ಕರಾವಳಿ

ಅಂಗಾಂಗಗಳ ಜಾರುವಿಕೆ (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಬಗ್ಗೆ ತಿಲಿಯಿರಿ

Pinterest LinkedIn Tumblr

ಮಹಿಳೆಯ ಕಿಬ್ಬೊಟ್ಟೆಯಲ್ಲಿರುವ ಅಂಗಗಳು (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ ಪ್ರಕ್ರಿಯೆಯನ್ನು ‘ಪೆಲ್ವಿಕ್ ಆಗ್ರ್ಯಾನ್ ಪ್ರೊಲ್ಯಾಪ್ಸ್’ ಎಂದು ಹೇಳಲಾಗುತ್ತದೆ. ಹೆರಿಗೆ ಸಂದರ್ಭದಲ್ಲಿ ಹಾಗೂ ಅಲ್ಲಿರುವ ಲಿಗಮೆಂಟ್ಸ್ ಮತ್ತು ಸ್ನಾಯುಗಳು ದುರ್ಬಲವಾದಾಗ ಹಾಗೂ ದೊಡ್ಡ ಗಾತ್ರದ ಮಗುವಿನ ಜನನವಾದ ಸಂದರ್ಭದಲ್ಲಿ, ಹಾರ್ಮೋನು ಪ್ರಭಾವ ಕಡಿಮೆಯಾದಾಗ ಲಿಗಮೆಂಟ್ಸ್ ಮತ್ತು ಸ್ನಾಯುಗಳು ದುರ್ಬಲವಾಗುತ್ತವೆ.

ಅಂಗಗಳ ಜಾರುವಿಕೆ ಎಷ್ಟು ಸಾಮಾನ್ಯ?
ಐವತ್ತರ ಬಳಿಕ ಶೇ. 50ರಷ್ಟು ಮಹಿಳೆಯರಿಗೆ ಹಾಗೂ 70ರಿಂದ 80ನೇ ವಯಸ್ಸಿನಲ್ಲಿ ಹತ್ತರಲ್ಲಿ ಒಬ್ಬ ಮಹಿಳೆಗೆ ಅಂಗಗಳ ಜಾರುವಿಕೆ ಸಮಸ್ಯೆ ಉಂಟಾಗಬಹುದು.

ಅಂಗಗಳು ಕೆಳಗೆ ಜಾರುವುದೇಕೆ?
ಕೆಳಕಂಡ ಲಕ್ಷಣಗಳಿಂದ ಅಂಗಗಳ ಜಾರುವಿಕೆ ಸ್ಥಿತಿಗತಿಯನ್ನು ಕಂಡುಹಿಡಿಯಬಹುದು:

