ಮಂಗಳೂರು: ಸಮಾಜದ ಆಸ್ತಿಯಾಗಿರುವ ಯುವಸಮುದಾಯದಲ್ಲೇ ಹೃದಯಾಘಾತ ಪ್ರಮಾಣ ಹೆಚ್ಚಳವಾಗುತ್ತಿರುವುದು ನಿಜಕ್ಕೂ ಆಘಾತಕಾರಿ. ಇತ್ತೀಚಿನ ದಿನಗಳಲ್ಲಿ ಹೃದ್ರೋಗದಿಂದ ಸಾಯುವವರ ಸಂಖ್ಯೆ ಗಣನೀಯ ಹೆಚ್ಚುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೂತನವಾಗಿ ಆರಂಭವಾಗಿರುವ ಮೀಡಿಯಾ ಹೆಲ್ತ್ ಕ್ಲಿನಿಕ್‌ಗೆ ಮಂಗಳವಾರ ಇಸಿಜಿ ಯಂತ್ರ ಕೊಡುಗೆ ನೀಡಿ ಅವರು ಮಾತನಾಡಿದರು.
ಯುವ ಸಮುದಾಯದಲ್ಲಿ ಹೃದಯಾಘಾತ ಹೆಚ್ಚಳವಾಗಲು ಪ್ರಮುಖ ಕಾರಣ ವಿಪರೀತ ಧೂಮಪಾನ. ಒತ್ತಡದ ಜೀವನಶೈಲಿಯಿಂದ ರಿಲ್ಯಾಕ್ಸ್ ಮಾಡಿಕೊಳ್ಳಲು ವಿಷಕಾರಿ ತಂಬಾಕು ಸೇವನೆಗೆ ಮೊರೆಹೋಗುತ್ತೇವೆ. ನಾವು ಸೇವಿಸುವ ಆಹಾರದಲ್ಲೂ ಎಣ್ಣೆಯ ಅಂಶ ಹೆಚ್ಚಿದ್ದು, ಅದು ದೇಹದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಹೃದಯದ ರಕ್ತ ನಾಳಗಳ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ.
ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ ವಾಯುಮಾಲಿನ್ಯದಿಂದಲೂ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತಿರುವುದು ದೃಢಪಟ್ಟಿದೆ. ಹೃದಯಾಘಾತದ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ನಮ್ಮಿಂದಾದಷ್ಟು ಹಳ್ಳಿ ಹಳ್ಳಿಗಳಲ್ಲಿ ಹೋಗಿ ಸಹಕಾರ ನೀಡುತ್ತಿದ್ದೇವೆ. ಇದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಬೇಕಾದರೆ ಮಾಧ್ಯಮಗಳ, ಸಮಾಜ ಸೇವಾ ಸಂಸ್ಥೆಗಳ ಪಾತ್ರ ಹಿರಿದು ಎಂದರು.
ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ,ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ ಶೆಟ್ಟಿ ವಂದಿಸಿದರು.
Comments are closed.