಪ್ರಕಾಶ್ ಎಚ್., ದಿವಾಕರ ಶೆಟ್ಟಿ, ಶುಭಲಕ್ಷ್ಮೀ ವಿ. ರೈ, ರಾಘವ್ ಆರ್. ಉಚ್ಚಿಲ್, ಅರವಿಂದ ಕೆ. ಶೆಟ್ಟಿ, ಅನಂತರಾಮ್ ಎಂ. ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ಉಪಾಧ್ಯಕ್ಷ ಎಸ್. ಜಗದೀಶ್ ಚಂದ್ರ ಅಂಚನ್ ಸ್ವಾಗತಿಸಿದರು. ಎಮ್.ಪಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಎಚ್.ರಾಜೀವ್ ಶೆಟ್ಟಿ ವಂದಿಸಿದರು.

Comments are closed.