ಯಾವುದೇ ಲಕ್ಷಣಗಳು ಗೋಚರಿಸದೇ ಇದ್ದರೂ ಯೋನಿ ಪರೀಕ್ಷೆ ಮೂಲಕ ಅಂಗಗಳ ಜಾರುವಿಕೆಯನ್ನು ಕಂಡುಕೊಳ್ಳಬಹುದು.
ಗರ್ಭಾವಸ್ಥೆ ಹಾಗೂ ಹೆರಿಗೆಯಿಂದ ಕಿಬ್ಬೊಟ್ಟೆ ಭಾಗದಲ್ಲಿ ಸ್ನಾಯುಗಳು ಹಾಗೂ ಲಿಗಮೆಂಟ್ಸ್ ದುರ್ಬಲವಾಗುವುದು ಸಹಜ. ಮಗುವಿನ ಗಾತ್ರ ದೊಡ್ಡದಿದ್ದರೆ, ಹೆರಿಗೆ ಸಂದರ್ಭದಲ್ಲಿ ಫೋರ್ಸೆಫ್ ಅಂದರೆ ಇಕ್ಕುಳದಂತಹ ಉಪಕರಣಗಳನ್ನು ಬಳಸಿದ್ದಲ್ಲಿ, ಹೆರಿಗೆಗೆ ದೀರ್ಘ ಸಮಯ ತೆಗೆದುಕೊಂಡಿದ್ದಲ್ಲಿ, ಮಹಿಳೆಯೊಬ್ಬಳಿಗೆ ಹೆಚ್ಚು ಹೆರಿಗೆಗಳಾಗಿದ್ದರೂ ಹೀಗಾಗಬಹುದು.
ಮುಟ್ಟು ನಿಂತ ಬಳಿಕ ಹಾರ್ಮೋನು ಪ್ರಭಾವ ಕಡಿಮೆಯಾದಾಗ ಗರ್ಭಕೋಶ ಸಹಿತ ಬೇರೆ ಅಂಗಗಳು ಕೆಳಕ್ಕೆ ಜಾರಬಹುದು.
ಅತಿಯಾದ ತೂಕ ಇರುವವರಿಗೆ, ಬೊಜ್ಜುದೇಹಿಗಳಲ್ಲಿ ಹೀಗಾಗಬಹುದು.
ಮಲಬದ್ಧತೆ, ಬಹಳ ದಿನಗಳಿಂದ ಕಫದ ಜೊತೆಗೆ ಕೆಮ್ಮು ಇದ್ದರೆ, ತೂಕ ಹೆಚ್ಚು ಎತ್ತಿದಾಗ ಹೊಟ್ಟೆ ಮೇಲೆ ಭಾರ ಬಿದ್ದು ಒಳ ಅಂಗಗಳು ಜಾರಬಹುದು.
ಗರ್ಭಕೋಶದ ನಿವಾರಣೆಯ ಬಳಿಕ ಇತರ ಅಂಗಗಳಿಗೆ ಇದ್ದ ಆಸರೆ ತಪ್ಪಿ ಬೇರೆ ಅಂಗಗಳು ಕೆಳಕ್ಕೆ ಜಾರಬಹುದು.
ಅಂಗಗಳ ಜಾರುವಿಕೆಯ ಲಕ್ಷಣಗಳು

ಕೆಳಕಂಡ ಲಕ್ಷಣಗಳಿಂದ ಅಂಗಗಳ ಜಾರುವಿಕೆಯ ಸ್ಥಿತಿಗತಿಯನ್ನು ಕಂಡುಹಿಡಿಯಬಹುದು:
ಯಾವುದೇ ಲಕ್ಷಣಗಳು ಇರದಿದ್ದರೂ ಯೋನಿ ಪರೀಕ್ಷೆಯ ಮೂಲಕ ಒಳ ಅಂಗಗಳ ಜಾರುವಿಕೆಯನ್ನು ಕಂಡುಕೊಳ್ಳಬಹುದು. ಕೆಳಗೆ ಏನೋ ಬಂದಂತೆ ಅನಿಸಬಹುದು. ಕೈಗೆ ತಗಲಬಹುದು. ಅತಿಯಾಗಿ ಬೆನ್ನುನೋವು ಬರಬಹುದು. ಕೆಳಗೆ ಎಳೆದಂತೆ, ಭಾರವಾದಂತೆ ಅನಿಸಬಹುದು. ಒಮ್ಮೊಮ್ಮೆ ಅದು ಪೂರ್ತಿ ಹೊರಬಂದು ನಿಮಗೆ ಕಾಣಿಸಬಹುದು.
ಹಾಗೇನಾದರೂ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ. ತುಂಬಾ ದಿನ ಹಾಗೆಯೇ ಬಿಟ್ಟರೆ ಅಲ್ಸರ್ ಉಂಟಾಗಿ ಅಲ್ಲಿ ಸೋಂಕು ತಗುಲಬಹುದು.
ಗರ್ಭಕೋಶದ ಜೊತೆ ಕೆಲವೊಮ್ಮೆ ಮೂತ್ರಕೋಶ ಕೂಡ ಕೆಳಗೆ ಜಾರುತ್ತದೆ. ಆಗ ಮೂತ್ರ ಮಾಡಲು ಕಷ್ಟ ಎನಿಸುತ್ತದೆ. ಒಂದೇ ಸಲ ಪೂರ್ತಿ ಮೂತ್ರ ಮಾಡಲು ಆಗದೆ ಮತ್ತೆ ಮತ್ತೆ ಮೂತ್ರ ಮಾಡಲು ಹೋಗಬೇಕೆನಿಸುತ್ತದೆ. ಕೆಮ್ಮಿದಾಗ, ನಕ್ಕಾಗ ಮೂತ್ರ ಸೋರಿಕೆ ಆಗಬಹುದು.
ಪದೇ ಪದೇ ಮೂತ್ರ ಸೋಂಕು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.
ಕರುಳಿಗೆ ಅದರ ದುಷ್ಪರಿಣಾಮ ಉಂಟಾದರೆ ಬೆನ್ನಿನ ಕೆಳಭಾಗದಲ್ಲಿ ನೋವು ಅನಿಸುತ್ತದೆ. ಮಲವಿಸರ್ಜನೆ ಸರಿಯಾಗಿ ಆಗದೆ ಪದೇ ಪದೇ ಹೋಗಬೇಕೆನಿಸುತ್ತದೆ. ಜಾರಿದ ಭಾಗವನ್ನು ಪುನಃ ಒಳಗೆ ತಳ್ಳಿದಾಗಲೇ ಸಮಸ್ಯೆ ಸರಿ ಹೋಗುತ್ತದೆ.ಸಮಾಗಮ ಚಟುವಟಿಕೆಗೂ ಕಷ್ಟ ಎನಿಸಬಹುದು.

