ಕರಾವಳಿ

ಶೌಚಾಲಯ ರಹಿತ ಮನೆಗಳ ಪತ್ತೆ ಮಾಡಿ : ಮೀನಾಕ್ಷಿ ಶಾಂತಿಗೋಡು

Pinterest LinkedIn Tumblr

ಮಂಗಳೂರು ನವೆಂಬರ್ 18: ಜಿಲ್ಲೆಯಲ್ಲಿ ಶೌಚಾಲಯರಹಿತ ಕುಟುಂಬಗಳ ನೈಜ ಅಂಕಿಅಂಶಗಳ ಸಂಗ್ರಹಣೆಗೆ ಸಂಬಂದಪಟ್ಟ ಜಿಲ್ಲಾ ಪಂಚಾಯತ್ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ತಮ್ಮ ವ್ಯಾಪ್ತಿಯ ಗ್ರಾಮಪಂಚಾಯತ್‍ನಲ್ಲಿ ಪರಿಶೀಲನೆ ನಡೆಸಲು ದಿನಾಂಕ ನಿಗದಿಪಡಿಸಿ ಸಮೀಕ್ಷೆ ಮಾಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಹೇಳಿದರು.

ಅವರು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್ , ಜಿಲ್ಲಾ ನೆರವು ಘಟಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸ್ಥಳ ಪರಿಶೀಲನೆಯನ್ನು ಮಾಡಿ ನೈಜ ವರದಿ ಸಿದ್ಧಪಡಿಸಿ ಎಂದ ಅಧ್ಯಕ್ಷರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇ ಘಟಕಗಳನ್ನು ಸುಸ್ಥಿತಿಯಲ್ಲಿಡಿ, ನೂತನವಾಗಿ ಆರಂಭಿಸಬೇಕಾದಲ್ಲಿ ಕ್ರಿಯಾಯೋಜನೆಯನ್ನು ಸಿದ್ದಪಡಿಸುವ ಜೊತೆಗೆ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಮುಂದಿನ ಸಭೆಯೊಳಗಾಗಿ ಪ್ರತೀ ತಾಲೂಕಿನ ಕನಿಷ್ಠ 5 ಗ್ರಾಮಪಂಚಾಯತ್‍ಗಳಲ್ಲಿ ಘನತ್ಯಾಜ್ಯ ವಿಲೇಯನ್ನು ಅನುಷ್ಠಾನಕ್ಕೆ ತನ್ನಿ ಎಂದು ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲನಾ ವರದಿಯನ್ನು ಪರಿಶೀಲಿಸಿದ ಸಿಇಒ ಅವರು, ಘನತ್ಯಾಜ್ಯ ವಿಲೇ ಘಟಕಗಳ ಕಾಮಗಾರಿ ಪ್ರಗತಿ ದಾಖಲಿಸಲು ನಿರಂತರ ಫಾಲೋ ಅಪ್ ಅಗತ್ಯವಿದೆ ಎಂದರು.

ಜನಶಿಕ್ಷನ ಟ್ರಸ್ಟ್‍ನ ಶೀನ ಶೆಟ್ಟಿಯವರು ರೇಷನ್ ಕಾರ್ಡ್, ಆಧಾರ ಕಾರ್ಡ್ ವಂಚಿತ ನಿವಾಸಿಗಳಿಗೆ ಪ್ರೇರಪಣೆ ಕೊಡುವ ಮೂಲಕ ಶೌಚಾಲಯ ನಿರ್ಮಾಣ ಸಾಧ್ಯ. ಜಾಗೃತಿಯಿಂದ ಇಂತಹ ಹಲವು ರಚನಾತ್ಮಾಕ ಕೆಲಸಗಳನ್ನು ಮಾಡಿದ ಇತಿಹಾಸ ದಕ್ಷಿಣ ಕನ್ನಡ ಜಿಲ್ಲೆಯದ್ದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಉಪಕಾರ್ಯದರ್ಶಿ ನಾಯಕ್ ಅವರು ಇದ್ದರು.

Comments are closed.