ಕರಾವಳಿ

ಯಕ್ಷಾಂಗಣದಿಂದ ಎ.ಕೆ.ನಾರಾಯಣ ಶೆಟ್ಟಿ-ಮಹಾಬಲ ಶೆಟ್ಟಿ ಸಂಸ್ಮರಣೆ

Pinterest LinkedIn Tumblr

ಮಂಗಳೂರು: ‘ಯಕ್ಷಗಾನ ತಾಳಮದ್ದಳೆ ಕಾರ್ಯಗಳಿಗೆ ಯಾವುದೇ ಪ್ರಾಯೋಜಕರಿಲ್ಲದ ಹೊತ್ತಿನಲ್ಲಿ ಸ್ವಂತ ದುಡಿಮೆಯ ಹಣದಿಂದ ಆ ಕಾಲದ ಮೇರು ಕಲಾವಿದರ ಕೂಟಗಳನ್ನು ಏರ್ಪಡಿಸುತ್ತಿದ್ದ ಹಿರಿಯರು ಇಂದಿನ ಸಂಘಟಕರಿಗೆ ಮಾದರಿ. ಅವರು ಯಕ್ಷಗಾನಕ್ಕಾಗಿ ಬದುಕಿದವರು, ತಮ್ಮ ಬದುಕನ್ನು ಆ ಕಲೆಗಾಗಿ ತೇದವರು’ ಎಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗ್ಡೆ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್ ಡಿ ಎಮ್ ಲಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ಆರನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2018’ ದ ನಾಲ್ಕನೇ ದಿನ ಕೀರ್ತಿಶೇಷ ಅರ್ಥಧಾರಿಗಳಾದ ದಿ.ಎ.ಕೆ.ನಾರಾಯಣ ಶೆಟ್ಟಿ ಮತ್ತು ದಿ.ಎ.ಕೆ.ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಅವರು ಮಾತನಾಡಿದರು.

ಸಂಸ್ಮರಣಾ ಸಮಿತಿ ಸಂಚಾಲಕರಾದ ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ ನುಡಿನಮನ ಸಲ್ಲಿಸಿ ಮಾತನಾಡುತ್ತಾ ‘ಎ.ಕೆ.ನಾರಾಯಣ ಶೆಟ್ಟರು ತಮ್ಮ ಟೈಲರ್ ವೃತ್ತಿಯೊಂದಿಗೆ ಯಕ್ಷಗಾನ ಅರ್ಥಧಾರಿಯಾಗಿ ಹೆಸರು ಗಳಿಸಿದ್ದು ಫರಂಗಿಪೇಟೆಯಲ್ಲಿ ಯಕ್ಷಗಾನ ಸಂಘ ಸ್ಥಾಪಿಸಿ ಹಲವು ಆಸಕ್ತರಿಗೆ ಮಾರ್ಗದರ್ಶಕರಾಗಿದ್ದರು.ಯಕ್ಷಗಾನಕ್ಕೆ ಬೇಕಾಗುವ ಫರದೆ, ಟೆಂಟ್ ಗಳನ್ನು ತಯಾರಿಸಿ ಕೊಡುತ್ತಿದ್ದರು. ಅವರ ನೆರಳಿನಲ್ಲಿ ಪಳಗಿದ ಮಹಾಬಲ ಶೆಟ್ಟರು ಚೌತಿ ತಾಳಮದ್ದಳೆಗಳನ್ನು ಸಂಯೋಜಿಸುತ್ತಿದ್ದರು’ ಎಂದರು

*ಸನ್ಮಾನವೆಂದರೆ ಜವಾಬ್ದಾರಿ : ಕಿಶನ್ ಶೆಟ್ಟಿ*

ಸಮಾರಂಭದಲ್ಲಿ ಕಲಾಪೋಷಕ ಉದ್ಯಮಿ ಹಾಗೂ ಅಡ್ಯಾರ್ ಗಾರ್ಡನ್ ಮಾಲಕರಾದ ಕಿಶನ್ ಶೆಟ್ಟಿ ಅವರನ್ನು ಯಕ್ಷಾಂಗಣ ವತಿಯಿಂದ ಸನ್ಮಾನಿಸಲಾಯ್ತು. ಅವರು ಮಾತನಾಡಿ ‘ಯಕ್ಷಾಂಗಣದ ಗೌರವ ತನ್ನ ಜೀವನದ ಮೊದಲ ಸನ್ಮಾನ.ಇದು ಕೇವಲ ಸಮ್ಮಾನವಲ್ಲ, ಜವಾಬ್ದಾರಿ.ಅದಕ್ಕಾಗಿ ತನ್ನಿಂದಾದ ಅಳಿಲ ಸೇವೆ ಮಾಡುವೆ’ ಎಂದು ನುಡಿದರು.

ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ,ಕೊಲ್ಯ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಹೆಚ್., ಮೂಡಾ ಅಧಿಕಾರಿ ವಿಶ್ವನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಎ.ಕೆ.ಸ್ಮಾರಕ ಸಮಿತಿಯ ಪದ್ಮಾವತಿ ಶೇಖ, ಎ.ಕೆ.ಸಂಜ್ಯೋತ್ ಶೇಖ ಮತ್ತು ಎ.ಕೆ ಪ್ರಶಾಂತ್ ಶೆಟ್ಟಿ ವೇದಿಕೆಯಲ್ಲಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರ. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಪ್ರಾರ್ಥಿಸಿದರು. ಮಹಿಳಾ ಪ್ರತಿನಿಧಿ ಶೋಭಾ ಕೇಶವ ಕಣ್ಣೂರು ವಂದಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.

ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶಾಚಾರ್ಯ ಗೇರುಕಟ್ಟೆ,ಸಿದ್ಧಾರ್ಥ ಅಜ್ರಿ, ಮಧುಸೂದನ ಅಲೆವೂರಾಯ,ಪೂರ್ಣೇಶ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಹರೀಶ್ ಶೆಟ್ಟಿ ಸೂಡ ವಿರಚಿತ ‘ಅರ್ಜುನ ಸನ್ನೆಸಿ (ಸುಭದ್ರಾ ಕಲ್ಯಾಣ)’ ತುಳು ಯಕ್ಷಗಾನ ತಾಳಮದ್ದಳೆ ಸತೀಶ್ ಶೆಟ್ಟಿ ಬೊಂದೇಲ್ ಅವರ ಭಾಗವತಿಕೆಯಲ್ಲಿ ಜರಗಿತು.

Comments are closed.