ಕುಂದಾಪುರ: ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಕಳುವಿನ ಬಾಗಿಲು ಎಂಬಲ್ಲಿ ಜಲಸಂಪನ್ಮೂಲ ಇಲಾಖೆಯಿಂದ 4 ಕೋಟಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಶಿಲಾನ್ಯಾಸ ಹಾಗೂ ತಲ್ಲೂರು ಕೋಟೆಬಾಗಿಲು ಎಂಬಲ್ಲಿ ಎಸ್ಸಿ ಎಸ್ಟಿ ಕಾಲೋನಿ ಅಭಿವೃದ್ಧಿಗೆ ವಾರಾಹಿ ಯೋಜನೆಯಡಿ ಬಿಡುಗಡೆಯಾದ 1 ಕೋಟಿ 25 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಹಲವು ವರ್ಷಗಳಿಂದ ಜನರು ಉಪ್ಪು ನೀರಿನ ಸಮಸ್ಯೆ ಅನುಭವಿಸುತ್ತಿದ್ದು ಕಿಂಡಿ ಅಣೆಕಟ್ಟಿನ ಕಾಮಗಾರಿ ಮುಗಿದ ಬಳಿಕ ಜನರ ಸಮಸ್ಯೆ ನಿವಾರಣೆಯಾಗಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಮೂರು ತಿಂಗಳಿನೊಳಗಾಗಿ ಈ ಕಾಮಗಾರಿ ಮುಗಿಯಲಿದೆ. ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಬೈಂದೂರು ಸಮಗ್ರ ಅಭಿವೃದ್ಧಿಯಾಗಿ ಮಾದರಿ ಕ್ಷೇತ್ರವಾಗಲಿದೆ ಎಂದರು.
ಇದೇ ವೇಳೆ ಕಾಮಗಾರಿಯನ್ನು ಇನ್ನಷ್ಟು ವಿಸ್ತರಿಸಿ ದಂಡೆ ನಿರ್ಮಾಣ ಮಾಡಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂತು. ಅದಕ್ಕಾಗಿ ತೆಂಗಿನ ಮರ ತೆರವು ಮಾಡಬೇಕಿದ್ದು ಜನರ ಸಹಕಾರ ಅಗತ್ಯವಾಗಿ ಬೇಕಿದೆ ಎಂದು ಸಂಬಂದಪಟ್ಟ ಗುತ್ತಿಗೆದಾರರು ಶಾಸಕರ ಗಮನಕ್ಕೆ ತಂದಿದ್ದು ಶಾಸಕರು ಜನರು ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾಮಗಾರಿ ಗುತ್ತಿಗೆದಾರರಾದ ರಾಜೇಶ್ ಕಾರಂತ, ರಘು ಶೆಟ್ಟಿ, ನ್ಯಾಯವಾದಿ ಟಿ.ಬಿ. ಶೆಟ್ಟಿ ಮೊದಲಾದವರು ಇದ್ದರು.