ಕರಾವಳಿ

ಬಾಲ್ಯ ವಿವಾಹ ಶಿಕ್ಷಾರ್ಹ; ತಿದ್ದುಪಡಿಯಾದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಡಿಟೇಲ್ಸ್ ಇಲ್ಲಿದೆ

Pinterest LinkedIn Tumblr

ಉಡುಪಿ: ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ ಮಾರ್ಚ್ 3, 2018 ರಿಂದ ಜಾರಿಗೆ ಬಂದಿದ್ದು, ಈ ದಿನಾಂಕದಿಂದ ನೆರವೇರಿಸಲಾದ ಪ್ರತಿಯೊಂದು ಬಾಲ್ಯ ವಿವಾಹವು ಪ್ರಾರಂಭದಿಂದಲೇ ಅನೂರ್ಜಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಬಾಲ್ಯ ವಿವಾಹಗಳನ್ನು ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರಿ ವ್ಯಾಪ್ತಿಯಲ್ಲಿ ನಡೆದ ಅಪರಾಧದ ಸಂಜ್ಞೇಯತೆಯನ್ನು ಗಮನಿಸಿ, ಈ ನಿಯಮದಡಿ ತಾನಾಗಿಯೇ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಮಹಿಳೆಯರೂ ಕೂಡ ಕಾರಾಗ್ರಹವಾಸದ ಶಿಕ್ಷೆಗೆ ಅರ್ಹರಾಗಿರುತ್ತಾರೆ. ಈ ತಿದ್ದುಪಡಿ ಪ್ರಕಾರ ಸೆಕ್ಷನ್ 9 ಮತ್ತು 13 ರ ಪ್ರಕಾರ ತಪ್ಪಿತಸ್ಥ ವಯಸ್ಕ ಪತಿ, ತಡೆಯಾಜ್ಞೆ ಉಲ್ಲಂಘಿಸಿದವರು ಕನಿಷ್ಟ ಒಂದು ವರ್ಷ ಆದರೆ ಎರಡು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಠಿಣ ಕಾರಾವಾಸದಿಂದ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ಜುಲ್ಮಾನೆ ಅಥವಾ ಇವೆರಡರಿಂದಲೂ ಶಿಕ್ಷೆಗೆ ಗುರಿಯಾಗುವರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ ತಿದ್ದುಪಡಿ ಸೆಕ್ಷನ್ 10 & 11 ರ ಪ್ರಕಾರ ಬಾಲ್ಯ ವಿವಾಹ ನಡೆಸಿದ ಮತ್ತು ಉತ್ತೇಜಿಸಿದ ತಪ್ಪಿತಸ್ಥರು ಕನಿಷ್ಟ ಒಂದು ವರ್ಷದಿಂದ ಗರಿಷ್ಟ 2 ವರ್ಷಗಳವರೆಗೆ ಕಾರಾವಾಸ ಮತ್ತು ಒಂದು ಲಕ್ಷ ರೂ. ವರೆಗೆ ದಂಡದ ಶಿಕ್ಷೆಗೆ ಗುರಿಯಾಗುವರು ಎಂದು ಅವರು ತಿಳಿಸಿದ್ದಾರೆ.

Comments are closed.