ಕರಾವಳಿ

ಅಕ್ರಮ ಮರಳು ಸಾಗಾಟ : ಮರಳು ಸಹಿತಾ ಮೂರು ಲಾರಿ ವಶ

Pinterest LinkedIn Tumblr

ಮಂಗಳೂರು, ಡಿಸೆಂಬರ್.22: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಪರಾರಿ ಜಂಕ್ಷನ್ ಬಳಿ ಮಂಗಳೂರು ಗ್ರಾಮಾಂತರ ಮತ್ತು ರೌಡಿ ನಿಗ್ರಹದಳ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಮತ್ತು ಸಿಬ್ಬಂದಿಗಳು ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ತಂಡದೊಂದಿಗೆ ಎ.ಎಸ್.ಐ. ಮೋಹನ್ ರವರು ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಮಂಗಳೂರು ತಾಲೂಕು ತಿರುವೈಲು ಗ್ರಾಮದ ಪರಾರಿ ಜಂಕ್ಷನ್ ಬಳಿ ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಉಳಾಯಿಬೆಟ್ಟು ರಸ್ತೆಯಿಂದಾಗಿ ಪರಾರಿ ಜಂಕ್ಷನ್ ಕಡೆಗೆ ಬರುತ್ತಿದ್ದ ಮೂರು ಟಿಪ್ಪರ್ ಗಳನ್ನು ನಿಲ್ಲಿಸಿ, ಪರಿಶೀಲನೆ ನಡೆಸಲಾಯಿತು.

ಈ ವೇಳೆ ಯಾವುದೇ ಪರವಾನಿಗೆ ಇಲ್ಲದೆ ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಲಾರಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ. ವಶಪಡಿಸಿಕೊಂಡ ಮೂರು ಲಾರಿಗಳು ಮತ್ತು ಅದರಲ್ಲಿ ತುಂಬಿದ ಮರಳಿನ ಒಟ್ಟು ಅಂದಾಜು ಮೌಲ್ಯ ಸುಮಾರು 25 ಲಕ್ಷದ 15 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ರಾಮರಾವ್ ಅವರ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಭಜಂತ್ರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.