ಕರಾವಳಿ

41 ಲಕ್ಷ ವೆಚ್ಚದ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ ಉದ್ಘಾಟಿಸಿದ ಹೋಂ ಮಿನಿಸ್ಟರ್!

Pinterest LinkedIn Tumblr

ಕುಂದಾಪುರ: ಎಲ್ಲಿ ಶಾಂತಿ ನೆಲೆಸುತ್ತದೋ ಅಲ್ಲಿ ಮಾತ್ರ ಪ್ರಗತಿಯಾಗಲು ಸಾಧ್ಯ. ಶಾಂತಿ-ಸುವ್ಯವಸ್ಥೆಗೆ ಅತೀ ಹೆಚ್ಚಿನ ಒಲವನ್ನು ನೀಡಬೇಕಿದೆ. ಬೈಂದೂರು ಜನರು ಶಾಂತಿಪ್ರಿಯರು. ನಾವು ಶಾಂತಿಪ್ರಿಯ ಜನರಿಗೆ ರಕ್ಷಣೆ ಕೊಟ್ಟಾಗ ಇಡೀ ಸಮಾಜವು ಉತ್ತಮ ದಿಕ್ಕಿನತ್ತ ಸಾಗುತ್ತದೆ ಎಂದು ಗೃಹ ಸಚಿವ ಹಾಗೂ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಬೈಂದೂರು ಪೊಲೀಸ್ ಠಾಣೆಯ ಬಳಿ 41ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಪೊಲೀಸ್ ವೃತ್ತನಿರೀಕ್ಷಕರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

   

ಪೊಲೀಸರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಪೊಲೀಸರ ಸ್ಥಿತಿಗತಿಗಳನ್ನು ಸುಧಾರಣೆ ಮಾಡಿ, ಅವರ ಸೇವೆಗಳನ್ನು ಉತ್ತಮಗೊಳಿಸುವ ಮತ್ತು ಪೊಲೀಸರು ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಗಳನ್ನು ಬಲಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಲಿದ್ದು, ಪೊಲೀಸ್ ವ್ಯವಸ್ಥೆ ಬದಲಾಗುತ್ತಿದೆ. ಅಪರಾಧವನ್ನು ಕ್ಲಪ್ತ ಸಮಯದಲ್ಲಿ ಭೇದಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಪರಿಕಲ್ಪನೆಯನ್ನು ಹೊರತರಲು ಮುಂದಾಗಿದ್ದು, ಪೊಲೀಸರಿಗೆ ಬೇಕಾಗಿರುವ ಎಲ್ಲಾ ಅಗತ್ಯ ಪರಿಕರಗಳನ್ನು ಒದಗಿಸುತ್ತೇವೆ. ಒಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಬದ್ದವಾಗಿದೆ ಎಂದು ಗೃಹಸಚಿವ ಬೊಮ್ಮಾಯಿ ಹೇಳಿದರು.

ತಂತ್ರಜ್ಙಾನವನ್ನು ಜನರು ಹೆಚ್ಚೆಚ್ಚು ಉಪಯೋಗಿಸಿದಂತೆ ಅಪರಾಧಗಳು ಹೆಚ್ಚಾಗುತ್ತಾ ಹೋಗುತ್ತದೆ. ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಖಾತೆದಾರನಿಗೆ ಗೊತ್ತಿಲ್ಲದಂತೆ ಎಗರಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅದಕ್ಕಾಗಿಯೇ ಸೈಬರ್ ಕ್ರೈಂ ಅನ್ನು ಗಟ್ಟಿಗೊಳಿಸುವ ಕೆಲವನ್ನು ಮಾಡುತ್ತಿದ್ದೇವೆ. ಈಗಾಗಲೇ ಹಿರಿಯ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕೆಂದು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಜೊತೆಯಾಗಿ ಕೆಲಸ ಮಾಡಿ ಸಾಮಾನ್ಯ ಜನರು ಬೆವರು ಸುರಿಸಿ ದುಡಿದ ಹಣವನ್ನು ರಕ್ಷಣೆ ಮಾಡಬೇಕಿದೆ ಎಂದರು.

ಈ ಸಂದರ್ಭ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ಉಡುಪಿ ಶಾಸಕ ಕೆ. ರಘುಪತಿ ಭಟ್, ಭಟ್ಕಳ ಶಾಸಕ ಸುನೀಲ್ ನಾಯ್ಕ್, ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ತಾ.ಪಂ ಸದಸ್ಯೆ ಶ್ಯಾಮಲಾ ಕುಂದರ್, ಯಡ್ತರೆ ಗ್ರಾ.ಪಂ ಅಧ್ಯಕ್ಷೆ ಮುಕಾಂಬು ದೇವಾಡಿಗ, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಸಹಾಯಕ ಆಯುಕ್ತ ರಾಜು. ಕೆ, ಬೈಂದೂರು ತಹಶಿಲ್ದಾರ್ ಬಿ.ಪಿ ಪೂಜಾರ್, ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್, ಕಾರ್ಕಳ ಉಪವಿಭಾಗದ ಎಎಸ್ಪಿ ಕೃಷ್ಣಕಾಂತ್, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಜಿ. ನಾಯ್ಕ್, ಪಿ‌ಎಸ್‌ಐ ತಿಮ್ಮೇಶ್ ಬಿ‌ಎನ್ ಮೊದಲಾದವರು ಮೊದಲಾದವರಿದ್ದರು.

