ಸುರತ್ಕಲ್ ಬಂಟರ ಭವನದಲ್ಲಿ ಮಾಜಿ ಮೇಯರ್ ದೇವಣ್ಣ ಶೆಟ್ಟರಿಗೆ `ನುಡಿ ನಮನ’
ಮಂಗಳೂರು /ಸುರತ್ಕಲ್ : ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಈ ಅಂತರದ ಜೀವನವು ಮನುಷ್ಯ ಅಗಲಿದ ನಂತರವೂ ಜನ-ಮನದಲ್ಲಿ ಉಳಿಯುವಂತಹ ಕಾರ್ಯ ನಿರ್ವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯ ಬದುಕನ್ನು ಜೀವನದಲ್ಲಿ ಮಾಜೀ ಮೇಯರ್ ದೇವಣ್ಣ ಶೆಟ್ಟಿ ಅಳವಡಿಸಿಕೊಂಡಿದ್ದರು ಎಂದು ಚೇಳಾರ್ ಖಂಡಿಗೆ ಬೀಡು ಆದಿತ್ಯ ಮುಕ್ಕಾಲ್ದಿ ತಿಳಿಸಿದರು.
ಸುರತ್ಕಲ್ ಬಂಟರ ಭವನದಲ್ಲಿ ಮಾಜೀ ಮೇಯರ್ ದೇವಣ್ಣ ಶೆಟ್ಟಿ ಅವರಿಗೆ ನಡೆದ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ದೇವಣ್ಣ ಶೆಟ್ಟಿ ಅವರು ಮೂಲತಃ ಕೃಷಿಕರಾಗಿದ್ದಾರೆ. ಪ್ರಗತಿ ಪರ ಕೃಷಿಕರಾಗಿದ್ದುಕೊಂಡು ಯಕ್ಷಗಾನ ಕಲಾವಿದರಾಗಿ ಪ್ರಸಿದ್ದಿ ಗಳಿಸಿದರು. ಬಳಿಕ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವರು ಸೇವೆಯನ್ನು ಕೈಗೊಂಡಿದ್ದರು ಎಂದು ದಿ. ಶ್ರೀನಿವಾಸ ಮಲ್ಯ ಟ್ರಸ್ಟ್ ಸುರತ್ಕಲ್ ಇದರ ಟ್ರಸ್ಟಿ ರಮಾನಂದ ರಾವ್ ತಿಳಿಸಿದರು.
ಸುರತ್ಕಲ್ ಮಹಮ್ಮಾಯಿ ಮೇಳದಲ್ಲಿ ಪ್ರಧಾನ ಕಲಾವಿದರಾಗಿದ್ದ ದೇವಣ್ಣ ಶೆಟ್ಟಿ ಅವರು ಮೇಳದಲ್ಲಿ ನಿಷ್ಠೆ ಮತ್ತು ಪ್ರಮಾಣಿಕರಾಗಿ ದುಡಿದು ಮೇಳದ ಜವಾಬ್ದಾರಿ ವಹಿಸಿ ಯಜಮಾನರಿಗೆ ಬೆನ್ನಲುಬಾಗಿ ನಿಂತಿದ್ದರು ಎಂದು ಮಹಮ್ಮಾಯಿ ಕ್ಷೇತ್ರದ ಅರ್ಚಕ ಅರುಣ್ ಪೈ ತಿಳಿಸಿದರು.
ದೇವಣ್ಣ ಶೆಟ್ಟಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಆಗಿ ಬಹಳಷ್ಟು ಅಭಿವೃದ್ಧಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ ಎಂದು ಮಾಜೀ ಮೇಯರ್ ಶಶಿಧರ್ ಹೆಗ್ಡೆ ತಿಳಿಸಿದರು.
ಜಿಲ್ಲಾ ಪಂಚಾಯತ್‌ನಿಂದ ಗ್ರಾಮ ಪಂಚಾಯತ್‌ಗಳಿಗೆ ಅನುದಾನವನ್ನು ಹೇಗೆ ತರಬೇಕು. ಯುವಕರು ರಾಜಕೀಯದಲ್ಲಿ ಹೇಗೆ ಸಕ್ರಿಯರಾಗಬೇಕೆಂದು ದೇವಣ್ಣ ಶೆಟ್ಟಿ ಅವರಿಂದ ಕಲಿಯ ಬೇಕು ಎಂದು ಮಾಜೀ ಮೇಯರ್ ಗಣೇಶ್ ಹೊಸಬೆಟ್ಟು ತಿಳಿಸಿದರು.
