ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಪ್ಲಾಸ್ಟಿಕ್ ನಿಷೇಧ- ಡಿಸಿ ಜಗದೀಶ್

Pinterest LinkedIn Tumblr

ಉಡುಪಿ: ಜಿಲ್ಲೆಯ ಎಲ್ಲಾ ನಗರ ಸ್ಥಳಿಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ಗಳು ಸೇರಿದಂತೆ ಜಿಲ್ಲಾದ್ಯಂತ ಅಕ್ಟೋಬರ್ 2 ರ ನಂತರ ಪ್ಲಾಸ್ಟಿಕ್ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಸುವ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಅವರು ಉಡುಪಿ ನಗರಸಭೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಸೆಪ್ಟಂಬರ್ 27 ರಿಂದ ಅಕ್ಟೋಬರ್ 2 ರ ವರೆಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸಲಾಗುವುದು, ಈ ಅವಧಿಯಲ್ಲಿ ಯಾವುದೇ ಅಂಗಡಿ, ಸಗಟು ವ್ಯಾಪಾರಿ, ಚಿಲ್ಲರೆ ವ್ಯಾಪಾರಿ ಬಳಿ ಇರುವ ಪ್ಲಾಸ್ಟಿಕ್ ನ್ನು ವಶಪಡಸಿಕೊಳ್ಳಲಾಗುವುದು ಹಾಗೂ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ತೆರವುಗೊಳಿಸಲಾಗುವುದು ಮತ್ತು ಮನೆ ಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲಾಗುತ್ತದೆ , ಅಕ್ಟೋಬರ್ 2 ರ ನಂತರ ಸಹ ಪ್ಲಾಸ್ಟಿಕ್ ಕಂಡು ಬಂದಲ್ಲಿ ಅಂತಹವರ ವಿರುದ್ದ ಪ್ಲಾಸ್ಟಿಕ್ ನಿಷೇಧ ಕಾಯ್ದೆಯಲ್ಲಿ ಸೂಚಿಸಿರುವ ದಂಡನಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದರು.

ಕೇಂದ್ರ ಸರ್ಕಾರ ಸಹ ಪ್ಲಾಸ್ಟಿಕ್ ನಿಷೇದ ಕುರಿತು ಸೂಚನೆ ನೀಡಿದ್ದು, ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮ ರೂಪಿಸಿದೆ, ಜಿಲ್ಲೆಯಾದ್ಯಂತ ಅಕ್ಟೋಬರ್ 2 ರಂದು ಬೃಹತ್ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಪ್ಲಾಸ್ಟಿಕ್ ನಿಷೇಧ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದ್ದು, ಪ್ಲಾಸ್ಟಿಕ್ ನಿಂದ ವಸ್ತುಗಳನ್ನು ತಯಾರಿಸುವವರು, ಸರಬರಾಜು ಮಾಡುವವರು, ಸಂಗ್ರಹಣೆ ಮಾಡುವವರು, ಸಾಗಾಟ ಮಾಡುವವವರು, ಮಾರಾಟ ಮತ್ತು ವಿತರಣೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು, ಯಾವುದೇ ರೀತಿಯ ಪ್ಲಾಸ್ಟಿಕ್ ಕವರ್ ಗಳ ಬಳಕೆಯನ್ನು ನಿಷೇಧಿಸಿದ್ದು, ಸಾರ್ವಜನಿಕರು ಬಟ್ಟೆಯ ಕೈ ಚೀಲಗಳನ್ನು ಬಳಸುವಂತೆ ಡಿಸಿ ಹೇಳಿದರು.

ಫ್ಲೆಕ್ಸ್ ಮುದ್ರಿಸುವವರು, ಅಳವಡಿಸುವವರ ವಿರುದ್ದ ಮತ್ತು ಬೊಕ್ಕೆಗಳ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸುವ ವ್ಯಾಪಾರಿಗಳ ವಿರುದ್ದ ಸಹ ಕ್ರಮ ಕೈಗೊಳ್ಳಲಾಗುವುದು ಎಂದ ಡಿಸಿ, ಮೊದಲನೇ ಬಾರಿ ನಿಷೇಧ ಉಲ್ಲಂಘಿಸಿದರೆ 1000 , 2 ನೇ ಬಾರಿ ಉಲ್ಲಂqಘಿಸಿದರೆ 2000 ಮತ್ತು 3 ನೇ ಬಾರಿ ಉಲ್ಲಂಘಿಸಿದರೆ ಅಂತಹ ಪ್ಲಾಸ್ಟಿಕ್ ವಸ್ತು ತಯಾರಕರು, ಮಾರಾಟಗಾರರು, ಸಂಗ್ರಹಗಾರರು, ಮಾರಾಟ ಮಾಡುವವರ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲಾಗುವುದು ಹಾಗೂ ಬೇರೆಡೆಯಿಂದ ವಾಹನಗಳಲ್ಲಿ ಪ್ಲಾಸ್ಟಿಕ್ ವಸ್ತು ತರಿಸಿಕೊಂಡರೆ ಅಂತಹ ವಾಹನ ಮಾಲೀಕರು ಮತ್ತು ವಾಹನದ ಮೇಲೂ ಸಹ ಮೊಕದ್ದಮೆ ದಾಖಲು ಮಾಡಲಾಗುವುದು ಅಲ್ಲದೇ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ಸಮರ್ಪಕವಾಗಿ ತರುವಲ್ಲಿ ವೈಫಲ್ಯ ಹೊಂದುವವವರ ವಿರುದ್ದ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಾದ್ಯಂತ ಸ್ಥಳೀಯಾಡಳಿತಗಳು ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ನಿಗಧಿತ ಸ್ಥಳದಲ್ಲಿ ಮಾತ್ರ ಜಾಹೀರಾತು ಮತ್ತು ಪೋಸ್ಟರ್ ಅಳವಡಿಕೆ ಬಗ್ಗೆ ಮತ್ತು ಕಡ್ಡಾಯವಾಗಿ ಬಟ್ಟೆ ಅಥವಾ ಪರಿಸರ ಸ್ನೇಹಿ ವಸ್ತುನಿಂದ ತಯಾರಾದ ಜಾಹೀರಾತುಗಳನ್ನು ಸಂಬಂದಪಟ್ಟವರಿಂದ ಸೂಕ್ತ ಅನುಮತಿ ಪಡೆದು ಅಳವಡಿಸುವಂತೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಜಾಹೀರಾತು ಅಳವಡಿಸದಂತೆ ಸೂಚಿಸಿದರು.
ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಉಪಸ್ಥಿತರಿದ್ದರು.

Comments are closed.