ಕರಾವಳಿ

ಮಕ್ಕಳ ಕಳ್ಳರಿಂದ ಬೆಚ್ಚಿದ ಕುಂದಾಪುರ; ಬೆಳ್ವೆಯಲ್ಲಿ ವಿದ್ಯಾರ್ಥಿಗೆ ರಾಸಾಯನಿಕ ಸ್ಪ್ರೇ, ಕಿಡ್ನಾಪ್ ಯತ್ನ

Pinterest LinkedIn Tumblr

ಕುಂದಾಪುರ: ತನ್ನ ಮನೆಯಿಂದ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳ ತಂಡವೊಂದು ರಾಸಾಯನಿಕ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಅಪಹರಿಸಲು ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಮ್ಮೊಲ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. 5ನೇ ತರಗತಿ ವಿದ್ಯಾರ್ಥಿ (12 ವರ್ಷದ ಬಾಲಕ) ದುಷ್ಕರ್ಮಿಗಳಿಂದ ಕೊಂಚದರಲ್ಲೆ ಪಾರಾದವನು.

ಶನಿವಾರ ಬೆಳಿಗ್ಗೆ ಬಾಲಕ ಎಂದಿನಂತೆ ಮನೆಯಿಂದ ಶಾಲೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ನೀಲಿ ಬಣ್ಣದ ಓಮ್ನಿ ಕಾರು ಬಂದಿದ್ದು ಓಮ್ನಿಯಲ್ಲಿದ್ದವರು ಬಾಲಕನ್ನು ತಡೆದು ನಿಲ್ಲಿಸಿ ‘ನಿನ್ನನ್ನು ಶಾಲೆಗೆ ಬಿಡುತ್ತೇವೆ. ಓಮ್ನಿಯಲ್ಲಿ ಕೂರು’ ಎಂದಿದ್ದರೆನ್ನಲಾಗಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ವಿದ್ಯಾರ್ಥಿ ನಡೆದು ಮುಂದೆ ಸಾಗಿದಾಗ ಓಮ್ನಿ ಕಾರಿನಲ್ಲಿದ್ದವರು ವಾಹನವನ್ನು ತಿರುಗಿಸಿಕೊಂಡು ಬಂದಿದ್ದು ಯಾವುದೋ ರಾಸಾಯನಿಕವನ್ನು ಮೂಗಿಗೆ ಸ್ಪ್ರೇ ಮಾಡಿದ್ದಾರೆಂದು ಬಾಲಕ ತನ್ನ ದೂರಿನಲ್ಲಿ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾನೆ. ಇದಾದ ಬಳಿಕ ಬಾಲಕನು ಪ್ರಜ್ಞೆ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದು, ಅದೇ ಮಾರ್ಗವಾಗಿ ವಾಹನವೊಂದು ಬಂದ ಕಾರಣ ಓಮ್ನಿಯಲ್ಲಿದ್ದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು ಬಾಲಕನನ್ನು ಬೆಳ್ವೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಬಾಲಕನಿಗೆ ಸಿಂಪಡಿಸಿದ ಸ್ಪ್ರೇ ಬಾಟಲಿ ಸ್ಥಳದಲ್ಲಿ ಪತ್ತೆಯಾಗಿದ್ದು ಆ ರಾಸಾಯನಿಕವನ್ನು ಪರೀಕ್ಷೆಗಾಗಿ ಫೋರೆನ್ಸಿಕ್ ಘಟಕಕ್ಕೆ ಕಳುಹಿಸಲಾಗಿದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.