ನೂರು ವರ್ಷದ ಇತಿಹಾಸವುಳ್ಳ ಬೈಂದೂರು ಠಾಣೆ!
ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಬೈಂದೂರು ಪೊಲೀಸ್ ಠಾಣೆಯು ಯಡ್ತರೆ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದೆ. ದಾಖಲಾತಿಯ ಪ್ರಕಾರ 1919 ರಲ್ಲಿ ಆರಂಭವಾಗಿದ್ದು. ಅಂದಿನ ದಿನದಲ್ಲಿ ಕಟ್ಟಡವು 2,276/- ರೂ ವೆಚ್ಚದಲ್ಲಿ ಹಂಚಿನ ಕಟ್ಟಡದಲ್ಲಿ ನಿರ್ಮಾಣಗೊಂಡು ತದನಂತರದಲ್ಲಿ ಕಾಲಕಾಲಕ್ಕೆ ನವೀಕರಣಗೊಂಡಿದೆ. 26/09/2006 ರಲ್ಲಿ ಕೆ.ಎಲ್.ಎಸಿ.ಲಿ [ಕರ್ನಾಟಕ ಲ್ಯಾಂಡ್ ಆರ್ಮಿ ಕಾರ್ಫೋರೇಷನ್] ವತಿಯಿಂದ ಹೊಸ ಕಟ್ಟಡ 12,0000/-ರೂ ವೆಚ್ಚದಲ್ಲಿ ನಿರ್ಮಾಣಗೊಂಡು ಪ್ರಸ್ತುತ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಪ್ರಸ್ತುತ ಬೈಂದೂರು ಪೊಲೀಸ್ ಠಾಣೆಯ ಕಟ್ಟಡವು 1200 ಚದರ ಅಡಿ ವಿಸ್ತೀರ್ಣದಲ್ಲಿ ಕೆ.ಎಲ್.ಎಸಿ.ಲಿ [ಕರ್ನಾಕ ಲ್ಯಾಂಡ್ ಆರ್ಮಿ ಕಾರ್ಪೋರೇಷನ್] ವತಿಯಿಂದ 2006 ರಲ್ಲಿ ನಿರ್ಮಾಣಗೊಂಡಿರುತ್ತದೆ.

ಬೈಂದೂರು ವೃತ್ತ ಕಛೇರಿ….
ಬೈಂದೂರು ವೃತ್ತ ಕಛೇರಿಯು ಈ ಹಿಂದಿನ ಪೊಲೀಸ್ ಠಾಣೆಯ ಉಳಿಕೆಯ ಒಂದು ಕೊಠಡಿಯಾಗಿದ್ದು ಸುಮಾರು 450 ಚದರ ಅಡಿ ಇದೆ. ನಂತರದಲ್ಲಿ ಸ್ಥಳೀಯ ದಾನಿಗಳಿಂದ ಕಟ್ಟಡಕ್ಕೆ ಆರ್.ಸಿ.ಸಿ ಹಾಕಿದ್ದು ಕಾರ್ಯ ನಿರ್ವಹಿಸುತ್ತಿದ್ದು ತದನಂತರದಲ್ಲಿ 2014-15 ನೇ ಸಾಲಿನಲ್ಲಿ ಹೊಸತಾಗಿ ರೂ 1,00000/- ಅನುದಾನದಲ್ಲಿ ಹೆಚ್ಚುವರಿ ಒಂದು ಕೊಠಡಿಯ ನಿರ್ಮಾಣಗೊಂಡಿತ್ತು. ಪ್ರಸ್ತುತ ಕರ್ನಾಟಕ ರಾಜ್ಯ ಗೃಹ ನಿರ್ಮಾಣ ಮಂಡಳಿ ಮಂಗಳೂರು ಉಪವಿಭಾಗ ವತಿಯಿಂದ ರೂ 41,0000/- ವೆಚ್ಚದಲ್ಲಿ 0.32 ಸೆಂಟ್ಸ್ ಜಾಗದಲ್ಲಿ 1300 ಚದರ ಅಡಿಯಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು ಗೃಹ ಮಂತ್ರಿಗಳಿಂದ ಉದ್ಘಾಟನೆಗೊಂಡಿದೆ. ಕಟ್ಟಡದ ಗುತ್ತಿಗೆದಾರರು ಪ್ರಮೋದ ಶೆಟ್ಟಿ ಎನ್ನುವರಾಗಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.