ಕರಾವಳಿ

ಹೆಪ್ಪುಗಟ್ಟಿದ(ನಿಷ್ಕ್ರಿಯ)ಭುಜದಿಂದ ಆರೋಗ್ಯಕ್ಕೆ ಕಾಡುವ ತೊಂದರೆಗಳು ಮತ್ತು ಮನೆ ಆರೈಕೆ..

Pinterest LinkedIn Tumblr

ಭುಜದ ಕೀಲು,ಮೂಳೆಗಳು ಮತ್ತು ಅಸ್ಥಿರಜ್ಜುವಿನ ಸುತ್ತಲಿನ ಅಂಗಾಂಶಗಳು ದಪ್ಪವಾಗಿ,ಪೆಡಸುಗೊಂಡಾಗ ಭುಜದ ಚಲನೆಯು ನಿರ್ಬಂಧಿಸಲ್ಪಡಲು ಆರಂಭಗೊಳ್ಳುವ ಸ್ಥಿತಿಯನ್ನು ಫ್ರೋಝನ್ ಶೋಲ್ಡರ್ ಎಂದು ಕರೆಯಲಾಗುತ್ತದೆ. ಇದನ್ನು ಭುಜದ ನಿಷ್ಕ್ರಿಯ ಸ್ಥಿತಿ ಎಂದೂ ಹೇಳಬಹುದು. ಕ್ರಮೇಣ ಸ್ಕಾರ್ ಅಂಗಾಂಶಗಳು ಬೆಳೆಯತೊಡಗಿ ಭುಜದ ಕೀಲು ಸರಿಯಾಗಿ ತಿರುಗಲು ಸ್ಥಳವಿರುವುದಿಲ್ಲ. ಹೀಗಾದಾಗ ತೋಳುಗಳನ್ನು ಮೇಲಕ್ಕೆತ್ತಲು,ಹಿಂದಕ್ಕೆ ಅಥವಾ ವಿರುದ್ಧ ದಿಕ್ಕಿಗೆ ಚಾಚಲು ಸಾಧ್ಯವಾಗುವುದಿಲ್ಲ,ಸಾಧ್ಯವಾದರೂ ತುಂಬ ನೋವನ್ನು ಅನುಭವಿಸಬೇಕಾಗುತ್ತದೆ

ಊತ,ನೋವು,ಪೆಡಸುತನ ಇವು ಫ್ರೋಝನ್ ಶೋಲ್ಡರ್‌ನ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ. 40ರಿಂದ 60 ವರ್ಷದ ಪ್ರಾಯದ ವ್ಯಕ್ತಿಗಳನ್ನು ಇದು ಹೆಚ್ಚಾಗಿ ಕಾಡುತ್ತದೆ.

ಭಾರ ಎತ್ತುವಂತಹ ಯಾವುದೇ ಶ್ರಮದ ಕೆಲಸವನ್ನು ಮಾಡದಿದ್ದರೂ ಭುಜದಲ್ಲಿ ನೋವು ಕಾಣಿಸಿಕೊಳ್ಳತೊಡಗಿದರೆ ಅದು ಫ್ರೋಝನ್ ಶೋಲ್ಡರ್‌ನ್ನು ಸೂಚಿಸುತ್ತದೆ. ಈ ನೋವು ಭುಜದ ಚಲನವಲನವನ್ನು ಸೀಮಿತಗೊಳಿಸುತ್ತದೆ. ಭುಜದ ಚಲನವಲನ ಕಡಿಮೆಯಾದಷ್ಟೂ ಅದರ ಪೆಡಸುತನ ಹೆಚ್ಚುತ್ತದೆ. ಎತ್ತರದ ಶೆಲ್ಫ್‌ನಲ್ಲಿರುವ ವಸ್ತುಗಳನ್ನು ಕೆಳಗಿಳಿಸುವುದು ಕಷ್ಟವಾಗುತ್ತದೆ. ಸಮಸ್ಯೆ ತೀವ್ರಗೊಂಡರೆ ಬಟ್ಟೆ ಧರಿಸುವಂತಹ ದಿನನಿತ್ಯದ ಕಾರ್ಯಗಳೂ ಕಷ್ಟವಾಗಬಹುದು.

