ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ: ಅಪರಾಧಿಗೆ 10 ವರ್ಷ ಜೈಲು, 25,000 ದಂಡ

Pinterest LinkedIn Tumblr

ಕುಂದಾಪುರ: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಬಳಿಕ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಪಾರಿನ ಮೂಡುಬಗೆಯ ವಿಘ್ನೇಶ್ವರ (32) ಎಂಬಾತನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 25,000 ದಂಡ ವಿಧಿಸಿ ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಗುರುವಾರ ತೀರ್ಪು ಪ್ರಕಟಿಸಿದ್ದಾರೆ.

ಆಟೋ ಚಾಲಕನಾಗಿದ್ದ ಅಪರಾಧಿ 2011 ನೇ ಜೂ.2 ರಂದು ಸಂತೃಸ್ತ ಯುವತಿಯ ಮನೆಗೆ ಬಂದು ನನ್ನ ಪೋಷಕರು ನಿನ್ನನ್ನು ನೋಡಲು ಬರ ಹೇಳಿದ್ದಾರೆ ಎಂದು ನಂಬಿಸಿ ಆಕೆಯನ್ನು ತನ್ನ ಮನೆಯಾದ ಅಂಪಾರಿನ ಮೂಡುಬಗೆಗೆ ಕರೆದುಕೊಂಡು ಹೋಗಿದ್ದ ಆತ ಮನೆ ತೋರಿಸುವ ನೆಪದಲ್ಲಿ ಆಕೆಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಅದೇ ವರ್ಷದ ನ.15 ರಂದು ಜೋಗ್‌ ಫಾಲ್ಸ್‌ ನೋಡುವ ನೆಪದಲ್ಲಿ ಜೋಗಕ್ಕೆ ಕರೆದುಕೊಂಡು ಹೋಗಿದ್ದ ಆತ ಸಾಗರದ ವಸತಿ ಗೃಹದ ಕೊಠಡಿಯೊಂದರಲ್ಲಿ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ ಆತ ಬಳಿಕ ಮದುವೆಗೆ ನಿರಾಕರಣೆ ಮಾಡಿದ್ದ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಕುಂದಾಪುರದ ಅಂದಿನ ಸರ್ಕಲ್‌ ಇನ್ಸ್‌ಪೆಕ್ಟರ್‌ ದಿವಾಕರ ಪಿ.ಎಂ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 12 ಸಾಕ್ಷಿಗಳ ವಿಚಾರಣೆ ನಡೆದಿತ್ತು.

ವಿಚಾರಣೆ ನಡೆಸಿದ್ದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಐಪಿಸಿ ದಂಡ ಸಂಹಿತಿ 417 ಹಾಗೂ ಐಪಿಸಿ 376 ಅನ್ವಯ ಆರೋಪಿಯ ವಿರುದ್ದ ಮಾಡಲಾಗಿರುವ ಆರೋಪ ಸಾಬೀತಾಗಿರುವುದರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ಪ್ರತ್ಯೇಕ ಕಾಯಿದೆಯಡಿಯಲ್ಲಿ 20 ಹಾಗೂ 5 ಸಾವಿರದ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಶನ್‌ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.

Comments are closed.