ಕರಾವಳಿ

ನೆಮ್ಮದಿಯಲ್ಲಿದ್ದ ಬೈಂದೂರಿನ ಕುದ್ರುಕೋಡ್ ಜನರಿಗೆ ಐ.ಆರ್.ಬಿ. ಕಂಪೆನಿಯಿಂದಾಗಿದೆ ಕಂಟಕ!

Pinterest LinkedIn Tumblr

ಕುಂದಾಪುರ: ನೆಮ್ಮದಿಯಲ್ಲಿದ್ದ ಆ ಊರಿನ ಜನರೀಗ ನಿತ್ಯ ಸಮಸ್ಯೆ ಅನುಭವಿಸ್ತಾ ಇದಾರೆ. ಎಳೆಯರು, ವೃದ್ಧರಿಗೆ ಅನಾರೋಗ್ಯ ಗಿಪ್ಟ್ ಆಗಿ ಸಿಕ್ಕಿದೆ. ಹೆದ್ದಾರಿ ಅಭಿವೃದ್ಧಿಯ ಹಿನ್ನೆಲೆ ಆ ಊರಿನಲ್ಲಿ ತೆರೆದ ಜಲ್ಲಿ ಮಿಶ್ರಣ ಘಟಕ ಜನರ ಜೀವ ಹಿಂಡುತ್ತಿದೆ. ಇಲ್ಲಿನ ಸಮಸ್ಯೆ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಕುಂದಾಪುರ-ಕಾರಾವರ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಆಮೆಗತಿಯಲ್ಲಿ ನಡೀತಾಯಿದೆ. ಈಗಗೇ ಅವೈಜ್ಞಾನಿಕ ಕಾಮಗಾರಿ ಹಲವರನ್ನು ಬಲಿಪಡೆದಿದೆ. ಸಾಕಷ್ಟು ಕೃಷಿ ಹಾನಿ, ನೆರೆ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಹೆದ್ದಾರಿ ಚತುಷ್ಪತ ಕಾಮಗಾರಿಯ ಇನ್ನೊಂದು ಅವಾಂತರಕ್ಕೆ ಅಕ್ಷರಶಃ ಆ ಊರಿನ ಮಂದಿ ಬಸವಳಿದು ಹೋಗಿದ್ದಾರೆ.

ನಾವುಂದ-ಹೇರೂರು ಗಡಿ ಭಾಗದ ಕುದ್ರುಕೋಡು ಎಂಬಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿ ಐ‌ಆರ್‌ಬಿ ನಡೆಸುತ್ತಿರುವ ಜಲ್ಲಿ-ಟಾರು ಮಿಶ್ರಣ ಘಟಕವೇ ಜನರ ಸಮಸ್ಯೆಗೆ ಕಾರಣ. ಸುಮಾರು ನಾಲ್ಕು ವರ್ಷಗಳಿಂದ ಅಲ್ಲಿ ಜಲ್ಲಿ ಕ್ರಶ್ ಮಾಡಿ ಹುಡಿ ತಯಾರಿಸುವುದರಿಂದ ಮತ್ತು ಜಲ್ಲಿ-ಟಾರು ಮಿಶ್ರಣ ಮಾಡುವುದರಿಂದ ಪರಿಸರ ಕಲುಷಿತವಾಗಿ ನಿವಾಸಿಗಳ ಆರೋಗ್ಯ ಕೆಡುತ್ತಿದೆ, ಜಲ್ಲಿಹುಡಿ ನೀರಿನೊಂದಿಗೆ ಕೃಷಿ ಭೂಮಿಗೆ ಹರಿದು ಹಾಗೂ ಹಾರಿಬಂದು ಕೃಷಿಗೆ ಹಾನಿಯಾಗುತ್ತಿದೆ ಹಾಗೂ ಯಂತ್ರದ ಕಂಪನದಿಂದ ಮನೆಗಳ ಗೋಡೆ, ಮಾಡು ಬಿರುಕು ಬಿಡುತ್ತಿವೆ. ಘಟಕದ ಆವರಣದಲ್ಲಿ ಜಲ್ಲಿ ಮತ್ತು ಅದರ ಹುಡಿಯ ಬೆಟ್ಟದಂತೆ ಕಾಣಿಸುತ್ತದೆ. ಸುಮಾರು 250 ಮೀಟರು ದೂರದಲ್ಲಿರುವ ಮೂಕಾಂಬಿಕಾ ದೇವಾಡಿಗ ಎಂಬವರ ಮನೆಯ ಗೋಡೆ ಮತ್ತು ಮಾಡಿನ ಸ್ಲ್ಯಾಬ್‌ನಲ್ಲಿ ಯಂತ್ರದ ಕಂಪನದಿಂದ ಆಗಿದೆ ಎನ್ನಲಾದ ಕ್ಷೀಣ ಬಿರುಕುಗಳು, ಸಸ್ಯದ ಎಲೆಗಳ ಮೇಲೆ ಕುಳಿತ ಹುಡಿ ಎಲ್ಲಿ ನೋಡಿದರು ದೂಳಿನಂತಹ ವಸ್ತು, ದೂಳು ಮಿಶ್ರಿತ ನೀರು ಇಲ್ಲಿನ ಪರಿಸ್ಥಿತಿಯನ್ನು ಸಾಕ್ಷೀಕರಿಸುತ್ತದೆ. ಇನ್ನು ನಿತ್ಯ ಹಗಲು ರಾತ್ರಿಯೆನ್ನದೇ ಕರ್ಕಷ ಶಬ್ದ ಮಾಡುತ್ತಾ ಕೆಲಸ ಮಾಡುವ ಯಂತ್ರಗಳು, ರಸ್ತೆಯಲ್ಲಿ ಸಂಚರಿಸುವ ಘನ ಲಾರಿಗಳು ಸ್ಥಳೀಯರ ನೆಮ್ಮದಿ ನಾಶ ಮಾಡಿದೆ.

