ಕರಾವಳಿ

ಲೋಕಸಭಾ ಚುನಾವಣೆ ಬರುವಾಗ ಬಿಜೆಪಿಗೆ ರಾಮಮಂದಿರದ ನೆನಪಾಗುತ್ತೆ: ಸಚಿವ ಜಮೀರ್ ಅಹಮದ್

Pinterest LinkedIn Tumblr

ಕುಂದಾಪುರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ರಾಮಮಂದಿರದ ನೆನಪಾಗುತ್ತಿದೆ. ಪ್ರಧಾನ ಮಂತ್ರಿಯಾದ ನಾಲ್ಕುವರೆ ವರ್ಷದಲ್ಲಿ ಮೋದಿಯವರು ಇಂದಿಗೂ ರಾಮ ಮಂದಿರದ ಕುರಿತು ತುಟಿ ಬಿಚ್ಚಿಲ್ಲ. ಇದ್ದಕ್ಕಿದ್ದಂತೆ ಈಗ ಯಾಕೆ ಅಯೋದ್ಯೆಯ ನೆನಪಾಗಿದೆ. ಇದೆಲ್ಲಾ ಬಿಜೆಪಿಯ ಚುನಾವಣಾ ಗಿಮಿಕ್. ದೇಶದಲ್ಲಿರುವ ಯಾವ ಮುಸಲ್ಮಾನನೂ ಅಯೋದ್ಯೆಗೆ ವಿರೋಧ ಮಾಡುತ್ತಿಲ್ಲ. ಮಂದಿರದ ಜೊತೆಗೆ ಮಸೀದಿಯನ್ನೂ ಕಟ್ಟಿಸಿ. ನಮಗೆ ಶಾಂತಿ-ನೆಮ್ಮದಿ ಬೇಕು. ಹಿಂದೂ, ಮುಸಲ್ಮಾನ, ಕ್ರೈಸ್ತ, ಸಿಖ್ಖರು ಪ್ರೀತಿಯಿಂದ, ನೆಮ್ಮದಿಯಿಂದ ಶಾಂತಿಯಿಂದ ಬಾಳುತ್ತಿದ್ದಾರೆ. ಅದು ಭಾರತದಲ್ಲಿ ಮಾತ್ರ ಎಂದು ವಕ್ಫ್ ಸಚಿವ ಜಮೀರ್ ಅಹಮದ್ ಹೇಳಿದರು.

ಶನಿವಾರ ಕುಂದಾಪುರದ ಜುಮ್ಮಾ ಮಸೀದಿ ಭೇಟಿಗಾಗಿ ಆಗಮಿಸಿದ್ದ ಅವರು ಖಾರ್ವಿಕೇರಿಯ ಎ.ಕೆ.ಮಂಜಿಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿ‌ಎಸ್ ಕಾರಣ:
ರಾಜ್ಯದಲ್ಲಿ ಹಿಂದೆ ಬಿಜೆಪಿ ಅಧಿಕಾರಿಕ್ಕೆ ಬರಲು ಜೆಡಿ‌ಎಸ್ ಕಾರಣ. ಅಂದು ನಾನೂ ಕೂಡ ಅದರ ಒಂದು ಭಾಗವಾಗಿದ್ದೆ. ಜೆಡಿ‌ಎಸ್ ಬಿಜೆಪಿ ಟ್ವೆಂಟಿ-ಟ್ವೆಂಟಿ ಸರ್ಕಾರದಲ್ಲಿ ಮೊದಲು ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ನಂತರ ಬಿಜೆಪಿಗೆ ಅಧಿಕಾರಿ ಬಿಟ್ಟಿಕೊಡದಿರುವುದೇ ಮತದಾರರ ಸಿಂಪತಿ ಸಿಕ್ಕಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿಗೆ ಮಾತುಕೊಟ್ಟಂತೆ ಅಧಿಕಾರ ಬಿಡುವಂತೆ ಕುಮಾರಸ್ವಾಮಿಯವರಲ್ಲಿ ನಾನು ಹೇಳಿದ್ದೆ ಎಂದು ಸಚಿವ ಹೇಳಿದರು.

ಗೋವಾ ಸರ್ಕಾರ ರಾಜ್ಯದ ಮೀನು ನಿಷೇಧಿಸಿರುವ ಬಗ್ಗೆ ನೊಂದವರು ಸಾಕಷ್ಟು ದೂರು ಕೊಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರಿಗೆ ಸಭೆ ನಿಗಧಿಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ನಮ್ಮ ಸರ್ಕಾರ ಬಡವರ ಪರವಾಗಿದ್ದು, ಯಾರಿಗೂ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ ಎಂದರು.

