ಕರಾವಳಿ

ಬೈಂದೂರು: ಸ್ವರ್ಣೋದ್ಯಮಿಗಳ ದರೋಡೆ; ಆಪಾದನೆ ಸಾಭೀತು, ಜೂ.7ಕ್ಕೆ ಶಿಕ್ಷೆ ಪ್ರಕಟ

Pinterest LinkedIn Tumblr

ಕುಂದಾಪುರ: ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಬೈಂದೂರು ಸಮೀಪದ ನಡೆದ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಸ್ವರ್ಣೋದ್ಯಮಿಗಳ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಅವರು ಸೋಮವಾರ ತೀರ್ಪು ಪ್ರಕಟಿಸಿದ್ದು ಶಿಕ್ಷೆ ಪ್ರಮಾಣವನ್ನು ಜೂ. 7ಕ್ಕೆ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.

ಕುಖ್ಯಾತ ದರೋಡೆಕೋರ ರವಿ ಜತ್ತನ್, ಶಿವ ಪ್ರಕಾಶ್‌, ಚಂದ್ರಹಾಸ, ಪ್ರದೀಪ ಪೂಜಾರಿ ಹಾಗೂ ದುರ್ಗಾಪ್ರಸಾದ್‌ ಎನ್ನುವರ ಮೇಲಿನ ಆರೋಪಣೆಗಳು ಸಾಭೀತಾಗಿದೆ.

(ಅಂದಿನ ಪೊಲೀಸರ ತಂಡ)

(ಗಾಯಾಳುಗಳು)

2014ರ ಅ.7ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸೋನರಕೇರಿ ಬಳಿಯ ಗದ್ದೆಯಲ್ಲಿ ಈ ಐವರು ದರೋಡೆಕೋರರು ಉಪ್ಪುಂದದ ಚಿನ್ನದ ಅಂಗಡಿಯ ಮಾಲಕ ಸುಧೀಂದ್ರ ಶೇಟ್‌, ಅವರ ತಂದೆ ಗಣೇಶ್ ಶೇಟ್ ಹಾಗೂ ತಂಗಿಯನ್ನು ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ ಮುಖಕ್ಕೆ ಕಾರದ ಪುಡಿ ಎರಚಿ ಚೂರಿಯಿಂದ ಇರಿದು ದಾಂಧಲೆ ಮಾಡಿದ್ದರು. ಇರಿತಕ್ಕೊಳಗಾದವರ ಕೂಗು ಕೇಳಿ ಸ್ಥಳೀಯ ನಿವಾಸಿ ಅನಿಲ್ ಶೇಟ್ ಸ್ಥಳಕಾಗಮಿಸಿದ್ದು ಅವರಿಗೂ ಚೂರಿ ಇರಿದ ದುಷ್ಕರ್ಮಿಗಳು ಚಿನ್ನದ ಬೆಂಡೋಲೆ, ವಿವಿಧ ಮಾದರಿಯ ಚಿನ್ನದ ಉಂಗರಗಳಿದ್ದ ಅಂದಾಜು 12 ಲಕ್ಷರೂ.ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಂದಿನ ಬೈಂದೂರು ಸಿಪಿಐ ಸುದರ್ಶನ್ ಹಾಗೂ ಪಿಎಸ್ಐ ಸಂತೋಷ ಕಾಯ್ಕಿಣಿ ಹಾಗೂ ತಂಡ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಕಳವಾದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ಅಂದಿನ ಉಡುಪಿ ಎಸ್ಪಿ ಕಾರ್ಯಾಚರಣೆ ತಂಡಕ್ಕೆ 25,000 ನಗದು ಬಹುಮಾನ ಕೂಡ ಘೋಷಿಸಿದ್ದರು.

ಆರೋಪಿಗಳ ವಿರುದ್ಧ ಐಪಿಸಿ ಕಲಂ 395 ಹಾಗೂ 397 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅಂದಿನ ಬೈಂದೂರು ಸಿಪಿಐ ಸುದರ್ಶನ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು 42 ಮಂದಿ ಸಾಕ್ಷಿಗಳ ವಿಚಾರಣೆ ನಡೆದಿತ್ತು. ಪ್ರಾಸಿಕ್ಯೂಶನ್ ಪರವಾಗಿ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Comments are closed.