ವ್ಯಕ್ತಿಯು ಹಾರ್ಮೋನ್ ಅಸಮತೋಲನ,ಮಧುಮೇಹ ಅಥವಾ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ ಕೀಲುಗಳ ಉರಿಯೂತದ ಸಾಧ್ಯತೆ ಹೆಚ್ಚಾಗಿರುತ್ತದೆ. ಗಾಯ,ಅನಾರೋಗ್ಯ ಅಥವಾ ಶಸ್ತ್ರಚಿಕಿತ್ಸೆಯಿಂದ ದೀರ್ಘಕಾಲ ಚಟುವಟಿಕೆಗಳಿಲ್ಲದಿರುವುದೂ ಈ ಸಮಸ್ಯೆಯನ್ನು ತರಬಲ್ಲುದು. ಸಾಮಾನ್ಯವಾಗಿ ಎರಡು ತಿಂಗಳಿನಿಂದ ಒಂಭತ್ತು ತಿಂಗಳ ಅವಧಿಯಲ್ಲಿ ಫ್ರೋಝನ್ ಶೋಲ್ಡರ್ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಮಧ್ಯವಯಸ್ಕರಲ್ಲಿ ಫ್ರೋಝನ್ ಶೋಲ್ಡರ್ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಮಧುಮೇಹಿಗಳು ಈ ರೋಗಕ್ಕೆ ಗುರಿಯಾಗುವ ಅಪಾಯ ಮೂರು ಪಟ್ಟು ಹೆಚ್ಚಾಗಿರುತ್ತದೆ.

ಮೂಳೆಗೆ ಪೆಟ್ಟು ಅಥವಾ ಶಸ್ತ್ರಚಿಕಿತ್ಸೆಯ ಬಳಿಕ ಸುದೀರ್ಘ ಸಮಯ ಹೆಗಲ ಪಟ್ಟಿಯನ್ನು ಧರಿಸುವವರು,ಇತ್ತೀಚಿನ ಆಘಾತ ಅಥವಾ ಶಸ್ತ್ರಚಿಕಿತ್ಸೆಯಿಂದ ದೀರ್ಘ ಅವಧಿಗೆ ನಿಷ್ಕ್ರಿಯರಾಗಿರುವರು ಮತ್ತು ಥೈರಾಯ್ಡಿ ಸಮಸ್ಯೆಯಿಂದ ಬಳಲುತ್ತಿರುವವರೂ ಫ್ರೋಝನ್ ಶೋಲ್ಡರ್‌ನ ಅಪಾಯ ಹೊಂದಿರುವವರ ಗುಂಪಿನಲ್ಲಿ ಸೇರುತ್ತಾರೆ.

ಭುಜದಲ್ಲಿ ಪೆಡಸುತನ ಮತ್ತು ನೋವು ಕಂಡು ಬಂದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಅವರು ರೋಗದ ತೀವ್ರತೆಯನ್ನು ನಿರ್ಧರಿಸಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.

ನೀವು ಫ್ರೋಝನ್ ಶೋಲ್ಡರ್‌ಗೆ ಚಿಕಿತ್ಸೆ ಪಡೆದುಕೊಳ್ಳದೆ ಹಾಗೆಯೂ ಬಿಡಬಹುದು. ಸುಮಾರು ಮೂರು ವರ್ಷಗಳಲ್ಲಿ ಸಮಸ್ಯೆಯು ತನ್ನಿಂತಾನೇ ನಿವಾರಣೆಯಾಗುತ್ತದೆ. ಆದರೆ ಅಲ್ಲಿಯವರೆಗೂ ನೀವು ಭುಜದ ನೋವು ಮತ್ತು ಪೆಡಸುತನವನ್ನು ಅನುಭವಿಸಬೇಕಾಗುತ್ತದೆ. ಫಿಝಿಯೋಥೆರಪಿ, ಔಷಧಿಗಳು, ಶಸ್ತ್ರಚಿಕಿತ್ಸೆ ಮತ್ತು ಮನೆ ಆರೈಕೆ ಇವುಗಳಿಂದ ಭುಜವು ಮೊದಲಿನ ಸ್ಥಿತಿಗೆ ಮರಳುವುದನ್ನು ತ್ವರಿತಗೊಳಿಸಬಹುದಾಗಿದೆ.

ಫಿಝಿಯೋಥೆರಪಿ: ಇದು ಫ್ರೋಝನ್ ಶೋಲ್ಡರ್‌ಗೆ ಅತ್ಯಂತ ಸಾಮಾನ್ಯವಾಗಿ ನೀಡಲಾಗುವ ಚಿಕಿತ್ಸೆಯಾಗಿದೆ. ಇದು ಭುಜದ ಕೀಲಿನ ಪೆಡಸುತನವನ್ನು ನಿವಾರಿಸಿ ಚಲನವಲನವನ್ನು ಸುಗಮಗೊಳಿಸುತ್ತದೆ. ಈ ಚಿಕಿತ್ಸೆಯನ್ನು ಕೆಲವು ವಾರಗಳಿಂದ ಕೆಲವು ತಿಂಗಳುಗಳವರೆಗೂ ಪಡೆಯಬೇಕಾಗಬಹುದು.