ವಕ್ಫ್ ಆಸ್ತಿ ಪರಬಾರೆ ಆಗಿರೋದು ಮೇಲ್ನೋಟಕ್ಕೆ ಸತ್ಯವಾಗಿದೆ. ಈ ಬಗ್ಗೆ ವಿಸ್ತ್ರತ ವರದಿ ನೀಡುವಂತೆ ಹತ್ತಾರು ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಕ್ಪ್ ಆಸ್ತಿ ಎಷ್ಟಿದೆ ಎನ್ನುವ ಕುರಿತು ಸರ್ವೆ ನಡೆಯುತ್ತಿದೆ. ಸದ್ಯದಲ್ಲಿಯೇ ಸರ್ವೆ ವರದಿ ಬರಲಿದೆ. ಈ ವರದಿ ಬಂದ ಬಳಿಕ ತನಿಖಾ ತಂಡ ನೇಮಿಕ ಮಾಡುವ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಇರುವ ಆಸ್ತಿಗಳು ಮರಳಿ ಬಂದರೆ ನಮಗೆ ಸರ್ಕಾರದ ಅನುದಾನದ ಅಗತ್ಯವೇ ಇಲ್ಲ. ಮೊದಲು ಬೆಂಗಳೂರಿನ ಆಸ್ತಿಗಳ ವಿವರಗಳನ್ನು ಕಲೆ ಹಾಕಲು ಸಿದ್ದತೆ ನಡೆಸಲಾಗಿದ್ದು, ಇದಕ್ಕಾಗಿ ಈಗಾಗಲೇ ೨ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದ್ದು, ಡಿ.೧೬ ಕ್ಕೆ ಸಮಿತಿಯ ಸಭೆ ನಡೆಯಲಿದೆ. ರಾಜ್ಯದ ೨೨೪ ತಾಲ್ಲೂಕಿನಲ್ಲಿರುವ ವಕ್ಫ್‌ಆಸ್ತಿಗಳ ಮಾಹಿತಿ ಪಡೆದುಕೊಳ್ಳಲಾಗುವುದು. ಪ್ರತಿ ತಾಲ್ಲೂಕುಗಳಲ್ಲಿ ಮುಸ್ಲಿಂ ದಫನ ಭೂಮಿ ಇಲ್ಲದ ಕಡೆ ದಫನ ಭೂಮಿಗೆ ಜಾಗ ಕಾದಿರಿಸುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ ಅವರು ಸರ್ಕಾರಿ ಭೂಮಿ ಇಲ್ಲದ ಕಡೆ ಖಾಸಗಿ ಭೂಮಿ ಖರೀದಿ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಅನ್ವರ ಮಾಣಿಪ್ಪಾಡಿ ನೀಡಿದ ವರದಿ ಬಗ್ಗೆ ಪ್ರಾಸ್ತಾಪಿಸಿದ ಸಚಿವರು ಮಾಣಿಪ್ಪಾಡಿ ತಮ್ಮ ಅಧಿಕಾರವಧಿ ನೀಡಿದ ಬಳಿಕ ನೀಡಿದ ವರದಿಗೆ ಯಾವ ಮಹತ್ವವೂ ಇಲ್ಲ. ಈ ವರದಿ ನೀಡಿದ ನಂತರವೂ ಅವರದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ವರದಿಯ ಕುರಿತು ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವದನ್ನು ಅವರು ರಾಜ್ಯದ ಜನರ ಮುಂದಿಡಲಿ. ಈ ವಿಚಾರ ಸದ್ಯ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಮಾನ ಬಂದ ಬಳಿಕ ಸ್ವಷ್ಟ ಪ್ರತಿಕ್ರಿಯೆ ನೀಡುತ್ತೇನೆ. ಮಾಣಿಪ್ಪಾಡಿ ಅವರಿಗೆ ದೇವರ ಆಸ್ತಿ ರಕ್ಷಿಸಬೇಕು ಎನ್ನುವ ಪ್ರಾಮಾಣಿಕ ಉದ್ದೇಶ ಇದ್ದರೆ, ವಕ್ಫ್‌ಆಸ್ತಿ ರಕ್ಷಣೆ ಮಾಡಲು ಮುಂದಾಗಿರುವ ನನ್ನ ಜತೆ ಕೈಜೋಡಿಸಲಿ ಎಂದು ಆಹ್ವಾನ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಬಾರ್ಕೂರ್, ಜುಮ್ಮಾ ಮಸೀದಿ ಅಧ್ಯಕ್ಷ ನಾಸೀರ್, ಕಾರ್ಯದರ್ಶಿ ಅಲ್ತಾಫ್ ಖುರೇಷಿ, ಪುರಸಭಾ ಸದಸ್ಯ ಅಬ್ಬು ಮಹಮ್ಮದ್, ಉದ್ಯಮಿ ಎ.ಕೆ ಸಾಹೇಬ್, ಮಾಜಿ ಪುರಸಭಾ ಅಧ್ಯಕ್ಷ ಬಿ.ಹಾರೂನ್ ಸಾಹೇಬ್, ಯಾಸೀನ್ ಸಂತೋಷ್‌ನಗರ, ಮನ್ಸೂರ್ ಮರವಂತೆ, ಹುಸೈನ್ ಹೈಕಾಡಿ ಇದ್ದರು.

Comments are closed.