ಕರಾವಳಿ

ಭಾರತದ ಭವ್ಯ ಮತ್ತು ಭಕ್ತಿ ಪರಂಪರೆಗೆ ಬಂಜಾರ ಸಮುದಾಯದ ಕೊಡುಗೆ ಅಪಾರ : ಕಲ್ಕೂರ

Pinterest LinkedIn Tumblr

ಮಂಗಳುರು ಫೆಬ್ರವರಿ 15 : ಭಾರತದ ಭವ್ಯ ಮತ್ತು ಭಕ್ತಿ ಪರಂಪರೆಗೆ ಬಂಜಾರ ಸಮುದಾಯದ ಕೊಡುಗೆ ಅಪಾರ, ಅವರ ಹೆಣ್ಣುಮಕ್ಕಳ ಉಡುಗೆ ತೊಡುಗೆಯು ಅವರು ಸೌಂಧರ್ಯ ಆರಾಧಕರೆಂಬುದಕ್ಕೆ ಸಾಕ್ಷಿ, ಅಂತಹ ಜನಾಂಗದಲ್ಲಿ ಹುಟ್ಟಿದ ಸೇವಾಲಾಲರು ತಮ್ಮ ಜನಾಂಗಕ್ಕೆ ಅವರ ಜೀವನವನ್ನೇ ಮುಡಿಪಿಟ್ಟವರು, ಸಮುದಾಯವನ್ನು ಒಟ್ಟುಗೂಡಿಸಿ ಸನ್ಮಾರ್ಗದಲ್ಲಿ ಕರೆದು ಕೊಂಡುಹೋದವರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಶ್ರೀ ಸೇವಾಲಾಲ್ ಬಂಜಾರ್ (ಲಂಬಾಣಿ) ಸಂಘ (ರಿ). ಇವರ ಸಹಕಾರದೊಂದಿಗೆ ಶ್ರೀ ಸೇವಾಲಾಲ ಜಯಂತಿಯು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಭವನ, ಹಂಪನಕಟ್ಟೆ, ಮಂಗಳೂರಿನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಶುಸಂಗೋಪನೆ ಮತ್ತು ಸುಸಂಸ್ಕೃತಿಯಿಂದ ಬಾಳುವ ಜನಾಂಗ ಅವರ ಕರಕುಶಲತೆಯಿಂದಲೇ ಗುರುತಿಸಿಕೊಂಡ ಜನಾಂಗ, ಮತ್ತು ಶಿವಶರಣರ ಮಾತಿನಂತೆ ಸೇವಾಲಾಲರು ಸಮುದಾಯದ ಜನರಿಗೆ ಜೀವನದ ಮೌಲ್ಯಗಳ ಕುರಿತು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಎಂದು ಸಂದೇಶ ನೀಡಿದವರು. ವ್ಯಸನಮುಕ್ತರಾಗುವುದು ಮತ್ತು ಶಿಕ್ಷಣ ಪಡೆಯುವ ಅಗತ್ಯತೆಯನ್ನು ಅಂದೇ ಅರಿತು ಅವರು ಪ್ರತಿಪಾದಿಸಿದ್ದರು.

ಉಪನ್ಯಾಸ ನೀಡಿದ ಡಾ. ಗೀತಾ ವಿ.ಅವರು ಮಾತನಾಡಿ, ಬಂಜಾರ (ಲಂಬಾಣಿ) ಜನಾಂಗದ ಚರಿತ್ರೆ ದ್ವಾಪರ ಯುಗದಿಂದಲೇ ಪ್ರಾರಂಭಿಸಿದ್ದು ಶ್ರೀಕೃಷ್ಣನ ಪರಮಭಕ್ತನಾದ ದಾದಾ ಮೌಲಿಯವರಿಂದ ಈ ಜನಾಂಗದ ಉದಯವಾಯಿತು. ನಂತರ ನಮ್ಮನ್ನು ‘ಗೋರ್ ಮಾಟಿ’ ಮತ್ತು ನಮ್ಮ ಹಾಡುಗಳನ್ನು ‘ಗೋರ್ ಬೋಲಿ’ ಎಂಬ ಪದಗಳಿಂದ ನಮ್ಮ ಇಡೀ ಇತಿಹಾಸ ಲಭಿಸಿದೆ.

ಇವರು ಯಾವ ರಾಜ್ಯದಲ್ಲಿ ಇದ್ದರು ಸಹಿತ ನಮ್ಮ ಕಲೆ, ಸಂಸ್ಕೃತಿ , ಸಂಪ್ರದಾಯ, ಉಡುಗೆತೊಡುಗೆ ಒಂದೇ ಇದು ನಮ್ಮ ವಿಶೇಷ ಮತ್ತು ನಮ್ಮ ಉಡುಗೆತೊಡಿಗೆಗಳು ಹರಪ್ಪ ಮತ್ತು ಮೆಹೇಂಜೋದಾರೋ ನಾಗರೀಕತೆಗಳ ಉಡುಗೆತೊಡುಗೆಗೆ ಸಾಮ್ಯತೆ ಇದೆ ಎಂದು ಹೇಳಿದರು.

1739 ರಲ್ಲಿ ಫೆಬ್ರವರಿ 15 ರಂದು ಶಿರಿಗೋಂಡನಕೊಪ್ಪದಲ್ಲಿ ಜನಿಸಿದ ಸೇವಾಲಾಲರು, ಸಂಗೀತ ಪ್ರಿಯರಾಗಿರುತ್ತಾರೆ, ತಮ್ಮ ಹಾಡುಗಳಿಂದಲೇ ಮತ್ತು ಸತ್ಯ ಅಹಿಂಸೆ ಪ್ರತಿಪಾದಕರಾಗಿ ಜೀವನದುದ್ದಕ್ಕೂ ನಡೆಯುತ್ತಾ ಬಂದಿದ್ದಾರೆ, ಸರ್ವೇ ಲೋಕ ಸುಖಿನೋ ಭವಂತು ಜೀವರಾಶಿಗಳಿಗೆಲ್ಲ ಒಳ್ಳೆಯದಾಗಲಿ ಎಂದು ತಮ್ಮ ಪಂಚ ಸೂತ್ರಗಳಲ್ಲಿ ಹೇಳಿದ್ದಾರೆ, ಹೀಗೆ ಸರ್ವರ ಹಿತವನ್ನು ಬಯಸಿ ಹಾರೈಸಿದವರು ಶ್ರೀಸೇವಾಲಾಲ್ ಗುರುಗಳು ಎಂದು ಡಾ. ಗೀತಾ ವಿ.ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ). ಮಂಗಳೂರು, ಅಧ್ಯಕ್ಷರು ಜಯಪ್ಪ ಲಮಾಣಿ, ಕಾರ್ಯದರ್ಶಿ ಚಂದು ನಾಯಕ್, ರಾಚಪ್ಪ ಲಮಾಣಿ ಸಮಾಜದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಉಪಸ್ಥಿತರಿದ್ದರು.

Comments are closed.