ಕರಾವಳಿ

ಕರಾವಳಿಯ ಉತ್ತರ ಕನ್ನಡಕ್ಕೂ ವಿಸ್ತರಿಸಿದ ಮಂಗನ ಕಾಯಿಲೆ

Pinterest LinkedIn Tumblr


ಹೊನ್ನಾವರ: ಸಾಗರ ಸೀಮೆಯಲ್ಲಿ ಆತಂಕ ಉಂಟು ಮಾಡಿರುವ ಮಂಗನ ಕಾಯಿಲೆ ಈಗ ಉತ್ತರ ಕನ್ನಡ ಜಿಲ್ಲೆಗೂ ವ್ಯಾಪಿಸುವ ಲಕ್ಷಣ ಕಂಡುಬರುತ್ತಿದೆ. ಉಡುಪಿ ಜಿಲ್ಲೆಯ ವಿವಿಧೆಡೆ ಕೂಡ ಮಂಗಗಳ ಸಾವಿನಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಸೋಮವಾರವೂ 5 ಮಂಗಗಳ ಮೃತದೇಹಗಳು ಪತ್ತೆಯಾಗಿವೆ.

ಹೊನ್ನಾವರ ತಾಲೂಕಿನ ಸಾಲಕೋಡು, ಶಿರಸಿಯ ಬನವಾಸಿ, ಭಟ್ಕಳದ ಮುಡೇìಶ್ವರ, ಸಿದ್ದಾ ಪುರ, ಜೋಯಿಡಾ, ಕಾರವಾರದ ಕಾಡಿನಲ್ಲೂ ಮಂಗಗಳು ಮೃತಪಟ್ಟ ವರದಿಯಾಗಿದೆ. ಕೆಲವರು ಈಗಾಗಲೇ ಜ್ವರ ಪೀಡಿತರಾಗಿದ್ದಾರೆ. ಅದು ಮಂಗನ ಕಾಯಿಲೆ ಎಂಬುದು ಖಚಿತಪಟ್ಟಿಲ್ಲ. ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಲ್ಲಿ ಸತ್ತು ಬಿದ್ದಿರುವ ಮಂಗ ಗಳನ್ನು ಸುಟ್ಟು ಹಾಕಲಾಗುತ್ತಿದೆ. ಈ ಬಾರಿ ಮಂಗನ ಕಾಯಿಲೆ ತೀವ್ರತೆ ಪಡೆದಿರುವಂತಿದೆ. 25 ವರ್ಷಗಳ ಹಿಂದೆಯೂ ಕಾಯಿಲೆ ತೀವ್ರಗೊಂಡಿತ್ತು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ 73 ಜನ ಶಂಕಿತ ಮಂಗನ ಕಾಯಿಲೆ ರೋಗಿಗಳು ದಾಖಲಾಗಿದ್ದಾರೆ. ಇವರಲ್ಲಿ 27 ಜನರಿಗೆ ಮಂಗನ ಕಾಯಿಲೆ ಇರುವುದು ಖಚಿತಪಟ್ಟಿದೆ. 46 ಜನರಿಗೆ ಮಂಗನ ಕಾಯಿಲೆ ಇಲ್ಲ ಎಂಬುದು ಖಚಿತಪಟ್ಟಿದೆ. ನಾಲ್ವರ ಪರೀಕ್ಷಾ ವರದಿ ಬರುವುದು ಬಾಕಿ ಇದೆ. 57 ಜನ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 16 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಣಿಪಾಲ ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ನಡುವೆ ಮಣಿಪಾಲ ಆಸ್ಪತ್ರೆಯಲ್ಲಿ ರೋಗ ಸಂಶಯದಿಂದ ಮಹಿಳೆ ಸಾವಿಗೀಡಾಗಿದ್ದರೂ ಆಕೆಗೆ ಮಂಗನ ಕಾಯಿಲೆ ಇರಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಸಾಗರದಲ್ಲಿ ಸೋಮವಾರವೂ ಕೆಲವು ಮಂಗಗಳು ಅಸುನೀಗಿವೆ. ಈ ಪರಿಸರದಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.

Comments are closed.