ಕರಾವಳಿ

ದೈಹಿಕ ಹಾಗೂ ಮಾನಸಿಕ ಹಿಂಸೆ, ವರದಕ್ಷಿಣಿ ಕಿರುಕುಳ ನೀಡಿದ ಆರೋಪಿಗಳಿಗೆ ಶಿಕ್ಷೆ

Pinterest LinkedIn Tumblr

ಉಡುಪಿ: 1ನೇ ಆರೋಪಿ ರವಿ ರೋಶನ್ ನಜ್ರೇತ್, ಕೋಡಿಹಿತ್ಲು,s ಶಿರ್ವ ಇವರು ದಿ:14-01-2013ರಂದು ಫಿರ್ಯಾದಿದಾರರಾದ ಅನಿತ ಜುಸ್ತಿನ್ ಮೆಂಡೋನ್ಸಾ ಇವರನ್ನು ಶಿರ್ವದ ಚರ್ಚ್ನಲ್ಲಿ ಮದುವೆಯಾಗಿ, ಮದುವೆಯ ಸಮಯ ಆರೋಪಿಯು ಒತ್ತಾಯಪೂರ್ವಕವಾಗಿ ವರದಕ್ಷಿಣೆ ರೂಪದಲ್ಲಿ 20 ಪವನ್ ಚಿನ್ನವನ್ನು ಪಡೆದುಕೊಂಡಿದ್ದಲ್ಲದೆ, ಮದುವೆಯಾದ ಬಳಿಕ ಪಿರ್ಯಾದಿದಾರರ ಜೊತೆ ಅನೋನ್ಯತೆಯಿಂದ ವೈವಾಹಿಕ ಜೀವನ ನಡೆಸದೆ, ಅವರನ್ನು ಚೆನ್ನಾಗಿ ನೋಡಿಕೊಳ್ಳದೆ ಇನ್ನೋರ್ವ ಆರೋಪಿತಳಾದ 1ನೇ ಆರೋಪಿಯ ಸಹೋದರಿ ಲೀನಾ ನಜ್ರೆತ್ರೊಂದಿಗೆ ಸೇರಿಕೊಂಡು ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಿ ಜೀವ ಬೆದರಿಕೆ ಹಾಕಿ ವರದಕ್ಷಿಣೆಯ ರೂಪದಲ್ಲಿ ಪುನಃ ರೂ.3,00,000 ಹಣವನ್ನು ತವರು ಮನೆಯಿಂದ ತರುವಂತೆ ಒತ್ತಾಯ ಹೇರಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದುದ್ದಲ್ಲದೆ, 1ನೇ ಆರೋಪಿಯ ಕೃತ್ಯಕ್ಕೆ 2ನೇ ಆರೋಪಿತೆ ಪ್ರೇರೇಪಿಸಿರುವುದರಿಂದ ಈ ಬಗ್ಗೆ ಪಿರ್ಯಾದಿದಾರರು ಖಾಸಗಿ ಪಿರ್ಯಾದಿಯನ್ನು ಸಲ್ಲಿಸಿದ್ದು ನ್ಯಾಯಾಲಯದ ಆದೇಶದಂತೆ ಆಗಿನ ಶಿರ್ವ ಠಾಣೆ ಉಪನಿರೀಕ್ಷಕರಾದ ಅಶೋಕ್ ಪಿ. ಅವರು ತನಿಖೆ ನಡೆಸಿ ಆರೋಪಿತರ ವಿರುದ್ಧ ಭಾ.ದಂ.ಸಂ ಕಲಂ.498(ಎ), 504, 506 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಕಲಂ.3 ಮತ್ತು 4ರಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ.

ಈ ಪ್ರಕರಣವು ಮಾನ್ಯ ಉಡುಪಿ 3ನೇ ಹೆಚ್ಚುವರಿ ಸಿ.ಜೆ. ಮತ್ತುಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ-ವಿವಾದವನ್ನು ಆಲಿಸಿ, ಆರೋಪಿತರ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಶ್ರೀ ರಾಮ್ ಪ್ರಶಾಂತ್ರವರು ಭಾ.ದಂ.ಸಂ. ಕಲಂ.498(ಎ)ರಡಿ 2 ವರ್ಷ ಶಿಕ್ಷೆ ಮತ್ತು ಒಟ್ಟು ರೂ.5,000, ಭಾ.ದಂ.ಸಂ. ಕಲಂ.504 ರಡಿ 6 ತಿಂಗಳ ಶಿಕ್ಷೆ ಮತ್ತು ರೂ.5,000 ದಂಡ, ಭಾ.ದಂ.ಸಂ. ಕಲಂ.506 ರಡಿ 6 ತಿಂಗಳ ಶಿಕ್ಷೆ ಮತ್ತು ರೂ.5,000 ದಂಡ, ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ 3ವರ್ಷ ಶಿಕ್ಷೆ ಮತ್ತು ರೂ.10,000 ದಂಡ ವಿಧಿಸಿದ್ದಲ್ಲದೆ ದಂಡ ಪಾವತಿಸಲು ತಪ್ಪಿದ್ದಲ್ಲಿ 1 ತಿಂಗಳ ಸಾದಾರಣ ಶಿಕ್ಷೆ ವಿಧಿಸಿ ಡಿಸೆಂಬರ್ 17 ರಂದು ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕು. ಜಯಂತಿ ಕೆ. ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.