ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ ರೂ.30.29 ಕೋಟಿ ಲಾಭ, ಶೇ.9.00 ಡಿವಿಡೆಂಡ್ ಘೋಷಣೆ

Pinterest LinkedIn Tumblr

ಮಂಗಳೂರು: ಒಂದು ಶತಮಾನದಷ್ಟು ಸುದೀರ್ಘ ಇತಿಹಾಸವನ್ನು ತನ್ನಲ್ಲಿಟ್ಟುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಆಧುನಿಕ ಬ್ಯಾಂಕಿಂಗ್ ಸೇವೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದೆ. ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನ ಮನ್ನಣೆ ಗಳಿಸಿ ‘ಜನಸ್ನೇಹಿ’ ಬ್ಯಾಂಕ್ ಎನ್ನುವ ಪ್ರೀತಿ ವಿಶ್ವಾಸಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ. ಬ್ಯಾಂಕ್ ಸಹಕಾರಿ ರಂಗದಲ್ಲಿ ವಿಶಿಷ್ಠ ವಿನೂತನ ಸಾಧನೆಯೊಂದಿಗೆ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಗಿ ಜನಾನುರಾಗಿಯಾಗಿದೆ. 2018-19ನೇ ಸಾಲಿನಲ್ಲಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ ರೂ.30.29 ಕೋಟಿ ಲಾಭಗಳಿಸಿ ತನ್ನ ಸದಸ್ಯ ಸಂಘಗಳಿಗೆ ಶೇ.9.00 ಡಿವಿಡೆಂಡ್‌ನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ|| ಎಂ.ಎನ್. ರಾಜೇಂದ್ರ ಕುಮಾರ್‌ರವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಅವರು ಬ್ಯಾಂಕಿನ ಸಭಾಭವನದಲ್ಲಿ ನಡೆದ 105 ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ತತ್ವದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧನೆಯ 105 ವರ್ಷಗಳನ್ನು ಪೂರೈಸಿ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ವರದಿ ವರ್ಷದಲ್ಲಿ ಬ್ಯಾಂಕ್ ಸಾಧಿಸಿದ ಯಶಸ್ಸು ಅಭೂತಪೂರ್ವವಾದದ್ದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನೇ ದಿನೇ ಸ್ಪರ್ಧೆಯನ್ನು ಎದುರಿಸಿದರೂ ಬ್ಯಾಂಕ್ ಅಭಿವೃದ್ಧಿಯ ಪಥವನ್ನು ಕಂಡು ದೇಶದ ಅಗ್ರಮಾನ್ಯ ಸಹಕಾರಿ ಬ್ಯಾಂಕ್ ಎನಿಸಿಕೊಂಡಿದೆ ಎಂದರು.

ಹೊಸ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಟರ್‌ನೆಟ್, ಕೋರ್ ಬ್ಯಾಂಕಿಂಗ್‌ನಂತಹ ಉನ್ನತ ಸೇವೆಯು ಬ್ಯಾಂಕಿನ 105 ಶಾಖೆಗಳಲ್ಲಿ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇಂಟರ್ ಬ್ಯಾಂಕಿಂಗ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆಯನ್ನು ಹಾಗೂ ಇಂಟರ್ ಬ್ಯಾಂಕಿಂಗ್ ಸೇವೆಯನ್ನು ರೂಪಿಸಲು ಬ್ಯಾಂಕ್ ಮುಂದಾಗಿದೆ ಎಂದು ಅವರು ಮಹಾಸಭೆಯಲ್ಲಿ ತಿಳಿಸಿದರು.

ಗುರಿ ಮೀರಿದ ಸಾಧನೆ:
ಸುದೀರ್ಘ ಕಾಲ ಸಾರ್ವಜನಿಕ ಸೇವೆಯಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು ರೂ.7588.89 ಕೋಟಿ ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಾತಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ಬ್ಯಾಂಕ್ 105 ಶಾಖೆಗಳ ಮೂಲಕ ಒಟ್ಟು ರೂ.3886.57 ಕೋಟಿ ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ ಎಂದರು.

ಸ್ಪರ್ಧಾತ್ಮಕ ಆರ್ಥಿಕ ಹಿನ್ನಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.3,014.18 ಕೋಟಿ ಮುಂಗಡ ನೀಡಿದೆ. 977 ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು ಪಾಲು ಬಂಡವಾಳ ರೂ.178.55 ಕೋಟಿ, ಬ್ಯಾಂಕಿನ ದುಡಿಯುವ ಬಂಡವಾಳ ರೂ.5421.44ಕೋಟಿ, ಬ್ಯಾಂಕ್ ರೂ.111.19 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು.

