
ಮಂಗಳೂರು: ಮನಸ್ಸಿನ ಒತ್ತಡ ನಿವಾರಣೆಗೆ ಯೋಗ ಸಹಕಾರಿ. ಪ್ರಸ್ತುತ ದಿನಗಳಲ್ಲಿ ಪಾಶ್ಚಾತ್ಯರು ಕೂಡ ಯೋಗದೆಡೆಗೆ ಮುಖ ಮಾಡಿರುವುದು ಯೋಗದ ಪ್ರಾಮುಖ್ಯತೆಯನ್ನು ತೋರಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಮತ್ತು ಕಳೆದ ಒಂದು ತಿಂಗಳಿನಿಂದ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಎಂಬುದು ಜೀವನಶೈಲಿ. ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡಾಗ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಗಟ್ಟಿಯಾಗಲು ಸಾಧ್ಯ. ನಮ್ಮ ನಿತ್ಯ ಒತ್ತಡ ಮತ್ತು ಜಂಜಾಟದಿಂದಾಗಿ ಆರೋಗ್ಯದ ಮೇಲೆ ಪರಿಣಾಮಗಳು ಬೀರುತ್ತಿವೆ. ಆದ್ದರಿಂದ ನಮ್ಮನ್ನು ನಾವು ಯೋಗದಲ್ಲಿ ತೊಡಗಿಸಿಕೊಂಡಾಗ ಇವೆಲ್ಲಕ್ಕೂ ಮುಕ್ತಿ ಕಾಣಿಸಲು ಸಾಧ್ಯ ಲಕ್ಷ್ಮೀಪ್ರಸಾದ್ ಹೇಳಿದರು.

ಇದೇ ಸಂದರ್ಭ ಪತ್ರಕರ್ತರಿಗೆ ನಿರಂತರ ಒಂದು ತಿಂಗಳ ಕಾಲ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕಿ ಭವ್ಯಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ದ.ಕ.ಜಿಲ್ಲಾ ಪತ್ರಕರ್ತರ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.


ಒಂದು ತಿಂಗಳ ಕಾಲ ಯೋಗ ತರಬೇತಿಯಲ್ಲಿ ಪಾಲ್ಗೊಂಡ ಪತ್ರಕರ್ತರಾದ ರಾಘವ ಎಂ ಮತ್ತು ಭಾಸ್ತರ ರೈ ಕಟ್ಟ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಮೋಟುಕಾನ ಸ್ವಾಗತಿಸಿ, ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಡಿ ಪಳ್ಳಿ ವಂದಿಸಿದರು.
Comments are closed.