ಕರಾವಳಿ

ಉತ್ತರ ಕನ್ನಡದ ಭಟ್ಕಳ ಭಾಗದಲ್ಲಿ, ತುಮಕೂರು ಜಿಲ್ಲೆ ಭಾರೀ ಮಳೆ

Pinterest LinkedIn Tumblr


ಕಾರವಾರ/ತುಮಕೂರು: ಉತ್ತರ ಕನ್ನಡ, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ಶನಿವಾರ ವರುಣ ಅಬ್ಬರಿಸಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದದಲ್ಲಿ ಬೆಳಗಿನಿಂದ ಕೈ ಕೊಟ್ಟಿದ್ದ ವರುಣ ಮಧ್ಯಾಹ್ನದ ನಂತರ ಅಬ್ಬರ ಹೆಚ್ಚಿಸಿಕೊಂಡನು. ಕಾರವಾರ, ಕುಮಟಾ, ಅಂಕೋಲ, ಭಟ್ಕಳ ಭಾಗದಲ್ಲಿ ಮಧ್ಯಾಹ್ನದ ವೇಳೆ ಭಾರೀ ಮಳೆಯಾಗಿದೆ. ಕುಮಟಾ ತಾಲೂಕಿನ ಗೋಕರ್ಣ ಭಾಗದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಸವಾರರು ಪರದಾಡುವಂತಾಯಿತು.

ಕಾರವಾರದಲ್ಲಿಯೂ ಸಹ ಹಲವು ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿತ್ತು. ಮಕ್ಕಳಿಗೆ ತೊಂದರೆ ಆಗುತ್ತೆ ಎಂಬುದನ್ನ ಅರಿತ ಕಡಲಸಿರಿ ಯುವ ಸಂಘದ ಸದಸ್ಯರು ಶಾಲೆಗೆ ಆಗಮಿಸಿ ನೀರನ್ನು ಹೊರ ಹಾಕಿ ಆವರಣವನ್ನು ಶುಚಿಗೊಳಿಸಿದರು.

ತುಮಕೂರು ಜಿಲ್ಲೆಯ ಹಲವೆಡೆ ವರುಣ ಅಬ್ಬರಿಸಿದ್ದು, ತುಮಕೂರು ನಗರ, ಗುಬ್ಬಿ, ಕೊರಟಗೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಸುಮಾರು 10 ನಿಮಿಷಗಳ ಕಾಲ ಜೋರು ಮಳೆಯಾಗಿದ್ದು, ರೈತರಲ್ಲಿ ಖುಷಿ ತಂದಿದೆ.

ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ವರುಣ ಭಾರೀ ಆವಾಂತರ ಸೃಷ್ಟಿಸಿದ್ದಾನೆ. ಮಹಾಮಳೆಗೆ ಮತ್ತೆ ಮಹಾನಗರಿ ಮುಂಬೈ ಮುಳುಗಿದೆ. ರಸ್ತೆಗಳು ಹೊಳೆಗಳಂತಾಗಿವೆ. ರೈಲುಗಳು ಪ್ರವಾಹದಲ್ಲಿ ಸಿಲುಕಿ ಪ್ರಯಾಣಿಕರು ತತ್ತರಿಸಿದ್ದಾರೆ. ವಿಮಾನಯಾನ ತಾತ್ಕಾಲಿಕವಾಗಿ ಬಂದ್ ಆಗಿತ್ತು. 17 ವಿಮಾನಗಳ ಮಾರ್ಗ ಬದಲಿಸಲಾಗಿತ್ತು. ಮಧ್ಯಾಹ್ನದ ನಂತರ ವಿಮಾನ ಸೇವೆ ಸಹಜ ಸ್ಥಿತಿಗೆ ಬಂತು. ನಗರದ ಹಲವೆಡೆ ಕೃತಕ ಜಲಪಾತಗಳು ಸೃಷ್ಟಿಯಾಗಿವೆ. ನಗರದಲ್ಲಿ ಬೋಟ್ ಮೂಲಕ ಸಂಚರಿಸುವ ಪರಿಸ್ಥಿತಿ ಏರ್ಪಟ್ಟಿದೆ.

ಮುಂಬೈ ಮಹಾನಗರಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಪರಿಣಾಮ ಥಾಣೆ ಜಿಲ್ಲೆಯ ವಂಗಾನಿಯಲ್ಲಿ ಶುಕ್ರವಾರ ರಾತ್ರಿಯಿಂದ ನೀರಿನ ಮಧ್ಯೆ ಮುಂಬೈ-ಕೊಲ್ಲಾಪುರ ನಡುವೆ ಸಂಚರಿಸುವ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಸಿಲುಕಿಕೊಂಡಿತ್ತು. ರೈಲಿನ ಸುತ್ತ ಐದಾರು ಅಡಿ ನೀರು ನಿಂತಿದೆ. ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ತಮ್ಮನ್ನು ಹೇಗಾದರೂ ಮಾಡಿ ಕಾಪಾಡಿ. ಹಲವು ಗಂಟೆಗಳಿಂದ ರೈಲಿನಲ್ಲಿಯೇ ಬಂಧಿಯಾಗಿದ್ದೇವೆ ಎಂದು ರೈಲಿನಲ್ಲಿದ್ದ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಯಬಿಟ್ಟಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಎನ್‍ಡಿಆರ್‍ಎಫ್, ವಾಯುಪಡೆ ಮತ್ತು ನೌಕಾಪಡೆಗಳ ಯೋಧರು ನಿರಂತರ ಕಾರ್ಯಾಚರಣೆ ನಡೆಸಿದರು. ಹೆಲಿಕಾಪ್ಟರ್ ಮತ್ತು ಬೋಟ್‍ಗಳ ನೆರವಿನಿಂದ ಶನಿವಾರ ರಾತ್ರಿ 8:30ರ ವೇಳೆ 9 ಗರ್ಭಿಣಿಯರು, ಮಹಿಳೆಯರು ಮಕ್ಕಳು ಸೇರಿ ರೈಲಿನಲ್ಲಿದ್ದ ಎಲ್ಲಾ 700 ಪ್ರಯಣಿಕರನ್ನು ರಕ್ಷಿಸಿದರು. ಅಸ್ವಸ್ಥರಾಗಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಬೈ ಮತ್ತು ಪುಣೆಯಿಂದ ಬಂದ ತಲಾ ಎರಡು ಎನ್‍ಡಿಆರ್ ಎಫ್ ತಂಡಗಳು, 8 ಸೇನಾ ತಂಡಗಳು ಪಾಲ್ಗೊಂಡಿದ್ದವು.

Comments are closed.