ಅಂಗಗಳ ಜಾರುವಿಕೆಯ ಪರೀಕ್ಷೆ ಹೇಗೆ?
ಯೋನಿ ಪರೀಕ್ಷೆಯ ಮೂಲಕ ವೈದ್ಯರು ಗರ್ಭಕೋಶದ ಜೊತೆಗೆ ಮೂತ್ರಕೋಶ ಹಾಗೂ ಕರುಳುಗಳು ಎಷ್ಟರಮಟ್ಟಿಗೆ ಜಾರಿವೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಅವುಗಳಿಗೆ ಅಲ್ಸರ್ ತಗುಲಿದೆಯೇ ಬೇರೆ ಸಮಸ್ಯೆ ಏನಾದರೂ ಇದೆಯೇ ಎನ್ನುವುದನ್ನು ಪತ್ತೆಹಚ್ಚುತ್ತಾರೆ.

ಬೇರೆ ಪರೀಕ್ಷೆಗಳು ಬೇಕಾ?
ಸೋಂಕು ತಗುಲಿದೆಯೇ ಎಂದು ಕಂಡುಕೊಳ್ಳಲು ಮೂತ್ರ ಪರೀಕ್ಷೆ ಮಾಡಲಾಗುತ್ತದೆ. ಕೆಮ್ಮಿದಾಗ, ನಕ್ಕಾಗ ಮೂತ್ರ ಸೋರಿಕೆ ಉಂಟಾಗುತ್ತದೆಯೇ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಹೆಚ್ಚು ನೀರು ಕುಡಿಯಲು ಹೇಳಿ ಮೂತ್ರ ಮಾಡಬೇಕು ಅನ್ನಿಸಿದಾಗ ಕೆಮ್ಮಲು, ನಗಲು ಹೇಳಿ ಮೂತ್ರ ಸೋರಿಕೆ ಆಗುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಹಾಗೇನಾದರೂ ಇದ್ದರೆ ಯೂರೋ ಡೈನಮಿಕ್ ಪರೀಕ್ಷೆಗೆ ಒಳಪಡಿಸುತ್ತಾರೆ

ಇದಕ್ಕೆ ಚಿಕಿತ್ಸೆ ಏನು?
ಗರ್ಭಕೋಶ ಸಹಿತವಾಗಿ ಯಾವುದೇ ಅಂಗ ಕೆಳಗೆ ಸ್ವಲ್ಪ ಮಟ್ಟಿಗೆ ಜಾರಿದರೆ ಕಾಯ್ದು ನೋಡಲು ಹೇಳುತ್ತಾರೆ. ಕೆಲವೊಮ್ಮೆ ವ್ಯಾಯಾಮ ಅನುಸರಿಸುವುದರಿಂದ ನಿಯಂತ್ರಣಕ್ಕೆ ಬರಬಹುದು.

