ಕರಾವಳಿ

ಮತದಾ‌ನ ಜಾಗೃತಿಗಾಗಿ ರೆಡಿಯಾಗಿದೆ ಜಿಂಗಲ್ಸ್‌ಗಳು: ರೇಡಿಯೋದಲ್ಲಿ ಮಾರ್ಧನಿಸಲಿದೆ ಮತದಾನ ಸಂದೇಶ..!

Pinterest LinkedIn Tumblr

ಉಡುಪಿ: ರೇಡಿಯೋ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಕೇಳುಗರನ್ನು , ಯಾವುದೇ ಮೊಬೈಲ್ ನೆಟ್‍ವರ್ಕ್ ಮತ್ತು ಕೇಬಲ್ ವಾಹಿನಿಗಳು ತಲುಪದ ಹಾಗೂ ರಸ್ತೆ ಸಂಪರ್ಕ ಇಲ್ಲದ ಕಾಡು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಸಹ ರೇಡಿಯೋ ಪ್ರಸಾರವಾಗುತ್ತಿದೆ, ಈ ರೇಡಿಯೋ ಕೇಳುಗರಿಗಾಗಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನ ರೀತಿಯ ಜಿಂಗಲ್ಸ್ ಗಳ ಮೂಲಕ ಮತದಾನ ಜಾಗೃತಿ ಮೂಡಿಸಲು , 4 ರೀತಿಯ ಜಿಂಗಲ್ಸ್ ಗಳನ್ನು ಸಿದ್ದಪಡಿಸಲಾಗಿದೆ.

ಮೊದಲ ಜಿಂಗಲ್ಸ್ ನಲ್ಲಿ, ತುಳು ಭಾಷೆಯಲ್ಲಿ ಯುವ ಜನರನ್ನು ಉದ್ದೇಶವಾಗಿಟ್ಟುಕೊಂಡು ಸಿದ್ದಪಡಿಸಿದ್ದು, ಇದರಲ್ಲಿ ಮತದಾನದ ದಿನ ಇರುವ ರಜೆಯಲ್ಲಿ ಪ್ರವಾಸಕ್ಕೆ ಹೊರಟುವ ಯುವ ಜನತೆಗೆ ಮತದಾನ ಜಾಗೃತಿಯ ಸಂದೇಶ ನೀಡಲಾಗಿದೆ.

ಎರಡನೇ ಜಿಂಗಲ್ಸ್ ನಲ್ಲಿ, ಕುಂದಾಪ್ರ ಕನ್ನಡ ಭಾಷೆಯಲ್ಲಿ ಸಿದ್ದಪಡಿಸಿರುವ ಜಿಂಗಲ್ಸ್ ನಲ್ಲಿ, ಯುವ ಮತದಾರರೊಬ್ಬರೂ ಪ್ರಥಮ ಬಾರಿ ತಾವು ಮತದಾನ ಮಾಡುವುದರ ಜೊತೆಗೆ ಮತದಾನ ಮಾಡದೆ ಮನೆಯಲ್ಲಿ ಕುಳಿತ ಕನಿಷ್ಠ 2 ಜನರನ್ನಾದರೂ ಮತಕೇಂದ್ರಕ್ಕೆ ಕರೆದೊಯ್ದು ಮತದಾನ ಮಾಡಿಸಿ,ತನ್ನ ಮೊದಲ ಮತದಾನವನ್ನು ಸ್ಮರಣೀಯವನ್ನಾಗಿ ಮಾಡಿಕೊಳ್ಳುತ್ತೇನೆ, ಅ ಮೂಲಕ ದೇಶಕ್ಕೆ ಕೊಡುಗೆ ನೀಡುತ್ತೇನೆ ಎಂಬ ಸಂದೇಶ ಇದೆ.

3ನೇ ಜಿಂಗಲ್ಸ್ ನಲ್ಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ಇದೆ.

4 ನೇ ಜಿಂಗಲ್ಸ್ ನಲ್ಲಿ, ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ನೀಡಿರುವ ಮತದಾನ ಕುರಿತ ಈ ಸಂದೇಶ ಯಾವುದೇ ಸಮಾರಂಭಗಳಿದ್ದರೂ ಮತದಾನ ಮೊದಲು ಎನ್ನುವ ಸಂದೇಶ ನೀಡಿದೆ, ಏಪ್ರಿಲ್ 18 ರಂದು ನಡೆಯುವ ನಮ್ಮ ಮದುವೆಗೆ,ನೀವು ತಪ್ಪದೇ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದೇ ನಮಗೆ ನೀಡುವ ದೊಡ್ಡ ಉಡುಗೊರೆಯಾಗಿದೆ ಎಂಬ ಕರೆ ಇದೆ.

ಎಲ್ಲಾ ಜಿಂಗಲ್ಸ್ ಗಳಲ್ಲಿ ಏಪ್ರಿಲ್ 18 ರಂದು ಉಡುಪಿ, ಕುಂದಾಪುರ, ಕಾಪು , ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತು ಏಪ್ರಿಲ್ 23 ರಂದು ಬೈಂದೂರು ನಡೆಯುವ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶ ಇದೆ, ಈ ಮೂಲಕ ಉಡುಪಿ ಜಿಲ್ಲೆಯಲ್ಲಿ 2 ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಎಲ್ಲಾ ಮತದಾರನ್ನೂ ತಲುಪಲು ಸ್ವೀಪ್ ಸಮಿತಿ ಜಿಂಗಲ್ಸ್ ತಯಾರಿಸಿದೆ.

ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಈ ಜಿಂಗಲ್ಸ್ ಹರಿದಾಡುತ್ತಿದ್ದು, ಆಕಾಶವಾಣಿಯಲ್ಲಿ ಪ್ರತಿದಿನ ನಿಗಧಿತ ಸಮಯದಲ್ಲಿ ಕೇಳುಗರನ್ನು ತಲುಪಲಿದೆ.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ನಿರ್ದೇಶನದಂತೆ, ಆಕಾಶವಾಣಿ ಮಾತ್ರವಲ್ಲದೇ ಯುವಜನತೆಯನ್ನು ತಲುಪುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಾದ ವಾಟ್ಯಾಪ್, ಯೂ ಟ್ಯೂಬ್, ಫೇಸ್ ಬುಕ್, ಟ್ವಿಟರ್ ನಲ್ಲಿ ಸಹ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿರುವ ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕ ಜೇಮ್ಸ್ ಡಿಸಿಲ್ವಾ ಅವರು.

Comments are closed.