ಕರಾವಳಿ

ವಕ್ವಾಡಿ ಶ್ರೀ ನಂದಿಕೇಶ್ವರ, ಪಂಜುರ್ಲಿ ದೈವಸ್ಥಾನ ಹಾಲುಹಬ್ಬದಲ್ಲಿ ಕಿರುತೆರೆ ಕಲಾವಿದರು

Pinterest LinkedIn Tumblr

ಕುಂದಾಪುರ: ತಾಲೂಕಿನ ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ, ಪಂಜುರ್ಲಿ ಹಾಗೂ ಪರಿವಾರ ದೈವಗಳ ದೇವಸ್ಥಾನದಲ್ಲಿ ಫೆ.16ಶನಿವಾರದಂದು ಹಾಲುಹಬ್ಬ ಕೆಂಡಸೇವೆ ಸಂಭ್ರಮದಿಂದ ಜರುಗಿತು. ಈ ಸಂಭ್ರಮಕ್ಕೆ ಕಿರುತೆರೆ ನಟನಟಿಯರು ಆಗಮಿಸಿ ಇನ್ನಷ್ಟು ಮೆರಗು ನೀಡಿದರು.

ಕಾರಣಿಕ ಸ್ಥಳವಾಗಿ ಗುರುತಿಸಿಕೊಂಡ ಕುಂದಾಪುರ ತಾಲೂಕಿನ ವಕ್ವಾಡಿಯ ಈ ದೈವಸ್ಥಾನದಲ್ಲಿ ಶಿವರಾತ್ರಿ ತಿಂಗಳ ಎರಡನೇ ವಾರದಲ್ಲಿ ಹಾಲುಹಬ್ಬ ಹಾಗೂ ಕೆಂಡಸೇವೆ ವಿಜೃಂಭಣೆಯಿಂದ ಜರಗುತ್ತದೆ. ಗೋಳಿಹಾಡಿ ದೈವಸ್ಥಾನವು ಅನಾದಿ ಕಾಲದ ಹಿಂದೆ ಒಡಮೂಡಿದ ದೈವದ ಸ್ಥಳವಾಗಿದೆ. ಊರಿನಲ್ಲಿ ಕಾಲರಾ ಮೊದಲಾದ ಮಾರಕ ರೋಗಗಳು ಬಂದಿದ್ದಾಗ ಹರಕೆ ಹೊತ್ತ ಸಂದರ್ಭ ಎಲ್ಲಾ ರೋಗ ರುಜಿನಗಳು ಮಾಯವಾಗಿ ಊರಿನಲ್ಲಿ ಸಮೃದ್ಧಿ ನೆಲಸಿದ ದೃಷ್ಟಾಂತಗಳಿದೆ. ಒಡಮೂಡಿದ ನಂದಿ ಹಾಗೂ ಪಂಜುರ್ಲಿ ಇಲ್ಲಿನ ಪ್ರಧಾನ ದೈವವಾಗಿದೆ. ಊರಿನವರು ಕೇಳಿದ ಕೋರಿಕೆಯನ್ನು ಹಾಗೂ ಭಕ್ತರ ಇಷ್ಟಾರ್ಥಗಳನ್ನು ದೈವ ಈಡೇರಿಸಿದೆ.

ದೈವಸ್ಥಾನದಲ್ಲಿ ಕೆಂಡಸೇವೆ ಹಾಲುಹಬ್ಬದ ಪ್ರಯುಕ್ತ ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗಿತು. ವಕ್ವಾಡಿ ಮೂಲದ ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್ ಅವರು ಅನ್ನಸಂತರ್ಪಣೆ ಸೇವೆ ಹಾಗೂ ದೇವಳಕ್ಕೆ ಪುಷ್ಪಾಲಂಕಾರ ಮಾಡಿಸಿದ್ದರು. ಈ ಸಂದರ್ಭ ಗೋಳಿಹಾಡಿ ಶ್ರೀ ನಂದಿಕೇಶ್ವರ ಮತ್ತು ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಶೆಟ್ಟಿ ಮೇಲ್ಮನೆ, ಸೇವಾಕರ್ತರಾದ ವಿ.ಕೆ. ಮೋಹನ್ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.

ಕಲಾವಿದರ ದಂಡು..
ಟಿ.ವಿ. ನಿರೂಪಕ ನಿರಂಜನ್ ದೇಶಪಾಂಡೆ, ಅವರ ಪತ್ನಿ ಯಶಸ್ವಿನಿ ನಿರಂಜನ್ ದೇಶಪಾಂಡೆ, ಕಿರುತೆರೆಯ ಪ್ರಸಿದ್ಧ ಕಲಾವಿದರಾದ ನಾಗಿಣಿ ಧಾರಾವಾಹಿಯ ನಟಿಯರಾದ ದೀಪಿಕಾ ದಾಸ್, ಕರಿಷ್ಮಾ ಅಮಿನ್, ಮುದ್ದುಲಕ್ಷ್ಮೀ ಖ್ಯಾತಿಯ ವಾಣಿಶ್ರೀ, ಪದ್ಮಾವತಿ ಧಾರಾವಾಹಿಯ ನಟ ವಿಕ್ರಮ್, ನಟಿ ದೀಪ್ತಿ ಆಗಮಿಸಿದ್ದು ಇವರೆಲ್ಲರನ್ನೂ ದೈವಸ್ಥಾನದ ವತಿಯಿಂದ ಕರುಣಾಕರ್ ಶೆಟ್ಟಿ ಅವರು ಸನ್ಮಾನಿಸಿದರು.

ಊಟ ಬಡಿಸಿದರು!
ಕಳೆದ ವರ್ಷ ಈ ಹಬ್ಬಕ್ಕೆ ಆಗಮಿಸಿದ್ದ ನಿರೂಪಕ ನಿರಂಜನ್ ದೇಶಪಾಂಡೆ ಈ ಬಾರಿಯೂ ಆಗಮಿಸಿದ್ದರು. ನೆರೆದ ಭಕ್ತಾಧಿಗಳನ್ನು ಮಾತನಾಡಿಸಿದ್ದಲ್ಲದೇ ಊಟದ ಪಂಕ್ತಿಯಲ್ಲಿ ನಡೆದು ಸಾಗಿ ನೀರು ನೀಡಿ, ಊಟ ಬಡಿಸಿ ಜನರ ಪ್ರೀತಿಗೆ ಪಾತ್ರರಾದರು. ಕಲಾವಿದರನ್ನು ಕಾಣಲು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಲ್ಲದೇ ಪರಸ್ಪರ ಮಾತನಾಡಿ ಸಂಭ್ರಮಿಸಿದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.