ಕರಾವಳಿ

ಬೈಂದೂರು ಜಾನುವಾರು ಕಳವು ಪ್ರಕರಣ: ಓರ್ವ ಆರೋಪಿಯ ಬಂಧನ

Pinterest LinkedIn Tumblr

ಕುಂದಾಪುರ: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಳಜಿತ್ ಎಂಬಲ್ಲಿನ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬೈಂದೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕುಂದಾಪುರದ ಗೋಳಿಯಂಗಡಿ ನಿವಾಸಿ ಮಹಮ್ಮದ್ ಅಜೀಮ್ ಬಂಧಿತ ಆರೋಪಿ‌.

ಇತ್ತೀಚೆಗೆ ಕೆಲವು ದಿನಗಳ ಹಿಂದೆ ತಡರಾತ್ರಿ ಎರಡು ಮನೆಗಳ ಕೊಟ್ಟಿಗೆಗೆ ನುಗ್ಗಿದ ದುಷ್ಕರ್ಮಿಗಳು ಐದು ದನಗಳನ್ನು ಕದ್ದಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದಾರು ಗೌಡ್ತಿ ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ದನ ಹಾಗೂ ಪಾರ್ವತಿ ಎನ್ನುವರ ಮನೆಯ ಕೊಟ್ಟಿಗೆಯಲ್ಲಿದ್ದ ಮೂರು ದನಗಳು ಕಳವಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೈಂದೂರು ಠಾಣೆ ಪಿ‌ಎಸ್‌ಐ ತಿಮ್ಮೇಶ್ ಬಿ.ಎನ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದಿದ್ದರು. ಇದೇ ವೇಳೆ ಕಂಡ್ಲೂರಿನ ಬಾತ್ಮೀದಾರರ ಮೂಲಕ ನದೀಮ್ ಎನ್ನುವನ ಮನೆಯಲ್ಲಿ ಜಾನುವಾರು ಕಟ್ಟಿದ್ದರ ಬಗ್ಗೆ ಪೊಲೀಸರು ಮಾಹಿತಿ ಪಡೆದು ಮೂರು ದನಗಳನ್ನು ವಶಕ್ಕೆ ಪಡೆದು ರಕ್ಷಿಸಿದ್ದರು.

ಇನ್ನು ದನ ಕಳವು ಪ್ರಕರಣದ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ ಸೇರಿದಂತೆ ಜನಪ್ರತಿನಿಧಿಗಳು ದನ ಕಳೆದುಕೊಂಡ ಮನೆಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೆ ಹಿಂದೂ ಪರ ಸಂಘಟನೆಗಳು ಬೈಂದೂರಿನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು.

ಸದ್ಯ ಓರ್ವ ಆರೋಪಿ ಬಂಧನವಾಗಿದ್ದು ಇತರ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ. ಉಡುಪಿ ಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Comments are closed.