ಇಲ್ಲಿನ ಘಟಕದ ಸಮಸ್ಯೆ ಇಷ್ಟಕ್ಕೆ ಮುಗಿದಿಲ್ಲ. ಈಗಾಗಲೇ ಘಟಕದ ಇಬ್ಬರು ಕಾರ್ಮಿಕರು ಕಾಯಿಲೆಯಿಂದ ಮೃತರಾಗಿದ್ದಾರೆ; ಸುತ್ತಲಿನ ನಿವಾಸಿಗಳಲ್ಲಿ ಹದಿನೈದಕ್ಕೂ ಅಧಿಕ ಮಂದಿ ಹಿರಿಯ ನಾಗರಿಕರು ಉಬ್ಬಸ ಸೇರಿದಂತೆ ವಿವಿಧ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸನಿಹದ ತೆಂಗು, ಅಡಿಕೆ, ಕಾಳು ಮೆಣಸಿನ ಬೆಲೆಗಳಿಗೆ ಹಾನಿಯಾಗಿದೆ. ರಾಮ ಗೋವಿಂದ ಖಾರ್ವಿ ಅವರ ಬಾವಿಯ ನೀರಿಗೆ ಹುಡಿ ಬೆರೆತಿದೆ. ಮೂರು ವರ್ಷಗಳ ಹಿಂದೆ ನಾವುಂದ ಗ್ರಾಮಪಂಚಾಯಿತಿ ಗುತ್ತಿಗೆ ಕಂಪನಿಗೆ ಹಾಟ್ ಮಿಕ್ಸ್, ವೆಟ್ ಮಿಕ್ಸ್, ರೆಡಿ ಮಿಕ್ಸ್ ಮತ್ತು ಕಾಂಕ್ರೀಟ್ ಪ್ಲಾಂಟ್‌ಗೆ ಮತ್ತು ವಿದ್ಯುತ್ ಸಂಪರ್ಕಕ್ಕೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಪ್ರಸಕ್ತ ವರ್ಷದಿಂದ ರದ್ದು ಪಡಿಸಲಾಗಿದೆ. ಕಂಪನಿ ಪಡೆದಿದ್ದ ನಿವೇಶನದ ಲೀಸ್ ಅವಧಿಯೂ ಮುಗಿದಿದೆ. ಆದರೂ ಘಟಕ ಕಾರ್ಯಾಚರಿಸುತ್ತಿದೆ. ಪಂಚಾಯಿತಿಯ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾದರೂ ಕ್ರಮಕೈಗೊಂಡಿಲ್ಲವೆಂದು ಗ್ರಾಮಪಂಚಾಯತಿ ಸದಸ್ಯ ಆರೋಪಿಸಿದ್ದಾರೆ. ಘಟಕದ ವಿರುದ್ಧ ನಾವುಂದ ಗ್ರಾಮ ಪಂಚಾಯಿತಿಗೆ, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವೂ ಆಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಘಟಕವನ್ನು ತಕ್ಷಣ ಮುಚ್ಚಬೇಕು, ಆಗಿರುವ ಹಾನಿಗೆ ಕಂಪನಿ ಪರಿಹಾರ ನೀಡಬೇಕು ಎನ್ನುವ ನಿಟ್ಟಿನಲ್ಲಿ ಬುಧವಾರ ಸ್ಥಳದಲ್ಲಿ ಜಮಾಯಿಸಿದ ನಾಗರಿಕರು ಪ್ರತಿಭಟನೆ ನಡೆಸಿದರು. ಯಾವುದೇ ಅಧಿಕಾರಿ ಸ್ಥಳಕ್ಕೆ ಬಾರದ್ದರಿಂದ ಪ್ರತಿಭಟನೆ ಫಲಪ್ರದವಾಗಿಲ್ಲ. ಸ್ಥಳದಲ್ಲಿ ಹಾಜರಿದ್ದ ಗುತ್ತಿಗೆ ಕಂಪೆನಿಯವರನ್ನು ಸ್ಥಳೀಯರು ತರಾಟೆಗೆತ್ತಿಕೊಂಡು ತಮ್ಮ ನೋವು ಮತ್ತು ಆಕ್ರೋಷ ಹೊರಹಾಕಿದ್ರು.

ಒಟ್ಟಿನಲ್ಲಿ ದಮ್ಮು-ಕೆಮ್ಮು, ಕೃಷಿ ಸಮಸ್ಯೆಯಿಂದ ಇಲ್ಲಿನ ಜನರು ಹೈರಾಣಾಗಿದ್ದು ಕೂಡಲೇ ಸಂಬಂದಪಟ್ಟವರು ಇತ್ತ ಗಮನಹರಿಸಿ ಇಲ್ಲಿನ ಸಮಸ್ಯೆಗೆ ಮುಕ್ತಿಕೊಡಿಸಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.