ಕರಾವಳಿ

ಉಡುಪಿಯಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್: ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

Pinterest LinkedIn Tumblr

ಉಡುಪಿ: ಸುಮಾರು ಮೂರು ವರ್ಷಗಳ ಹಿಂದೆ ಉಡುಪಿ ನಗರದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಇಬ್ಬರು ಆರೋಪಿಗಳಿಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಇಂದು ಆದೇಶ ನೀಡಿದೆ ಎಂದು ತಿಳಿದು ಬಂದಿದೆ.

ರಾಜಸ್ಥಾನ ಮೂಲದ ಮುಖೇಶ್ ಸೇನಿ ಯಾನೆ ಮುಖೇಶ್ ಮಾಲಿ (20) ಹಾಗೂ ಪದಮ್ ಸಿಂಗ್ ಸೇನಿ (28) ಶಿಕ್ಷೆಗೆ ಗುರಿಯಾದ ಆರೋಪಿಗಳು.

ಟೈಲ್ಸ್ ಕೆಲಸ ಮಾಡುತ್ತಿದ್ದ ಇವರಿಬ್ಬರು ಉಡುಪಿಯ 76 ಬಡಗಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, 2016ರ ಜು.8ರಂದು ಮಧ್ಯರಾತ್ರಿ ರಾಜಸ್ತಾನ ಮೂಲದ 15 ವರ್ಷ ವಯಸ್ಸಿನ ಬಾಲಕಿಯನ್ನು ಮನೆಯಿಂದ ಓಮ್ನಿ ಕಾರಿನಲ್ಲಿ ಅಪಹರಿಸಿ, ತಮ್ಮ ಬಾಡಿಗೆ ಮನೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ್ದರು. ಈ ಬಗ್ಗೆ ಜು.10ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದೇ ದಿನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

2016ರ ಸೆ.29ರಂದು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಒಟ್ಟು 34 ಸಾಕ್ಷಿಗಳ ಪೈಕಿ ಪ್ರಾಸಿಕ್ಯೂಶನ್ ಪರವಾಗಿ 21 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಆರೋಪಿಗಳು ದೋಷಿ ಎಂಬುದಾಗಿ ನ.23ರಂದು ಆದೇಶ ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ, ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದ್ದಾರೆ. ಅದರಂತೆ ಕಲಂ 366 ಎ(ಅಪಹರಣ)ಯಂತೆ 10 ವರ್ಷ ಜೈಲುಶಿಕ್ಷೆ ಮತ್ತು 15ಸಾವಿರ ರೂ. ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳು ಸಜೆ, 376 ಡಿ(ಸಾಮೂಹಿಕ ಅತ್ಯಾಚಾರ) ಯಂತೆ 20 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ಹಾಗೂ ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ, 201 (ಸಾಕ್ಷನಾಶ)ರಂತೆ 7ವರ್ಷ ಜೈಲುಶಿಕ್ಷೆ ಮತ್ತು 10ಸಾವಿರ ರೂ. ದಂಡ ಹಾಗೂ ತಪ್ಪಿದಲ್ಲಿ 6ತಿಂಗಳು ಸಜೆ, 506(ಜೀವ ಬೆದರಿಕೆ)ರಂತೆ ಒಂದು ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಹಾಗೂ ತಪ್ಪಿದಲ್ಲಿ ಮೂರು ತಿಂಗಳು ಸಜೆ, ಪೊಕ್ಸೋ ಕಾಯಿದೆಯಡಿ 20 ವರ್ಷ ಶಿಕ್ಷೆ ಮತ್ತು 20ಸಾವಿರ ರೂ. ದಂಡ ಹಾಗೂ ತಪ್ಪಿದಲ್ಲಿ ಒಂದು ವರ್ಷ ಸಜೆಯನ್ನು ವಿಧಿಸಿ ಆದೇಶ ನೀಡಲಾಗಿದೆ.

ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಒಂದು ಲಕ್ಷ ರೂ. ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ನ್ಯಾಯಾ ಲಯ ಆದೇಶದಲ್ಲಿ ತಿಳಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.

Comments are closed.