ಕರಾವಳಿ

ಉಡುಪಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಶತಾಯುಷಿ ಗುರವ ಕೊರಗರಿಗೆ ಸನ್ಮಾನ

Pinterest LinkedIn Tumblr

ಉಡುಪಿ: ಕ್ರೌಂಚ ಪಕ್ಷಿಗಳ ಸಾವಿನ ಘಟನೆ ಕಂಡು ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿದರು ಅದರಂತೆ ಸುತ್ತಮುತ್ತ ನಡೆಯುವ ಘಟನೆಗಳನ್ನು ಅರಿಯುವ ಮೂಲಕ ಜೀವನದಲ್ಲಿ ಪರಿವರ್ತನೆ ಹೊಂದಿ ಮಹತ್ತರ ಸಾಧನೆಗಳನ್ನು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ. ಅವರು ಭಾನುವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಉಡುಪಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಠ ವರ್ಗಗಳ ಸಂಘಟನೆ ಗಳ ಸಹಯೋಗದಲ್ಲಿ ನಡೆದ , ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಳವರ್ಗದ ಬೇಡನಾದ ರತ್ನಾಕರ ಅವರು ಪರಿವರ್ತನೆ ಹೊಂದಿ ಮಹರ್ಷಿ ವಾಲ್ಮೀಕಿ ಆಗಿ ಬದಲಾಗಿ ರಾಮಾಯಣ ಮಹಾಗ್ರಂಥ ರಚಿಸಿದರು, ಪ್ರಸ್ತುತ ಸಮಾಜದಲ್ಲಿನ ಹಿಂದುಳಿದ ವರ್ಗಗಳ ಜನತೆ , ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ದಿನಕರ ಬಾಬು ಹೇಳಿದರು.

ಶ್ರೀ ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದ , ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೊವಾಡಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಆದಿಕವಿ ಮಾತ್ರವಲ್ಲದೇ, ಮಹಾನ್ ದಾರ್ಶನಿಕ, ಚಿಂತಕ , ಶಿಕ್ಷಣ ತಜ್ಞ,ರಾಜನೀತಿ ತಜ್ಞ ಹಾಗೂ ವಿಶ್ವ ಮಾನವರಾಗಿದ್ದರು. ಸುಮಾರು 2000 ವರ್ಷಗಳ ಹಿಂದೆ ಮಹರ್ಷಿ ವಾಲ್ಮೀಕಿ ಅವರಿಂದ ರಚಿತವಾದ ರಾಮಾಯಣದಲ್ಲಿ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ,ನದಿಗಳು ಅನಾವರಣಗೊಂಡಿವೆ, ರಾಜಧರ್ಮ, ಕುಲಧರ್ಮ, ಯುದ್ದ ಧರ್ಮಗಳಿಗೆ ಹೊಸ ಆಯಾಮ ರಾಮಾಯಣದಲ್ಲಿದೆ, ತಮ್ಮ ಕಾಲಿನ ಮೌಲ್ಯಗಳ ಜೊತೆಗೆ ಭವಿಷ್ಯದ ಮೌಲ್ಯಗಳನ್ನು ಸಾರುವ ಮೂಲಕ ರಾಮಾಯಣ ಇಂದಿಗೂ ಪ್ರಸ್ತುತವಾಗಿದೆ.

ರಾಮಾಯಣದಲ್ಲಿ ಪ್ರಕೃತಿ ವರ್ಣನೆ, ಪ್ರಜಾಪ್ರಭುತ್ವದ ಅಂಶಗಳು, ವಿಶ್ವ ಭ್ರಾತೃತ್ವದ ಸಂದೇಶಗಳಿದ್ದು ನಿರಂತರ ಅಧ್ಯಯನಶೀಲ ಗ್ರಂಥವಾಗಿದೆ, ರಾಮಾಯಣದಲ್ಲಿನ ಸಂದೇಶ , ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯನ್ನು ಸಾರುತ್ತಿದ್ದು , ಅದರಲ್ಲಿನ ವಿಶ್ವಮಾನವ ಸಂದೇಶಗಳ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣವಾಗಬೇಕು ಎಂದರು.

ಪರಿಶಿಷ್ಟ ವರ್ಗದ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿದ, ಬೊಗ್ರ ಕೊರಗ, ಅಶೋಕ್ ಶೆಟ್ಟಿ, ಶ್ರೀಧರ ಗೌಡ,ಮೀರಾ ನಾಯಕ್ ಹಾಗೂ ಕೃಷ್ಣ ಇವರನ್ನು ಸನ್ಮಾನಿಸಲಾಯಿತು. ಶತಾಯುಷಿ ಗುರವ ಕೊರಗ ಅವರನ್ನು ಅಭಿನಂದಿಸಲಾಯಿತು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸವಲತ್ತುಗಳ ವಿತರಣೆ ಹಾಗೂ ಪ.ವರ್ಗದ ಕಲಾತಂಡಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು.

ಯೋಜನಾ ಸಮನ್ವಯಾಧಿಕಾರಿ ಹಾಕಪ್ಪ ಲಮಾಣಿ ಸ್ವಾಗತಿಸಿದರು, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

Comments are closed.