ಕರಾವಳಿ

ಎಸ್ಕೇಪ್ ಆದ ರೇಪ್&ಮರ್ಡರ್ ಕೇಸ್ ಆರೋಪಿ ಬಂಧನಕ್ಕೆ ಸಹಕಾರ: ಸಾರ್ವಜನಿಕರಿಗೆ ಪೊಲೀಸರಿಂದ ಸನ್ಮಾನ

Pinterest LinkedIn Tumblr

ಉಡುಪಿ: ಜೈಲಿಗೆ ಕರೆತರುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಮಣಿಪಾಲ ಶಿವಳ್ಳಿಯಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಹನುಮಂತ ಬಸಪ್ಪ ಕಂಬಳಿ ಬಂಧನಕ್ಕೆ ಸಹಕಾರ ನೀಡಿದ ಸಾರ್ವಜನಿಕರನ್ನು ಉಡುಪಿ ಪೊಲೀಸರು ಅಭಿನಂದಿಸಿದ್ದಾರೆ.

ಮಣಿಪಾಲ ಠಾಣೆಯ ಕೊಲೆ ಮತ್ತು ಪೋಕ್ಸೋ ಕಾಯ್ದೆ ಪ್ರಕರಣದ ಆರೋಪಿ ಹನುಮಂತ ಬಸಪ್ಪ ಕಂಬಳಿ ಎಂಬಾತನನ್ನು ಮಾ.31ರಂದು ಮಣಿಪಾಲ ಠಾಣಾ ಸಿಬ್ಬಂದಿಗಳ ಬೆಂಗಾವಲಿನಲ್ಲಿ ಸಂಜೆ ವೇಳೆ ಹಿರಿಯಡ್ಕ ಕಾರಾಗೃಹಕ್ಕೆ ತರುವ ವೇಳೆಯಲ್ಲಿ ಆರೋಪಿಯು ವಾಹನದಿಂದ ಜಿಗಿದು ಅಲ್ಲಿಯೇ ಕಾಡಿನಲ್ಲಿ ಪರಾರಿಯಾಗಿದ್ದು, ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವ ವೇಳೆ ಈತನ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಂದು ರಾತ್ರಿಯಿಂದಲೇ ಹಗಲಿರುಳು ಆರೋಪಿತನ ಪತ್ತೆಗೆ ಕಾರ್ಯಾಚರಣೆಯನ್ನು ನಡೆಸಿದ್ದು, ಈ ವೇಳೆಗೆ ಹಿರಿಯಡ್ಕ ಠಾಣಾ ಸರಹದ್ದಿನ ಸಾರ್ವಜನಿಕರೂ ಕೂಡಾ ಪೊಲೀಸ್ ಇಲಾಖೆಯೊಂದಿಗೆ ರಾತ್ರಿ ಹಗಲು ಆರೋಪಿತನ ಪತ್ತೆ ಬಗ್ಗೆ ಶ್ರಮಿಸಿದ್ದರು. ಆರೋಪಿತನ ಜಾಡು ಹಿಡಿದು ಪತ್ತೆ ಮಾಡುವಲ್ಲಿ ಸಹಕರಿಸಿದ ಸಾರ್ವಜನಿಕರಿಗೆ ಅಭಿನಂದನಾ ಸಮಾರಂಭವನ್ನು ಎ.5 ರಂದು ಹಿರಿಯಡ್ಕ ಮಾಧವ ಮಂಗಲ ಸಭಾ ಭವನದಲ್ಲಿ ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ವಹಿಸಿದ್ದು, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ. ಜೈ ಶಂಕರ್ ಸ್ವಾಗತಿಸಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾರ್ವಜನಿಕರ ಸಹಕಾರವನ್ನು ಹೊಗಳಿ, ಇನ್ನು ಮುಂದಕ್ಕೂ ಸಹ ಇದೇ ರೀತಿ ಮಾಹಿತಿ ನೀಡಿ ಪೊಲೀಸ್‌ ಇಲಾಖೆಗೆ ಸಹಕರಿಸುವಂತೆ ಕೋರಿದರು.

ಶ್ರೀಲತಾ ಮತ್ತು ಪುಷ್ಪಲತಾರರವರನ್ನು ಸನ್ಮಾನಿಸಿ, ಸಹಕರಿಸಿದ ಇತರ ಸಾರ್ವಜನಿಕರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ ಉಡುಪಿ ಎಸ್ಪಿ ಮಾತನಾಡಿ, ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಸಾರ್ವಜನಿಕರ ಸಹಕಾರವನ್ನು ಸ್ಮರಿಸಿ, ಈ ರೀತಿಯ ಸಾರ್ವಜನಿಕರ ಸಹಕಾರ ಪ್ರತಿಯೊಬ್ಬನಿಗೂ ಮಾದರಿಯಾಗಿದ್ದು, ಇದೊಂದು ಅಪರಾಧವನ್ನು ತಡೆಗಟ್ಟಲು ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿದೆ, ಮುಂದೆಯೂ ಎಲ್ಲಾ ರೀತಿಯಲ್ಲಿ ಪೊಲೀಸ್‌ ಇಲಾಖೆಗೆ ಸಹಕಾರ ನೀಡುವಂತೆ ಕೋರಿದರು. ಸಾರ್ವಜನಿಕರ ಪರವಾಗಿ ಕೃಷ್ಣ ಪ್ರಸಾದ್ ಶೆಟ್ಟಿ ಮತ್ತು ಕೃಷ್ಣ ಕುಲಾಲ್ ರವರು ಮಾತನಾಡಿ ಪೊಲೀಸ್ ಇಲಾಖೆಯ ಅಭಿನಂದನಾ ಸಮಾರಂಭಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಬ್ರಹ್ಮಾವರ ವೃತ್ತ ನಿರೀಕ್ಷಕ ಕೆ.ಸಿ ಪೂವಯ್ಯ ವಂದನಾರ್ಪಣೆಗೈದರು. ನಿಟ್ಟೂರು ಶಾಲೆ ಅಧ್ಯಾಪಕ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ / ಸಿಬ್ಬಂದಿಯವರು ಮತ್ತು ನಾಗರಿಕರು ಉಪಸ್ಥಿತರಿದ್ದರು.

Comments are closed.