ಜೀವನಶೈಲಿ ಬದಲಾವಣೆ
ದೇಹತೂಕ ಹೆಚ್ಚಿಗೆ ಇದ್ದರೆ ಅದನ್ನು ಇಳಿಸಿಕೊಳ್ಳಲು ಪ್ರಯತ್ನಿಸಿ.
ಬಹಳ ದಿನಗಳಿಂದ ಕೆಮ್ಮು ಕಫ ಇದ್ದರೆ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ.
ಧೂಮಪಾನದ ಚಟ ಇದ್ದರೆ ಅದನ್ನು ಬಿಡಲು ಪ್ರಯತ್ನಿಸಿ.
ಮಲಬದ್ಧತೆ ಸಮಸ್ಯೆ ಇದ್ದರೆ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ.
ಅತಿಯಾಗಿ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದನ್ನು ಕಡಿಮೆ ಮಾಡಿ.
ಕಿಬ್ಬೊಟ್ಟೆ ಭಾಗಗಳ ಲಿಗಾಮೆಂಟ್ಸ್, ಮತ್ತು ಸ್ನಾಯುಗಳ ಬಲವರ್ಧನೆಗೆ ವೈದ್ಯರು ವ್ಯಾಯಾಮ ಮಾಡಲು ಸೂಚಿಸುತ್ತಾರೆ.
ವೆಜೈನಲ್ ಹಾರ್ಮೋನು ಕ್ರೀಮು, ಮಾತ್ರೆ ಬಳಸಲು ಸೂಚಿಸುತ್ತಾರೆ. ಇದರಿಂದ ಲಿಗಮೆಂಟ್, ಸ್ನಾಯುಗಳ ಬಲವರ್ಧನೆಗೆ ನೆರವಾಗುತ್ತದೆ.
ಬೇರೆ ಏನಾದರೂ ಚಿಕಿತ್ಸೆಗಳಿವೆಯೇ?

ಯಾವ ಅಂಗ ಅಥವಾ ಅಂಗಗಳು ಎಷ್ಟರಮಟ್ಟಿಗೆ ಜಾರಿವೆ ಎನ್ನುವುದನ್ನು ಖಚಿತಪಡಿಸಿಕೊಂಡು ಕೆಳಕಂಡ ಚಿಕಿತ್ಸಾ ಉಪಾಯಗಳನ್ನು ಅನುಸರಿಸಲಾಗುತ್ತದೆ:

1 ಪೆಸರಿ (ರಿಂಗ್ ಅಳವಡಿಕೆ): ನಿಮಗೆ ಶಸ್ತ್ರಚಿಕಿತ್ಸೆ ಬೇಡ ಅನಿಸಿದಲ್ಲಿ, ಮುಂದೆ ಮಗು ಬೇಕು ಎನಿಸಿದಲ್ಲಿ ಸ್ನಾಯುಗಳ ಬಲವರ್ಧನೆಗೆ ರಿಂಗ್ ಅಳವಡಿಸಿಕೊಂಡು ಎಲ್ಲ ಸಮಸ್ಯೆಗಳಿಂದ ಮುಕ್ತರಾಗಬಹುದು. ‘ಪೆಸರಿ’ ಎನ್ನುವುದು ಒಂದು ಪ್ಲಾಸ್ಟಿಕ್ ಅಥವಾ ಸಿಲಿಕಾನ್ ರಿಂಗಾಗಿದ್ದು, ಗರ್ಭಕೋಶ ಹಾಗೂ ಇತರ ಅಂಗಗಳನ್ನು ಅವುಗಳ ಸ್ವಸ್ಥಾನದಲ್ಲಿಡಲು ನೆರವಾಗುತ್ತದೆ. ರಿಂಗ್”ಗಳು ಬೇರೆ ಬೇರೆ ಗಾತ್ರದಲ್ಲಿರುತ್ತವೆ. ನಿಮಗೆ ಯಾವ ಆಕಾರದ ರಿಂಗ್ ಬೇಕು ಎಂದು ವೈದ್ಯರು ನಿರ್ಧರಿಸುತ್ತಾರೆ.

