ಕುಂದಾಪುರ: ಕುಂದಾಪುರದ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ, ಸೌರಶಕ್ತಿ ಕುರಿತಾಗಿ ಮಾಹಿತಿ, ಮಾರ್ಗದರ್ಶನ ಕಾರ್ಯಾಗಾರವು ಸೋಮವಾರ ನಡೆಯಿತು. ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶ್ರೀಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಇವರ ಸಹಯೋಗ ವಹಿಸಿದ್ದವು.

ತಾಲೂಕು ಆರೋಗ್ಯಾಧಿಕಾರಿ, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ| ನಾಗಭೂಷಣ್ ಉಡುಪ ಉದ್ಘಾಟಿಸಿ, ಎಲ್ಲ ಆಶಾ ಕಾರ್ಯಕರ್ತೆಯರು 1 ವಾರದಲ್ಲಿ ತಮ್ಮ ಮನೆಯಲ್ಲಿ ಪೈಪ್ ಮಾದರಿಯಲ್ಲಿ ಕಾಂಪೋಸ್ಟ್ ಪದ್ಧತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುವುದನ್ನು ಅಳವಡಿಸಬೇಕು. ನಾವು ಇತರರಿಗೆ ಮಾದರಿಯಾಗುವ ಮೂಲಕ ಇನ್ನೊಬ್ಬರಿಗೆ ತ್ಯಾಜ್ಯ ವಿಲೇ ಕುರಿತು ಹೇಳಲು ಅರ್ಹತೆಯನ್ನು ಪಡೆಯೋಣ ಎಂದರು.
ಒಕ್ಕೂಟ ಅಧ್ಯಕ್ಷೆ ರಾಧಾದಾಸ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.
ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರಿನ ಸಹಾಯಕ ನಿರ್ದೇಶಕ ಮಂಜುನಾಥ್, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಮುಖ್ಯಸ್ಥ ಅರುಣ್ ಪಟವರ್ಧನ್, ಶ್ರೀಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಗೌರವಾಧ್ಯಕ್ಷೆ ಹೇಮಾವತಿ ಹೆಗ್ಡೆ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಕಾರ್ಯದರ್ಶಿ ಜಯಂತಿ ಎನ್. ಐತಾಳ್,ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಅಧ್ಯಕ್ಷ ಶಶಿಧರ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್, ಸಂಪನ್ಮೂಲ ವ್ಯಕ್ತಿ ಬಾರ್ಕೂರು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಭಾರತೀಯ ವಿಕಾಸ ಟ್ರಸ್ಟ್‌ನ ರಾಘವೇಂದ್ರ ನಿರ್ವಹಿಸಿದರು.
Comments are closed.