ಕರಾವಳಿ

ಅನಾರೋಗ್ಯದಿಂದ ಪತ್ರಕರ್ತ ಸುಭಾಶ್ಚಂದ್ರ ಕೆದೂರು ನಿಧನ

Pinterest LinkedIn Tumblr

ಕುಂದಾಪುರ: ಉದಯವಾಣಿ ದಿನಪತ್ರಿಕೆಯ ಉಪಸಂಪಾದಕ/ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಯುವ ಪತ್ರಕರ್ತ, ಬಹುಮುಖ ಪ್ರತಿಭೆ ಸಂಪನ್ನ ಸುಭಾಶ್ಚಂದ್ರ ಕೆದೂರು (42) ಅಸೌಖ್ಯದಿಂದ ಅ. 10ರಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿಯಾದ ಕುಂದಾಪುರ ತಾಲೂಕು ಕೆದೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಗೀತಾ, ತಾಯಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೊದಲು ಇಲೆಕ್ಟ್ರೀಶಿಯನ್ ಆಗಿದ್ದ ಸುಭಾಶ್ಚಂದ್ರ ಅವರು ಬೆಂಗಳೂರಿನಲ್ಲಿ ಹೊಟೇಲ್ ಉದ್ಯೋಗಿಯಾಗಿ ಪತ್ರಿಕೋದ್ಯಮ ಕೋರ್ಸ್ ಓದಿದ್ದರು. ಕೆಲ ಕಾಲ ಬೆಂಗಳೂರಿನ ‘ಹಾಯ್ ಮಿತ್ರ’ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ ಅವರು ಸ್ವಲ್ಪ ಸಮಯ ‘ಉಷಾಕಿರಣ’ದಲ್ಲಿ ವರದಿಗಾರರಾಗಿದ್ದರು. ನಾಟಕ ರಚನೆ, ನಿರ್ದೇಶನದಲ್ಲಿಯೂ ಪ್ರತಿಭೆ ಹೊಂದಿದ್ದರು. ಸ್ಥಳೀಯವಾಗಿ ನಡೆಯುತ್ತಿದ್ದ ಗಣೇಶೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ತಾನೇ ನಾಟಕ ರಚಿಸಿ ನಿರ್ದೇಶನ ನೀಡುತ್ತಿದ್ದರು. ಯಕ್ಷಗಾನ ಕಲೆಯಲ್ಲೂ ಕೈಯಾಡಿಸಿದ್ದ ಸುಭಾಶ್ಚಂದ್ರ ಅವರು, ಪ್ರಸಂಗ ರಚಸಿ, ನಿರ್ದೇಶನ ನೀಡುತ್ತಿದ್ದರು. ಮಾತಿಗೆ ಪ್ರಾಧಾನ್ಯ ಇರುವ ಯಕ್ಷಗಾನದ ಪಾತ್ರಗಳನ್ನು ನಿರ್ವಹಿಸಿದ್ದರು.

ಪತ್ರಿಕಾ ರಂಗದ ಸಹೋದ್ಯೋಗಿಗಳ ಜತೆ ಸೌಹಾರ್ದದಿಂದ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆಯಲ್ಲಿ ಹಿಡಿತ ಸಾದಿಸಿದ್ದರು. ವಿಶೇಷ ಸುದ್ದಿ, ಗ್ರಾಮೀಣ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿ, ಮಾರುಕಟ್ಟೆ ಆಧಾರಿತಸುದ್ದಿಗಳನ್ನು ಸಿದ್ಧಪಡಿಸುವಲ್ಲಿ ಪರಿಣತರಾಗಿದ್ದರು. ‘ಉದಯವಾಣಿ’ ಉಡುಪಿ, ಮಣಿಪಾಲದಲ್ಲಿ 2005ರಿಂದ 2015ರವರೆಗೆ ಉಪಸಂಪಾದಕ/ ವರದಿಗಾರರಾಗಿ ಸೇವೆ ಸಲ್ಲಿಸಿದ ಅವರಿಗೆ ಬಳಿಕ ಅಸೌಖ್ಯ ಉಂಟಾಯಿತು. ಮೂರು ವರ್ಷಗಳಿಂದ ಚಿಕಿತ್ಸೆಯಲ್ಲಿದ್ದ ಸುಭಾಶ್ಚಂದ್ರ ಹಠಾತ್ ಆಗಿ ಹೃದಯಾಘಾತದಿಂದ ನಿಧನ ಹೊಂದಿದರು.
‘ಉದಯವಾಣಿ’ ಸಂಪಾದಕ ಅರವಿಂದ ನಾವಡ ಮತ್ತಿತರ ಸಹೋದ್ಯೋಗಿಗಳು ಆಸ್ಪತ್ರೆ ಮತ್ತು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಉಡುಪಿ, ಕುಂದಾಪುರ, ಬ್ರಹ್ಮಾವರ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದರು.

Comments are closed.