ಕರಾವಳಿ

ಮೀನು ಸಾಗಿಸುವ ಇನ್ಸುಲೇಟರ್ ವಾಹನದಲ್ಲಿ ಕದ್ದ ಮರಳು ಸಾಗಾಟ: ಏಳು ಮಂದಿ ಬಂಧನ

Pinterest LinkedIn Tumblr

ಕುಂದಾಪುರ: ಮೀನು ಸಾಗಿಸುವ ಇನ್ಸುಲೇಟರ್ ವಾಹನದಲ್ಲಿ ಕಳ್ಳತನ ಮಾಡಿದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರು ವಾಹನ ಸಮೇತ ಏಳು ಮಂದಿಯನ್ನು ಬಂಧಿಸಿದ ಘಟನೆ ಮಾ.25 ಸೋಮವಾರ ಬೆಳಿಗ್ಗೆ ಕುಂದಾಪುರದ ಬೀಜಾಡಿ ಎಂಬಲ್ಲಿ ನಡೆದಿದೆ.

ಇನ್ಸುಲೇಟರ್ ವಾಹನ ಚಾಲಕ ಕಾಸರಗೋಡು ಪಾವೂರು ಮಂಜೇಶ್ವರದ ಅಬ್ದುಲ್ ಸತ್ತಾರ್ (23), ಮೂಲತಃ ಕೊಪ್ಪಳದ ಹಲಿ ಬ್ರಹ್ಮಾವರ ವಾರಂಬಳ್ಳಿ ನಿವಾಸಿಗಳಾದ ಮಂಜುನಾಥ್ ದಮ್ಮೂರ್ (19), ಶ್ರೀಕಾಂತ್ (28), ಶರಣಪ್ಪ (19), ಮಂಗಳೂರು ಬಿಜೈ ನಿವಾಸಿ ರಾಜೇಶ್ ಶೆಟ್ಟಿ (40), ಸುರತ್ಕಲ್ ಕುಳಾಯಿ ನಿವಾಸಿ ಸುಕೇಶ್ ಕೋಟ್ಯಾನ್ (34), ಕಾಸರಗೋಡು ಪಾವೂರಿನ ನೌಶಾದ್ ಅಲಿ (21) ಬಂದಿತ ಆರೋಪಿಗಳು.

ಪೊಲೀಸರ ಸಮಯಪ್ರಜ್ಞೆ
ಕುಂದಾಪುರ ಪಿಎಸ್ಐ ಹರೀಶ್ ಆರ್ ಹಾಗೂ ಸಿಬ್ಬಂದಿಗಳು ಬೀಜಾಡಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇನ್ನೋವಾ ಕಾರು ಹಾಗೂ ಇನ್ಸುಲೇಟರ್ ವಾಹನವನ್ನು ನಿಲ್ಲಿಸಲು ಸೂಚಿಸಿದ್ದು ಪೊಲೀಸರನ್ನು ಕಂಡು ಬೆದರಿದ ಅವರು ಕೊಂಚ ದೂರ ಕ್ರಮಿಸಿ ವಾಹನ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದರು. ಕೂಡಲೇ ಅವರನ್ನು ಸುತ್ತುವರಿದ ಪೊಲೀಸರು ಆ ವ್ಯಕ್ತಿಗಳ ಮೇಲೆ ಅನುಮಾನಗೊಂಡು ಕೂಲಂಕುಷವಾಗಿ ವಿಚಾರಿಸಿದ್ದು ಬೆಂಗಾವಲು ವಾಹನ (ಎಸ್ಕಾರ್ಟ್) ಇಟ್ಟುಕೊಂಡು ಇನ್ಸುಲೆಟರ್ ವಾಹನದಲ್ಲಿ ಮರಳು ತುಂಬಿಸಿ ಮಂಗಳೂರಿನ ಬಿ.ಸಿ. ರೋಡಿನಿಂದ ಬೀಜಾಡಿಗೆ ಸಾಗಿಸುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದರು. ಈ ವೇಳೆ ಲೋಡುಗಟ್ಟಲೆ ಮರಳು ತುಂಬಿದ ಇನ್ಸುಲೇಟರ್ ವಾಹನ, ಎಸ್ಕಾರ್ಟ್ ಮಾಡುತ್ತಿದ್ದ ಇನ್ನೋವಾ ಕಾರು ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರಿನಿಂದ ದುಪ್ಪಟ್ಟು ಹಣಕ್ಕೆ ಈ ಮರಳನ್ನು‌ ಸಾಗಿಸಲಾಗುತ್ತಿದ್ದು ಹಲವು ತಿಂಗಳುಗಳಿಂದ ಈ‌ ಜಾಲ ಸಕ್ರೀಯವಾಗಿ ಕಾರ್ಯಚರಿಸುತ್ತಿದೆ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಕುಂದಾಪುರ ಪಿಎಸ್ಐ ಹರೀಶ್ ಆರ್, ಎಎಸ್ಐ ಸುಧಾಕರ್, ಹೆಡ್ ಕಾನ್ಸ್‌ಟೇಬಲ್ ಗಳಾದ ವಿಜಯ, ಹರೀಶ್, ಸಿಬ್ಬಂದಿಗಳಾದ ಆನಂದ ಗಾಣಿಗ, ಪ್ರವೀಣ್, ಮಂಜುನಾಥ್, ಇಲಾಖಾ ಜೀಪು ಚಾಲಕ ಲೋಕೇಶ ಮೊದಲಾದವರಿದ್ದರು.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.