ಔಷಧಿಗಳು: ನೋವಿಗೆ ಮತ್ತು ಕೀಲಿನ ಉರಿಯೂತಕ್ಕೆ ಚಿಕಿತ್ಸೆ ನೀಡಲು ನಿಮ್ಮ ವೈದ್ಯರು ಉರಿಯೂತ ನಿರೋಧಕ ಔಷಧಿಗಳನ್ನು ಸೂಚಿಸಬಹುದು. ಸ್ಟಿರಾಯ್ಡಿ ಚುಚ್ಚುಮದ್ದು ಸಹ ಅಗತ್ಯವಾಗಬಹುದು.

ಶಸ್ತ್ರಚಿಕಿತ್ಸೆ: ಫಿಝಿಯೋಥೆರಪಿಯಿಂದ ನಿಮ್ಮ ಸ್ಥಿತಿಯಲ್ಲಿ ಸುಧಾರಣೆಯಾಗದಿದ್ದರೆ ಶಸ್ತ್ರಚಿಕಿತ್ಸೆ ಉಳಿದಿರುವ ಆಯ್ಕೆಯಾಗುತ್ತದೆ. ಆರ್ಥ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದಲೂ ಫ್ರೋಝನ್ ಶೋಲ್ಡರ್ ಸಮಸ್ಯೆಯನ್ನು ನಿವಾರಿಸಬಹುದು. ಇದರಲ್ಲಿ ಭುಜದಲ್ಲಿ ಸಣ್ಣ ಗಾಯವನ್ನುಂಟು ಮಾಡಿ ‘ಆರ್ಥ್ರೊಸ್ಕೋಪ್’ ಎಂಬ ಕ್ಯಾಮೆರಾವನ್ನು ಬಳಸಿ ಸ್ಕಾರ್ ಅಂಗಾಂಶಗಳನ್ನು ನಿವಾರಿಸಲಾಗುತ್ತದೆ ಮತ್ತು ಇದರಿಂದ ಭುಜವು ಕಳೆದುಕೊಂಡ ತನ್ನ ಚಲನಶಕ್ತಿಯನ್ನು ಮರಳಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಫ್ರೋಝನ್ ಶೋಲ್ಡರ್‌ಗೆ ಗಾಯವು ಕಾರಣವಾಗಿದ್ದರೆ ಹೀಗೆ ಗಾಯವುಂಟಾದ ಕೆಲವೇ ವಾರಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದರೆ ಹೆಚ್ಚು ಯಶಸ್ವಿಯಾಗುತ್ತದೆ.

ಮನೆ ಆರೈಕೆ: ಒಂದು ಬಾರಿಗೆ 15 ನಿಮಿಷಗಳಂತೆ ದಿನಕ್ಕೆ ಹಲವಾರು ಬಾರಿ ಐಸ್‌ಪ್ಯಾಕ್‌ನ್ನು ಭುಜದ ಮೇಲಿಟ್ಟುಕೊಂಡರೆ ನೋವು ಕಡಿಮೆಯಾಗುತ್ತದೆ. ನೀವು ಫಿಝಿಯೋ ಥೆರಪಿ ಪಡೆದುಕೊಳ್ಳುತ್ತಿದ್ದರೆ ಫಿಝಿಯೋ ಥೆರಪಿಸ್ಟ್‌ರ ಸೂಕ್ತ ಸಲಹೆಯನ್ನು ಪಡೆದುಕೊಂಡು ಅದನ್ನು ಮನೆಯಲ್ಲಿ ಮುಂದುವರಿಸಬಹುದು.

ಈ ರೋಗಕ್ಕ ವಿಳಂಬಿಸದೆ ಚಿಕಿತ್ಸೆ ಪಡೆಯುವುದರಿಂದ ಅದು ತೀವ್ರಗೊಳ್ಳದಂತೆ ತಡೆಯಬಹುದು. ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸೂಕ್ತವಾಗಿ ನಿಯಂತ್ರಿಸುತ್ತಿದ್ದರೆ ಫ್ರೋಝನ್ ಶೋಲ್ಡರ್‌ನ ಅಪಾಯದಿಂದ ದೂರವಿರಬಹುದು.

Comments are closed.