ಬೇರೆ ಕೆಲವು ಶಸ್ತ್ರಚಿಕಿತ್ಸೆಗಳು
ನಿಮ್ಮ ವಯಸ್ಸು, ಆರೋಗ್ಯ ಸಮಸ್ಯೆಯನ್ನು ಗಮನಿಸಿ, ವೈದ್ಯರು ನಿಮಗೆ ಯಾವ ಬಗೆಯ ಶಸ್ತ್ರಚಿಕಿತ್ಸೆ ಸೂಕ್ತ ಎಂಬುದನ್ನು ನಿರ್ಧರಿಸುತ್ತಾರೆ. ಒಳ ಅಂಗಗಳ ಜಾರುವಿಕೆಯ ನಿಯಂತ್ರಣಕ್ಕೆ ಕೀಹೋಲ್ ಸರ್ಜರಿಯೇ ಸೂಕ್ತ.

ಮೂತ್ರಕೋಶ ಜಾರಿದ್ದರೆ ಸಿಸ್ಟೋಸಿಲ್ ಹಾಗೂ ಕರುಳು ಜಾರಿದ್ದರೆ ರೆಕ್ಟೊಸಿಲ್ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಾರೆ. ಗರ್ಭಕೋಶ ನಿವಾರಣೆ ಬಳಿಕ ಲಿಗಾಮೆಂಟ್ ಹಾಗೂ ಸ್ನಾಯುಗಳ ಬಲವರ್ಧನೆಗೆ ಯೋನಿ ಮಾರ್ಗದ ಮೂಲಕವೇ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಗರ್ಭಕೋಶ ಮತ್ತು ಮೂತ್ರಕೋಶ ಬಹಳ ಜಾರಿದರೆ ಮೆಷ್ ಹಾಕಲಾಗುತ್ತದೆ.
ಗರ್ಭಕೋಶ ನಿವಾರಣೆ ಬಳಿಕ ಕಿಬ್ಬೊಟ್ಟೆಯಲ್ಲಿ ಇರುವ ಇತರೆ ಅಂಗಗಳು ಜಾರದಂತೆ ‘ಸ್ಯಾಕ್ರೋಕಾಲ್ಪೊಪೆಕ್ಸಿ’ ಹಾಗೂ ‘ಸ್ಯಾಕ್ರೋಸ್ಪಿನಸ್’ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದನ್ನು ಕೀ ಹೋಲ್ ಸರ್ಜರಿ ಮೂಲಕ ಮಾಡುತ್ತಾರೆ.
ಯೋನಿ ಮಾರ್ಗದ ಮೂಲಕ ಗರ್ಭಕೋಶದ ನಿವಾರಣೆಯ ಸಂದರ್ಭದಲ್ಲಿ ಮೂತ್ರಕೋಶ ಹಾಗೂ ಕರುಳುಗಳನ್ನು ಸ್ವಸ್ಥಾನದಲ್ಲಿಡುವ ದುರಸ್ತಿ ಕೆಲಸವನ್ನು ಕೂಡ ವೈದ್ಯರು ಮಾಡುತ್ತಾರೆ.

ಶಸ್ತ್ರಚಿಕಿತ್ಸೆ ಮಾಡಿಸದಿದ್ದರೆ ಏನಾಗಬಹುದು?

ಸಮಸ್ಯೆ ಹಾಗೆಯೇ ಮುಂದುವರಿಯಬಹುದು ಅಥವಾ ಪರಿಸ್ಥಿತಿ ಇನ್ನೂ ಹದಗೆಡಬಹುದು. ಒಳ ಅಂಗಗಳ ಜಾರುವಿಕೆ ಜೀವಕ್ಕೆ ಅಪಾಯ ತರದೇ ಇದ್ದರೂ ನಿಮ್ಮ ಗುಣಮಟ್ಟದ ಜೀವನದ ಮೇಲೆ ಮಾತ್ರ ಖಂಡಿತ ಪರಿಣಾಮ ಬೀರಬಹುದು.

Comments are closed.