ಕರಾವಳಿ

ಹಫ್ತಾಕ್ಕೆ ಬೆದರಿಕೆ ಹಾಕಿದ ಬನ್ನಂಜೆ ರಾಜಾನ ಐವರು ಸಹಚರರ ಬಂಧನ: ಹಫ್ತಾ ಕರೆ ಬಂದ್ರೆ ದೂರು ನೀಡಿ!

Pinterest LinkedIn Tumblr

ಉಡುಪಿ: ಭೂಗತ ಪಾತಕಿ, ಸದ್ಯ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿರುವ ಬನ್ನಂಜೆ ರಾಜಾನ ಐವರು ಸಹಚರರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಮಾ.13ರಂದು ಹಫ್ತಾ ಹಣಕ್ಕಾಗಿ ಶಶಿ ಪೂಜಾರಿ ಎಂಬಾತ ಬೆದರಿಕೆ ಹಾಕಿದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುರುವಾರ ಉಡುಪಿ ಡಿಸಿಐಬಿ ತಂಡವು ಆರೋಪಿಗಳಾದ ಮೂಲ್ಕಿ ಕೊಲ್ನಾಡು ಕೆ.ಎಸ್‌.ರಾವ್‌ ನಗರದ ಶಶಿ ಪೂಜಾರಿ ಅಲಿಯಾಸ್‌ ಶಾಡೋ(28), ರವಿಚಂದ್ರ ಪೂಜಾರಿ ಅಲಿಯಾಸ್‌ ವಿಕ್ಕಿ ಪೂಜಾರಿ (30), ಮೂಲತಃ ಮಂಗಳೂರು ಉಳಾಯಿಬೆಟ್ಟಿನವನಾಗಿದ್ದು, ಪ್ರಸ್ತುತ ಕಟಪಾಡಿ ಏಣಗುಡ್ಡೆ ಫಾರೆಸ್ಟ್‌ ಗೇಟ್‌ ಬಳಿ ವಾಸವಿದ್ದ ಧನರಾಜ್‌ ಪೂಜಾರಿ ಅಲಿಯಾಸ್‌ ಧನರಾಜ್‌ ಅಲಿಯಾಸ್‌ ರಾಕಿ (26), ಮಲ್ಪೆ ಕೊಳದ ಧನರಾಜ್‌ ಸಾಲ್ಯಾನ್‌ ಅಲಿಯಾಸ್‌ ಧನು ಕೊಳ (30) ಮತ್ತು ಮಲ್ಪೆ ಸರಕಾರಿ ಪಿ.ಯು ಕಾಲೇಜು ಬಳಿಯ ಉಲ್ಲಾಸ್‌ ಶೆಣೈ(27)ಯನ್ನು ಬಂಧಿಸಿದೆ.

ಬೆಂಗಳೂರಿನಲ್ಲಿ ಅರೆಸ್ಟ್…
ಮಾ.21ರಂದು ರಾತ್ರಿ ಬೆಂಗಳೂರು ಜೆ.ಪಿ.ನಗರದ ಬ್ರಿಗೇಡ್‌ ಅಡ್ಡರಸ್ತೆಯ ಬಾರೊಂದರ ಬಳಿ ಶಶಿ ಪೂಜಾರಿ, ರವಿಚಂದ್ರ ಪೂಜಾರಿ ಮತ್ತು ಧನರಾಜ್‌ ಪೂಜಾರಿಯನ್ನು ಬಂಧಿಸಿದ್ದರು. ಆ ಆರೋಪಿಗಳು ನೀಡಿದ ಮಾಹಿತಿಯಂತೆ ಮಾ.22ರಂದು ಬೆಳಗ್ಗೆ ಮಲ್ಪೆಯಲ್ಲಿ ಧನರಾಜ್‌ ಸಾಲ್ಯಾನ್‌ನನ್ನು ಬಂಧಿಸಲಾಗಿದೆ. ಬಳಿಕ ಸಂಜೆ ಉಡುಪಿ ಕೋರ್ಟ್‌ ರಸ್ತೆಯ ಬದಿಯಲ್ಲಿ ಬ್ರಹ್ಮಾವರ ಪೊಲೀಸರು ಉಲ್ಲಾಸ ಶೆಣೈಯನ್ನು ಬಂಧಿಸಿದರು. ಇವರ ವಿರುದ್ಧ ಮಂಗಳೂರಿನ ಬಂದರು, ಕದ್ರಿ, ಬರ್ಕೆ, ಉರ್ವ, ಉಳ್ಳಾಲ, ಮಣಿಪಾಲ, ಮಲ್ಪೆ ಮೊದಲಾದ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿದ್ದವರು..
ಈ ದಾಳಿಯಲ್ಲಿ ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕ ಸಿ. ಕಿರಣ್ ರವರ ಜೊತೆ ಎ.ಎಸ್.ಐ. ರವಿಚಂದ್ರ, ಸಿಬ್ಬಂದಿಯವರಾದ ಸುರೇಶ್, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ ಹಾಗೂ ಚಾಲಕ ರಾಘವೇಂದ್ರ ರವರು ಭಾಗವಹಿಸಿರುತ್ತಾರೆ. ಡಿ.ಸಿ.ಐ.ಬಿ. ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಹಪ್ತಾ ಕರೆ ಬಂದರೆ ದೂರು ಕೊಡಿ…
ಹಫ್ತಾ ಕರೆ ಬಂದರೆ ಹತ್ತಿರದ ಠಾಣೆ, ಪೊಲೀಸ್‌ ಕಂಟ್ರೋಲ್‌ ರೂಂ (0820- 2526444) ಅಥವಾ udupipolice.org ಗೆ ದೂರು ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.