ಸಾಲ ವಸೂಲಾತಿಯಲ್ಲಿ ದಾಖಲೆ:
ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ ನೂರರ ವಸೂಲಾತಿಯನ್ನು ಕಂಡಿದೆ. ಇಂತಹ ಸಾಧನೆಯನ್ನು ಬ್ಯಾಂಕ್ ಕಳೆದ 24 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 18 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ ನೂರರ ಸಾಧನೆ ಮಾಡಿದೆ ಎಂದು ಮಹಾಸಭೆಯಲ್ಲಿ ಅವರು ತಿಳಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸಂಘಟನೆಯಲ್ಲೂ ಬ್ಯಾಂಕ್ ಮುಂಚೂಣಿಯಲ್ಲಿದೆ. ಈ ಬ್ಯಾಂಕ್ ಒಟ್ಟು 32,532 ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ ರೂ.104.54 ಕೋಟಿ. ಒಟ್ಟು 32,250 ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, ಇದರಲ್ಲಿ ರೂ.165.57 ಕೋಟಿ ಸಾಲ ಹೊರಬಾಕಿ ಇರುತ್ತದೆ.

ಅಪೆಕ್ಸ್/ನಬಾರ್ಡ್ ಪ್ರಶಸ್ತಿ:

ಜನಪರ ಯೋಜನೆಗಳೊಂದಿಗೆ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೇಶದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸರ್ವಾಂಗೀಣ ನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ 19 ಬಾರಿ ದೊರೆತ್ತಿರುವುದು ಬ್ಯಾಂಕ್‌ನ ಕಾರ್‍ಯ ಸಾಧನೆಗೆ ಸಂದ ಪುರಸ್ಕಾರ. ಸ್ವಸಹಾಯ ಗುಂಪುಗಳ ನಿರ್ವಹಣೆಗೂ ನಬಾರ್ಡ್ ಪ್ರಶಸ್ತಿ 17 ಬಾರಿ ಬ್ಯಾಂಕಿಗೆ ದೊರೆತ್ತಿದೆ ಎಂದು ಅವರು ತಿಳಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ರೂ.೫೦ಲಕ್ಷ:
ನೆರೆಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ನಿಧಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ರೂ.50ಲಕ್ಷ ಹಾಗೂ ಬ್ಯಾಂಕಿನ ಸಿಬ್ಬಂಧಿಗಳ ವತಿಯಿಂದ ರೂ.10.59 ಲಕ್ಷವನ್ನು ನೀಡುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್ ರಾಜೇಂದ್ರ ಕುಮಾರ್‌ರವರು ಮಹಾಸಭೆಯಲ್ಲಿ ಘೋಷಣೆ ಮಾಡಿದರು. ಬ್ಯಾಂಕ್ ಸೇರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳ ವತಿಯಿಂದ ಒಟ್ಟು ರೂ.1.00 ಕೋಟಿಗೂ ಮಿಕ್ಕಿ ದೇಣಿಗೆಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ನಿಧಿಗೆ ನೀಡುವುದಾಗಿ ತಿಳಿಸಿದರು.

ಸಹಕಾರ ಅಧ್ಯಯನ ಪೀಠ ಸ್ಥಾಪನೆ:
ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವ ದೃಷ್ಠಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಕಾರ ಅಧ್ಯಯನ ಪೀಠವನ್ನು ಬ್ಯಾಂಕ್ ವತಿಯಿಂದ ಸ್ಥಾಪಿಸಲಾಗುವುದು ಎಂದರು.

ಸನ್ಮಾನ ಪುರಸ್ಕಾರ:
ಈ ಸಂದರ್ಭದಲ್ಲಿ 2018-19ನೇ ಸಾಲಿನಲ್ಲಿ ಶೇ.100ರ ವಸೂಲಾತಿಯಲ್ಲಿ ಸಾಧನೆಗೈದ 18 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಮಾಡಲಾಯಿತು. ಲೆಕ್ಕ ಪರಿಶೋಧನಾ ಅ ವರ್ಗ ಮತ್ತು ಬಿ ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಆಯ್ದ ತಲಾ 3 ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ 2018-19ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

