ಕರಾವಳಿ

ಶ್ರೀರಾಮ ದೇವಸ್ಥಾನವಾಗಿ ರೂಪುಗೊಳ್ಳಲಿರುವ ಯೆಯ್ಯಾಡಿ ಶ್ರೀ ರಾಮ ಭಜನಾಮಂದಿರ : ನಾಳೆ ಶಿಲಾನ್ಯಾಸ

Pinterest LinkedIn Tumblr

ಮಂಗಳೂರು : ಯೆಯ್ಯಾಡಿ ‌ಐಟಿ‌ಐ ಬಳಿ ಇರುವ ಶ್ರೀರಾಮ ಭಜನಾ ಮಂದಿರದ ಜೀರ್ಣೋದ್ಧಾರದ ಬಳಿಕ ಶ್ರೀರಾಮ ದೇವಸ್ಥಾನವಾಗಿ ರೂಪುಗೊಳ್ಳಲಿದ್ದು ಶ್ರೀರಾಮ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜನವರಿ 25 ರಂದು ಶುಕ್ರವಾರ ಬೆಳಗ್ಗೆ 8.13ರ ಕುಂಭಲಗ್ನ ಸುಮುಹೂರ್ತದಲ್ಲಿ ಗ್ರಾಮದ ತಂತ್ರೀವರೇಣ್ಯರಾದ ದೇರೇಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಗಳವರ ಪೌರೋಹಿತ್ಯದಲ್ಲಿ ಮತ್ತು ವಾಸ್ತುಶಿಲ್ಪಿ ರಾಜ್‌ಕುಮಾರ್‌ ಅವರ ಮಾರ್ಗದರ್ಶನದಲ್ಲಿ ನೆರವೇರಲಿದೆ ಎಂದು ಜೀರ್ಣೋದ್ಧಾರ ಸಮಿತಿ‌ ಅಧ್ಯಕ್ಷ ಗಣೇಶ್ ಎ. ಬಂಗೇರ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಲಾನ್ಯಾಸ ಸಮಾರಂಭದಲ್ಲಿ ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್‌ ಕಟೀಲು, ಮೇಯರ್ ಭಾಸ್ಕರ ಮೊಲಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಉಮಾನಾಥ ಎ. ಕೋಟ್ಯಾನ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್, ಮಾಜಿ ಮೇಯರ್ ಮಹಾಬಲ ಮಾರ್ಲ, ನಗರಪಾಲಿಕೆ ಸದಸ್ಯರಾದ ಶ್ರೀಮತಿ ರೂಪ ಡಿ. ಬಂಗೇರ ಮತ್ತಿತರ ಗಣ್ಯರು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ನಾಡಿನ ಹಿರಿಯರು, ಶ್ರದ್ಧಾಳುಗಳ ಧರ್ಮಚಿಂತನೆಯ‌ ಆಶಯದೊಂದಿಗೆ ಯೆಯ್ಯಾಡಿ ‌ಐಟಿ‌ಐ ಬಳಿ 1926 ರಲ್ಲಿ ಸ್ಥಾಪನೆಗೊಂಡಿದ್ದ ಶ್ರೀರಾಮ ಭಜನಾಮಂದಿರ 1975 ರಲ್ಲಿ ಪುನರ್ ನವೀಕರಣಗೊಂಡು ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತದೇವರ ಮೂರ್ತಿ ಪ್ರತಿಷ್ಠೆಯೊಂದಿಗೆ‌ ಆರಾಧನೆ ನಡೆಸಲಾಗುತ್ತಿತ್ತು.ಅಂದಿನಿಂದ ಮೊದಲ್ಗೊಂಡು‌ ಈವರೆಗೆ ಮಂದಿರದ ಕಟ್ಟಡದಲ್ಲಿನ‌ ಅಭಿವೃದ್ಧಿ ಕೆಲಸಗಳು ನಡೆಯದಿರುವುದರಿಂದ ಪ್ರಸ್ತುತ‌ ಇರುವ ಮಂದಿರ ಶಿಥಿಲಾವಸ್ಥೆಗೆ ತಲುಪಿತ್ತು.

