ಕರಾವಳಿ

ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ `ಅನುಕ್ತ’ ಪ್ರೇಕ್ಷಕರಿಗೆ ಇಷ್ಟವಾಗಿದೆ : ನಿರ್ಮಾಪಕ ಹರೀಶ್ ಬಂಗೇರ

Pinterest LinkedIn Tumblr

ಮಂಗಳೂರು: ರಾಜ್ಯಾದ್ಯಂತ ತೆರೆ ಕಂಡಿರುವ `ಅನುಕ್ತ’ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. `ಅನುಕ್ತ’ ಸಿನಿಮಾ ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಕುತೂಹಲ ಥ್ರಿಲ್ಲರ್, ಸಸ್ಪೆನ್ಸ್‌ನಿಂದ ಕೂಡಿದ್ದು, ಎಲ್ಲಾ ವರ್ಗದ ಜನರಿಗೆ ಇಷ್ಟವಾಗಿದೆ ಎಂದು ಸಿನಿಮಾದ ನಿರ್ಮಾಪಕ ಹರೀಶ್ ಬಂಗೇರ ತಿಳಿಸಿದ್ದಾರೆ.

ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಪ್ರೇಮಿಯರ್ ಶೋ ಪ್ರದರ್ಶನದ ವೇಳೆ ಮಾತನಾಡಿದ ಅವರು `ಅನುಕ್ತ’ ಎಂದರೆ ಹೇಳಲಾಗದೇ ಉಳಿದ ಮಾತು. ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಮೂರು ಘಟನೆಗಳು ಯಾರೊಂದಿಗೂ ಹೇಳಲಾಗದೇ ಪಾತ್ರಗಳ ಎದೆಯೊಳಗೆ ಹುದುಗಿ ಹೋಗಿದ್ದು, ಒಂದು ಕೊಲೆಯ ಮೂಲಕ ಅವುಗಳ ಉತ್ಕನನವಾಗುತ್ತದೆ. ಹೀಗಾಗಿ ಸಿನಿಮಾ ಪ್ರೇಕ್ಷಕರಿಗೆ ಕುತೂಹಲವನ್ನು ಮೂಡಿಸುತ್ತದೆ ಎಂದವರು ತಿಳಿಸಿದರು.

ಸಿನಿಮಾದ ನಿರ್ದೇಶಕ ಅಶ್ವಥ್ ಸ್ಯಾಮುವೆಲ್ ಮಾತನಾಡಿ, ಇದೊಂದು ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಒಂದಡೆ ದೈವಾರಾಧನೆ, ಮತ್ತೊಂದಡೆ ಮರ್ಡರ್ ಕತೆ, ಅವರೆಡನ್ನು ಹೊಂದಿಸಿ ಹೊಸತೊಂದು ಕತೆ ಹೇಳಿದ್ದೇವೆ. ಪ್ರೇಕ್ಷಕರಿಗೆ ಇಷ್ಟವಾಯಿತು.

ಈ ಸಿನಿಮಾಕ್ಕೆ ಬ್ರಹ್ಮಾವರದಲ್ಲಿರುವ 500 ವರ್ಷಗಳ ಹಿಂದಿನ ಪುರಾತನ ಮನೆ, ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಜತೆಗೆ ಇಲ್ಲಿಯ ಭಾಷೆಯನ್ನು ಬಳಸಿದ್ದೇವೆ. ಇಲ್ಲಿಯ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರೂ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗುವುದರಿಂದ ತುಂಬಾ ಖುಷಿಯಾಗುತ್ತಿದೆ ಎಂದು ನಿರ್ದೇಶಕ ಅಶ್ವಥ್ ಸ್ಯಾಮುವೆಲ್ ತಿಳಿಸಿದರು.

ಈ ಸಂದರ್ಭದಲ್ಲಿ ನಟ ಕಾರ್ತಿಕ್, ಸಿನಿಮಾದ ಎಕ್ಸಿಕ್ಯೂಟಿವ್ ನಿರ್ಮಾಪಕ ಸುಧಾಕರ ಕುದ್ರೋಳಿ ಹಾಗೂ ಕಲಾವಿದರು ಉಪಸ್ಥಿತರಿದ್ದರು. `ಅನುಕ್ತ’ ಸಿನಿಮಾ ದೇಯಿ ಪ್ರೊಡಕ್ಷನ್ ಲಾಂಛನದಲ್ಲಿ ತಾಯಾರಾಗಿದ್ದು, ಹರೀಶ್ ಬಂಗೇರ ಸಿನಿಮಾದ ನಿರ್ಮಾಪಕರಾಗಿದ್ದಾರೆ.

Comments are closed.