ದೇವಣ್ಣ ಶೆಟ್ಟಿ ಮೇಯರ್ ಆಗಿದ್ದ ಸಂದರ್ಭದಲ್ಲಿ ಎಲ್ಲಾ ವಾರ್ಡ್‌ಗಳಿಗೆ ಅನುದಾನವನ್ನು ಸಮಾನಾಗಿ ಹಂಚಿ ವಾರ್ಡ್‌ಗಳ ಅಭಿವೃದ್ಧಿಗೆ ಸಹಕರಿಸಿದ್ದರು ಎಂದು ಮಾಜೀ ಮೇಯರ್ ರಜನಿ ದುಗ್ಗಣ್ಣ ತಿಳಿಸಿದರು.
ಈ ಹಿಂದೆ ಪುರಭವನ ನವೀಕೃತಗೊಂಡಾಗ ಹೆಚ್ಚಳವಾದ ಬಾಡಿಗೆ ದರವನ್ನು ದೇವಣ್ಣ ಶೆಟ್ಟಿ ಕಡಿಮೆಗೊಳಿಸಿ ಕಲಾವಿದರಿಗೆ ನೆರವಾಗಿದ್ದನ್ನು ಬಾಳ ಮಾಧವ ಶೆಟ್ಟಿ ನೆನಪಿಸಿಕೊಂಡರು.
ವಿವಿಧ ಕ್ಷೇತ್ರಗಳಲ್ಲಿ ದೇವಣ್ಣ ಶೆಟ್ಟಿ ಅವರು ಸಾಧನೆಗೈದಿದ್ದಾರೆ. ಬೆಳೆಯುವ ಯುವಕರನ್ನು ಬೆನ್ನುತಟ್ಟಿ ಹುರಿದುಂಬಿಸುತ್ತಿದ್ದರು. ಅವರ ಪರೋಪಕಾರದ ಬದುಕು ಅವರನ್ನು ಎತ್ತರಕ್ಕೆ ಕೊಂಡೊಯಿತು ಎಂದು ಸಮಾಜ ಸೇವಕ ಮಹಾಬಲ ಪೂಜಾರಿ ಕಡಂಬೋಡಿ ತಿಳಿಸಿದರು.
ಸಮಾರಂಭದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್-ಪೂಂಜ, ಪಡ್ರೆ ಚಾವಡಿ ಮನೆ ಬಾಬು ಬಂಡ್ರಿಯಾಲ್, ತೋಕೂರು ಗುತ್ತು ದಿವಾಕರ್ ಆಳ್ವ, ಕರಿಯ ಮಾರ್ಲರು ಮದಕಾಡಿ, ತೋಕೂರು ಗುತ್ತು ಜಯರಾಮ ಆಳ್ವ, ಭೋಜ ಗುತ್ತಿನಾರ್ ಪಂಜ ನಲ್ಯಗುತ್ತು, ಪಣಂಬೂರು ಕಾವರ ಮನೆ ಮಂಜು ಕಾವ, ಅಗರಿ ರಾಘವೇಂದ್ರ ರಾವ್, ಗುರುರಾಜ ಆಚಾರ್ಯ, ಸತ್ಯಜಿತ್ ಸುರತ್ಕಲ್, ಸದಾಶಿವ ಶೆಟ್ಟಿ ಇಂಟಕ್, ವಾಸುದೇವ ಆಚಾರ್ಯ ಕುಳಾಯಿ, ಸಂತೋಷ್ ಶೆಟ್ಟಿ ದುರ್ಗಾಂಬ, ವಿಶ್ವನಾಥ ಶೆಟ್ಟಿ , ಅಶೋಕ ಶೆಟ್ಟಿ ತಡಂಬೈಲ್ , ಆದರ್ಶ್ ಶೆಟ್ಟಿ ಕುಳಾಯಿ, ಡ್ವಾನಿ ಸುವಾರಿಸ್, ಸೈಯದ್ ಸೂರಿಂಜೆ, ಬೈಕಂಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪಿ.ವಿ, ಭರತ್ ಶೆಟ್ಟಿ, ಬೇಬಿ ಶೆಟ್ಟಿ, ಪೂರ್ಣಿಮಾ ಯತೀಶ್ ರೈ, ಈ.ಟಿ ಶೆಟ್ಟಿ. ಡಾ ಮಂಜಯ್ಯ ಶೆಟ್ಟಿ, ಮಹಾಬಲ ರೈ ನವೀನ್ ಶೆಟ್ಟಿ ಪಡ್ರೆ, ಲೋಕಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸುರತ್ಕಲ್ ಬಂಟರ ಸಂಘದ ಮಾಜೀ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ಕಾರ್ಯಕ್ರಮ ನಿರ್ವಹಿಸಿದರು.
ಸುರತ್ಕಲ್ ಬಂಟರ ಸಂಘವು ದೇವಣ್ಣ ಶೆಟ್ಟಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು.
Comments are closed.