ಕುಂದಾಪುರ: ಕಳೆದ ಕೆಲವು ವರ್ಷಗಳಿಂದ ಸಮಾನ ಮನಸ್ಕ 70-80 ಮಂದಿ ತಂಡದಿಂದ ಕಾರ್ಯಾಚರಿಸಲ್ಪುಡುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಇವರ ಸ್ವಚ್ಚತಾ ಅಭಿಯಾನಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಮಂಜಪ್ಪ ಡಿ.ಆರ್ ನೇತೃತ್ವದಲ್ಲಿ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿಗಳು ಕುಂದಾಪುರ ಕೋಡಿಯ ಸೀ ವಾಕ್ ಬಳಿಯ ಸಮುದ್ರ ಕಿನಾರೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡು ಮಾದರಿಯಾದರು.





ಪ್ರತಿ ಭಾನುವಾರದಂದು ವಿವಿದೆಡೆ ಸ್ವಚ್ಚತಾ ಕಾರ್ಯ ಮಾಡುತ್ತಾ ಬಂದಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಜೊತೆಗೆ ಕುಂದಾಪುರ ಎಎಸ್ಪಿ ಕಚೇರಿ, ವೃತ್ತನಿರೀಕ್ಷಕರ ಕಚೇರಿ, ಕುಂದಾಪುರ ನಗರ ಠಾಣೆ, ಸಂಚಾರಿ ಠಾಣೆ, ಕುಂದಾಪುರ ಗ್ರಾಮಾಂತರ, ಅಮಾಸೆಬೈಲು, ಕೊಲ್ಲೂರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಯ 30ಕ್ಕೂ ಅಧಿಕ ಅಧಿಕಾರಿ ಸಿಬ್ಬಂದಿಗಳು ಜೊತೆಗೂಡಿದ್ದು 100ಕ್ಕೂ ಅಧಿಕ ಜನರಿಂದ ಬೀಚ್ ಬಳಿ ಸ್ವಛ್ಚತಾ ಕೆಲಸ ನಡೆದಿದ್ದು ಒಂದೂವರೆ ಲೋಡಿಗೂ ಅಧಿಕ ತ್ಯಾಜ್ಯ ಸಿಕ್ಕಿದ್ದು ಅದನ್ನು ಪುರಸಭೆಗೆ ಹಸ್ತಾಂತರಿಸಲಾಯಿತು.
ಸದಾ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರೋ ಪೊಲೀಸರು ವಾರಕ್ಕೊಮ್ಮೆ ಇಂತಹ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಕೆಲಸದ ಮೇಲೆ ಇನ್ನಷ್ಟು ಏಕಾಗೃತೆ ಹೆಚ್ಚಲಿದೆ. ಮಾತ್ರವಲ್ಲದೆ ಸಾರ್ವಜನಿಕರೊಂದಿಗೆ ಕೆಲಸ ಮಾಡಿದಾಗ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಇನ್ನಷ್ಟು ಬಲ ಬರುತ್ತದೆ ಎಂದು ಎಎಸ್ಪಿ ಹರಿರಾಂ ಶಂಕರ್ ಹೇಳುತ್ತಾರೆ.
ಇನ್ನು ವಿಶೇಷವೆಂದರೆ ಸ್ವಚ್ಚತಾ ಕಾರ್ಯದಲ್ಲಿ ಎಎಸ್ಪಿ ಅವರಿಗೆ ಪತ್ನಿ ಅನಂತಾ ಕೂಡ ಸಾಥ್ ನೀಡಿದ್ರು. ಒಟ್ಟಿನಲ್ಲಿ ಪೊಲೀಸರ ಈ ಮಾದರಿ ಕೆಲಸ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಕೊಲ್ಲೂರು ಠಾಣೆ ಪಿಎಸ್ಐ ಶಿವಕುಮಾರ್, ಎಎಸ್ಐ ಗೋವಿಂದರಾಜು, ರೆಡ್ ಕ್ರಾಸ್ ಸಂಸ್ಥೆಯ ಶಿವರಾಮ ಶೆಟ್ಟಿ, ಐಎಂಎ ಮಂಗಳೂರಿನ ಕಾರ್ಯದರ್ಶಿ ಡಾ. ರಶ್ಮೀ ಕುಂದಾಪುರ, ಗೋಪಾಡಿ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್ ಬಂಗೇರ, ಸಮಾಜ ಸೇವಕ ಗಣೇಶ್ ಪುತ್ರನ್, ಗೀತಾನಂದ ಫೌಂಡೇಶನ್ ನ ರವಿಕಿರಣ್, ಎಫ್ಎಸ್ಎಲ್ ಸಂಸ್ಥೆಯ ದಿನೇಶ ಸಾರಂಗ, ಅಡಿಟರ್ ಅರುಣ್ ಕುಮಾರ್, ಬ್ಯಾಂಕ್ ಮೆನೇಜರ್ ಶಶಿಧರ್ ಎಚ್.ಎಸ್., ಇಂಜಿನಿಯರ್ ಕೌಶಿಕ್ ಯಡಿಯಾಳ, ನಿಸರ್ಗ ಗೆಳೆಯರು ಸಿದ್ದಾಪುರದ ಪದಾಧಿಕಾರಿಗಳು, ರೀಪ್ ವಾಚ್ ಸಂಸ್ಥೆಯವರು, ಅಮಲ ಭಾರತ ಅಭಿಯಾನದ ಸದಸ್ಯರುಗಳಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.