ಕರಾವಳಿ

ಸುವರ್ಣ ತ್ರಿಭುಜ ಬೋಟ್ ದುರಂತ: ನಾಪತ್ತೆಯಾದ ಸೋದರನ ಚಿಂತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ತಮ್ಮ ಸಾವು

Pinterest LinkedIn Tumblr

ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್‌ ಅವಘಡಕ್ಕೆ ಸಿಲುಕಿ ಕಣ್ಮರೆಯಾಗಿದ್ದ ರಮೇಶ್‌ ಶನಿಯಾರ ಮೊಗೇರ ಅವರ ಬಗ್ಗೆ ನೊಂದುಕೊಂಡು ಅವರ ಸಹೋದರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಅವರು ಇಂದು (ಗುರುವಾರ) ಆಸ್ಪತ್ತೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೀನುಗಾರ ರಮೇಶ್‌ ಮೊಗೇರ ಅವರ ಚಿಂತೆಯಲ್ಲಿ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅವರ ಸಹೋದರ ಚಂದ್ರಶೇಖರ್‌ ಮೊಗೇರ ಇಂದು ಸಾವನ್ನಪ್ಪಿದ್ದಾರೆ.

ಚಂದ್ರಶೇಖರ್ ಉಡುಪಿ ಆದರ್ಶ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಹೋರಾಟದ ಸ್ಥಿತಿಯಲ್ಲಿದ್ದಿದ್ದು ಬೋಟ್‌ ನಾಪತ್ತೆಯಾದ ದಿನದಿಂದ ಅತೀವ ಖಿನ್ನತೆಗೆ ಒಳಗಾಗಿದ್ದರು. ಬೋಟ್‌ ಅವಶೇಷ ಪತ್ತೆಯ ಸುದ್ದಿ ತಿಳಿದು ಮತ್ತಷ್ಟು ನೊಂದುಕೊಂಡಿದ್ದರು. ಭಟ್ಕಳದಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದರು.

ಭಟ್ಕಳದ ಶನಿಯಾರ ಮೋಗರ ಅವರ 7 ಮಂದಿ ಮಕ್ಕಳಲ್ಲಿ ಚಂದ್ರಶೇಖರ್‌ 5 ನೆಯವರು. ನಾಪತ್ತೆಯಾದ ರಮೇಶ್‌ ಸೇರಿ ಅವರಿಗೆ ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು ಮತ್ತು ಇಬ್ಬರು ಅಕ್ಕಂದಿರಿದ್ದಾರೆ. ವೃದ್ಧ – ತಂದೆ ತಾಯಿ ಕಣ್ಣೀರಿನಲ್ಲಿ ಮಗ ರಮೇಶನ ದಾರಿ ಕಾಯುತ್ತಿರುವ ವೇಳೆ ಇದೀಗ ಇನ್ನೊಬ್ಬ ಮಗನ ಸಾವು ದುಃಖ ಇನ್ನಷ್ಟು ಹೆಚ್ಚಿಸಿದೆ.

Comments are closed.