ಕರಾವಳಿ

ಪ್ರಧಾನಿಯಾಗಿ ‘ನಮೋ’ ಪ್ರಮಾಣವಚನ- ಕುಂದಾಪುರ ತಾಲೂಕಿನೆಲ್ಲೆಡೆ ಅಭಿಮಾನಿಗಳ ಸಂಭ್ರಮ!

Pinterest LinkedIn Tumblr

ಕುಂದಾಪುರ: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕುಂದಾಪುರ ತಾಲೂಕಿನಾದ್ಯಂತ ಅಭಿಮಾನಿಗಳು, ಬಿಜೆಪಿ ಮುಖಂಡರು, ಕಾರ್‍ಯಕರ್ತರು ಹಲವು ವಿಶಿಷ್ಟ ಕಾರ್‍ಯಕ್ರಮಗಳ ಮೂಲಕ ಸಂಭ್ರಮಿಸಿದರು.

ಕುಂದಾಪುರ ಕ್ಷೇತ್ರ ಬಿಜೆಪಿ ವತಿಯಿಂದ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಪ್ರಮಾಣವಚನವನ್ನು ದೊಡ್ಡ ಪರದೆ ಮೂಲಕ ಅಳವಡಿಸಿ ನೇರ ಪ್ರಸಾರ ಮಾಡಲಾಯಿತು. ಈ ವೇಳೆ ನೆರೆದ ನೂರಾರು ಮಂದಿಗೆ ಪಕ್ಷದ ವತಿಯಿಂದ ಸಿಹಿ ವಿತರಿಸಲಾಯಿತು. ತ್ರಾಸಿ ಕಡಲ ಕಿನಾರೆ ಬಳಿ ಬಂದೂರು ಕ್ಷೇತ್ರ ಬಿಜೆಪಿ ವತಿಯಿಂದ ದೊಡ್ಡ ಪರದೆ ಮೂಲಕ ಪ್ರದರ್ಶಿಸಲಾಯಿತು. ಈ ವೇಳೆ ನೆರೆದ ೩೫೦ ಕ್ಕೂ ಹೆಚ್ಚು ಮಂದಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನದ ಮುಂಭಾಗ ಟೀಂ ಮೋದಿ ಕುಂದಾಪುರ ವತಿಯಿಂದ ಕೂಡ ನೇರಪ್ರಸಾರದ ಜತೆಗೆ ಸಿಹಿ ತಿಂಡಿ ಹಂಚಲಾಯಿತು. ಇದರೊಂದಿಗೆ ಮೋದಿ ಮತ್ತೊಮ್ಮೆ ಎನ್ನುವ ಟಿ- ಶರ್ಟ್ ಕೂಡ ನೀಡಲಾಯಿತು. ತೆಕ್ಕಟ್ಟೆಯಲ್ಲಿ ಕೂಡ ನೇರಪ್ರಸಾರದೊಂದಿಗೆ, ಬಿಜೆಪಿ ಕಾರ್‍ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ದಬ್ಬೆಕಟ್ಟೆಯಲ್ಲಿ ಇಲ್ಲಿನ ದಬ್ಬೆಕಟ್ಟೆ ಫ್ರೆಂಡ್ಸ್ ವತಿಯಿಂದ ಸಾರ್ವಜನಿಕರಿಗೆ ತಂಪು ಪಾನೀಯ ಹಾಗೂ ಸಿಹಿ ತಿಂಡಿ ನೀಡಲಾಯಿತು.

ಇನ್ನು ಗಂಗೊಳ್ಳಿ ಹಾಗೂ ಗುಜ್ಜಾಡಿ ಭಾಗದಲ್ಲಿ ಬಿಜೆಪಿ ಕಾರ್‍ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಸಂಭ್ರಮಾಚರಣೆ ನಿಮಿತ್ತ ನೇರ ಪ್ರಸಾರ ಪ್ರದರ್ಶನಕ್ಕೆ ಅನುಮತಿ ಕೇಳಿದ್ದರೂ, ಅನುಮತಿ ಸಿಕ್ಕಿಲ್ಲ ಎನ್ನುವ ಆರೋಪವಿದೆ. ಗಂಗೊಳ್ಳಿಯಲ್ಲಿ ಪಟಾಕಿಯಷ್ಟೇ ಸಿಡಿಸಿ ಸಂಭ್ರಮಿಸಿದರು.

ಉಚಿತ ಸೇವೆಗಳು…
ಇದೇ ವೇಳೆ ಗುಜ್ಜಾಡಿಯಲ್ಲಿ ರಿಕ್ಷಾ ಚಾಲಕ ಶ್ರೀನಾಥ್ ಮೊಗವೀರ ಅವರು ಗುರುವಾರ ದಿನವಿಡೀ ಪ್ರಯಾಣಿಕರಿಗೆ ಉಚಿತವಾಗಿ ಆಟೋ ಒದಗಿಸಿದರು. ಹಳ್ಳಾಡಿಯಲ್ಲಿ ಸಂಜು ಎನ್ನುವವರು ಹೋಟೆಲ್‌ನಲ್ಲಿ ಗ್ರಾಹಕರಿಗೆ ಉಚಿತವಾಗಿ ಬೆಳಗಿನ ಉಪಾಹಾರ ನೀಡಿ, ಮೋದಿಯವರ ಮೇಲಿನ ಅಭಿಮಾನ ವ್ಯಕ್ತಪಡಿಸಿದರು. ಉಪ್ಪುಂದದ ನಯನ್ ಕುಮಾರ್ ಅವರು ಕ್ಷೌರ ಅಂಗಡಿಯೊಂದರಲ್ಲಿ ಇವತ್ತು ಉಚಿತವಾಗಿ ಕ್ಷೌರ ಮಾಡಿದರು. ಬೆಳಗ್ಗೆ 7.30 ಯಿಂದ ರಾತ್ರಿ 9 ವರೆಗೆ ಸುಮಾರು 40 ಮಂದಿಗೆ ಉಚಿತ ಕ್ಷೌರ ಮಾಡಿದರು.

6 ದಿನಗಳ ಆಟೋ ಸೇವೆ…
ಮೋದಿಯವರು 2014 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನಂತರ ಪ್ರತಿ ವರ್ಷ 5 ಕಿ.ಮೀ. ವರೆಗೆ ಪ್ರಯಾಣಿಕರಿಂದ 1 ರೂ. ಪಡೆಯುವ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದ ಕುಂದಾಪುರ – ಹಂಗಳೂರು ವಿನಾಯಕ ಚಿತ್ರ ಮಂದಿರದ ಬಳಿಯ ಆಟೋ ನಿಲ್ದಾಣದಲ್ಲಿ ಬಾಡಿಗೆ ಮಾಡುವ ಸತೀಶ್ ಪ್ರಭು ಅವರು ಈ ಬಾರಿ ಗುರುವಾರದಿಂದ ಆರಂಭಗೊಂಡು ಇನ್ನು 6 ದಿನಗಳ ಕಾಲ ಈ ಸೇವೆ ನೀಡಲಿದ್ದಾರೆ. ಮೊದಲ ವರ್ಷಕ್ಕೆ 1 ದಿನ, ಹೀಗೆ 5 ವರ್ಷಕ್ಕೆ 5 ದಿನ ನೀಡಿದ್ದು, ಈಗ ಮೋದಿ ಪ್ರಧಾನಿಯಾಗಿ 6 ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ 6 ದಿನಗಳ ಕಾಲ ಈ ಸೇವೆ ನೀಡುತ್ತಿದ್ದಾರೆ.

Comments are closed.