2018-19ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿಯನ್ನು 76 ಸಹಕಾರಿ ಸಂಘಗಳು, 2017-18ನೇ ಸಾಲಿನ ಅಪೆಕ್ಸ್ ಬ್ಯಾಂಕಿನ ಪ್ರಶಸ್ತಿಯನ್ನು 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಡೆದಿವೆ. 2018-19ನೇ ಸಾಲಿನ ಪತ್ತಿನ ಸಹಕಾರಿ ಬ್ಯಾಂಕ್ ಪ್ರಶಸ್ತಿಯನ್ನು 6ಪತ್ತಿನ ಸಹಕಾರಿ ಬ್ಯಾಂಕ್‌ಗಳಿಗೆ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ನೀಡುವ ಪ್ರಶಸ್ತಿಯನ್ನು4 ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರಶಸ್ತಿಗೆ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ತಲಾ 3 ಸಂಘಗಳು ಪ್ರಶಸ್ತಿಯನ್ನು ಪಡೆದಿವೆ. ಮಹಿಳಾ ಹಾಲು ಉತ್ಪಾದಕರ ಸಂಘಗಳ ಪೈಕಿ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ತಲಾ 3 ಸಂಘಗಳಿಗೆ, ವಿವಿಧೋದ್ದೇಶ ಸಹಕಾರ ಸಂಘಗಳಿಗೆ ನೀಡುವ ಪ್ರಶಸ್ತಿಯನ್ನು 9 ಸಹಕಾರಿ ಸಂಘಗಳು ಸ್ವೀಕರಿಸಿಕೊಂಡಿವೆ.

2018-19ನೇ ಸಾಲಿನ ಜಿಲ್ಲಾ ಬ್ಯಾಂಕ್ ಪ್ರಶಸ್ತಿಗೆ 4 ರೈತ ಸೇವಾ ಕೂಟದ ಮುಖ್ಯ ಸಂಯೋಜಕರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಮಾತ್ರವಲ್ಲ ವರದಿ ವರ್ಷದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ 5 ಸಿಬ್ಬಂದಿಗಳು ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ 12 ಮಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿವೃತ್ತಿಯನ್ನು ಹೊಂದಿದ್ದು ಇವರಿಗೆ ಬ್ಯಾಂಕಿನಿಂದ ತಲಾ 50,೦೦೦/-ವನ್ನು ನೀಡಿ ಗೌರವಿಸಲಾಯಿತು. ಬ್ಯಾಂಕಿನ ಪ್ರಗತಿಯಲ್ಲಿ ಗುರಿ ಮೀರಿದ ಸಾಧನೆಗೈದ 25 ಶಾಖಾ ವ್ಯವಸ್ಥಾಪಕರುಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.

ಈ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ, ಶ್ರೀ ಬಿ. ನಿರಂಜನ್, ಶ್ರೀ ಟಿ.ಜಿ. ರಾಜಾರಾಮ್ ಭಟ್, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಶ್ರೀ ಎಂ. ವಾದಿರಾಜ ಶೆಟ್ಟಿ, ಶ್ರೀ ಕೆ.ಎಸ್. ದೇವರಾಜ್, ಶ್ರೀ ರಾಜು ಪೂಜಾರಿ, ಶ್ರೀ ಶಶಿಕುಮಾರ್ ರೈ ಬಿ, ಶ್ರೀ ಎಸ್.ಬಿ. ಜಯರಾಮ ರೈ, , ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಕೆ.ಹರೀಶ್ಚಂದ್ರ, ಶ್ರೀ ಎಂ.ಮಹೇಶ್ ಹೆಗ್ಡೆ, ಶ್ರೀ ಕೆ.ಜೈರಾಜ್ ಬಿ,ರೈ, ಶ್ರೀ ಬಿ.ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಸದಾಶಿವ ಉಳ್ಳಾಲ್, ಶ್ರೀ ಬಿ. ರಾಜೇಶ್ ರಾವ್, ಸಹಕಾರಿ ಸಂಘಗಳ ಉಪನಿಬಂಧಕರುಗಳಾದ ಶ್ರೀ ಬಿ.ಕೆ. ಸಲೀಂ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರವೀಂದ್ರ ಬಿ, ಮಹಾ ಪ್ರಬಂಧಕರಾದ ಶ್ರೀ ಗೋಫಿನಾಥ್ ಭಟ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು,

ಬ್ಯಾಂಕಿನ ನಿರ್ದೇಶಕರಾದ ಶ್ರೀ ಟಿ.ಜಿ.ರಾಜಾರಾಮ್ ಭಟ್ ಸ್ವಾಗತಿಸಿದರು. ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರವೀಂದ್ರ ಬಿ. ವಂದಿಸಿದರು. ಮಹಾ ಪ್ರಬಂಧಕರಾದ ಶ್ರೀ ಗೋಪಿನಾಥ್ ಭಟ್ ಇವರು ಕಾರ್ಯಕ್ರಮ ನಿರೂಪಿಸಿದರು.

Comments are closed.