ಇದರೊಂದಿಗೆ‌ ಇತ್ತೀಚೆಗೆ ಸಾನಿಧ್ಯದಲ್ಲಿ ಕೆಲವಾರು ನ್ಯೂನತೆಗಳು ಕಂಡು ಬಂದ ಕಾರಣ ಮಂದಿರದ ಆಡಳಿತ ಸಮಿತಿ‌ ಅಧ್ಯಕ್ಷರಾದ ಗಣೇಶ್ ಎ.ಬಂಗೇರ‌ ಅವರು, ನಾಡಿನ ಹತ್ತು ಸಮಸ್ತರು, ಭಕ್ತಾದಿಗಳನ್ನು ಒಂದಾಗಿಸಿ ಅಷ್ಟಮಂಗಳ ಪ್ರಶ್ನೆ ಮೂಲಕ ಚಿಂತನೆ ನಡೆಸಿ ವಿಮರ್ಶಿಸಿದಾಗ ಸ್ಥಳ ಸಾನಿಧ್ಯಕ್ಕೆ ಸಂಬಂಧಪಟ್ಟ ದೋಷಗಳನ್ನು ಪರಿಹರಿಸಿಕೊಂಡು ಬಳಿಕ ಮಂದಿರದ ಕಟ್ಟಡವನ್ನು ಪುನರ್ ನಿರ್ಮಿಸಿ ದೇವಸ್ಥಾನದ ರೀತಿಯಲ್ಲಿ ಶ್ರೀರಾಮ ದೇವರು ಸಹಿತ ಪರಿವಾರ ದೇವರುಗಳನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ, ಕರ್ಮಗಳನ್ನು ನಡೆಸುತ್ತಾ ಬಂದಲ್ಲಿ ಗ್ರಾಮಕ್ಕೆ ಒಳಿತಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು.

ತದನಂತರ ಪ್ರಶ್ನೆಯಲ್ಲಿ ಕಂಡುಕೊಂಡಂತೆ ಕೆಲವಾರು ದೋಷಕ್ಕೆ ಸಂಬಂಧಪಟ್ಟಂತೆ ಪರಿಹಾರಗಳನ್ನು ನಡೆಸಲಾಯಿತು ಆ ಬಳಿಕ ಅಕ್ಟೋಬರ್ 25,2018 ರಂದು ಗ್ರಾಮದ ತಂತ್ರಿಗಳಾದ ವೇದ ವಿದ್ಯಾಭೂಷಣ ದೇರೇಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಯವರ ಪೌರೋಹಿತ್ಯದಲ್ಲಿ ಮಂದಿರದಲ್ಲಿ‌ ಆರಾಧಿಸಲಾಗುತ್ತಿದ್ದ ಶ್ರೀದೇವರ ವಿಗ್ರಹಗಳನ್ನು, ಪರಿವಾರ ಶಕ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಇದೀಗ ಬಾಲಾಲಯದಲ್ಲಿ ನಿತ್ಯಪೂಜೆಯೊಂದಿಗೆ ವಾರದ ಭಜನಾ ಸಂಕೀರ್ತನೆಗಳು ಇನ್ನಿತರ ಧಾರ್ಮಿಕ ವಿಧಾನಗಳು ಸಂಪನ್ನಗೊಳ್ಳುತ್ತಿದೆ ಎಂದವರು ವಿವರಿಸಿದರು.

ಜೀರ್ಣೋದ್ಧಾರ ಸಮಿತಿರಚನಾ ಸಭೆ :

ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಕೊಂಡಂತೆ ಜೀರ್ಣೋದ್ಧಾರದ ಬಳಿಕ ಸಾನಿಧ್ಯ ಮಂದಿರದ ಬದಲಾಗಿ ದೇವಾಲಯವಾಗಿ  ರೂಪು ಗೊಳ್ಳಲಿದೆ. ಈ  ಮಹತ್ಕಾರ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮರ್ಥ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲು ಮಂದಿರದ ಪ್ರಾಂಗಣದಲ್ಲಿ ಜನವರಿ 20ರಂದು ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತರು, ಊರಿನ ಸಮಸ್ತರ ಕೂಡುವಿಕೆಯೊಂದಿಗೆ ಜೀರ್ಣೋದ್ಧಾರ ಸಮಿತಿ ರಚನಾ ಸಭೆ ನಡೆಯಿತು.

ಸಭೆಯಲ್ಲಿ ಪ್ರಸ್ತುತ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷರಾದ ಗಣೇಶ್ ಎ. ಬಂಗೇರ‌ ಅವರನ್ನು ಜೀರ್ಣೋದ್ಧಾರ ಸಮಿತಿ ‌ಅಧ್ಯಕ್ಷ ರನ್ನಾಗಿಯೂ ಮುಂದುವರಿಸುವಂತೆ ನಿರ್ಧರಿಸಲಾಯಿತು. ಇದರೊಂದಿಗೆ ಸಮಿತಿಗೆ ಇನ್ನುಳಿದ ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು ಎಂದು ಗಣೇಶ್ ಬಂಗೇರ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಪದ್ಮನಾಭ ಕೊಡಿಯಾಲ್‌ಬೈಲ್, ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಗುರುನಗರ, ಉಪಾಧ್ಯಕ್ಷರಾದ ತುಳಸೀದಾಸ್ ಉರ್ವಾ, ಪ್ರಚಾರ ಸಮಿತಿ ಪ್ರಮುಖರಾದ ಬಾಲಕೃಷ್ಣ ಯೆಯ್ಯಾಡಿ ಉಪಸ್ಥಿತರಿದ್ದರು.

Comments are closed.