ಕರಾವಳಿ

ಶ್ರೀರಾಮ ತಾರಕಮಂತ್ರ ಕೋಟಿ ಲೇಖನ ಮಹಾಯಜ್ಞ; ಬೀಜಾಡಿ-ಗೋಪಾಡಿಯಲ್ಲಿ ಸಹಸ್ರಾರು ಭಕ್ತರ ದಂಡು

Pinterest LinkedIn Tumblr

ಕುಂದಾಪುರ: ಬೀಜಾಡಿ-ಗೋಪಾಡಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಿದ ಭಜನಾ ಮಂದಿರ 75 ಸಂವತ್ಸರಗಳನ್ನು ಪೂರೈಸಿ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, ಮೀನುಗಾರಿಕೆಯನ್ನು ನೆಚ್ಚಿಕೊಂಡ ನಮ್ಮ ಪೂರ್ವಿಕರು ರಾಮಧ್ಯಾನದಲ್ಲಿ ವಿಶೇಷ ಆಸಕ್ತಿ ಹೊಂದಿದವರು. ಹಿಂದಿನವರ ಕನಸಾಗಿರುವ ಶ್ರೀ ರಾಮ ಭಜನಾಮಂದಿರದ ಶ್ರೀರಾಮಾಮೃತ ಭವನ ನಿರ್ಮಾಣ ಯೋಜನೆ ನಮ್ಮ ಗುರಿಯಾಗಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಲ್ಪನೆಗೆ ಗೋಪಾಡಿಯ ರಾಮಮಂದಿರದಿಂದಲೆ ಚಾಲನೆ ಸಿಕ್ಕಿದಂತಾಗಿದೆ ಎಂದು ಶ್ರೀರಾಮಾಮೃತ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಹೇಳಿದರು.

ಶ್ರೀರಾಮ ಭಜನಾ ಮಂದಿರ ಬೀಜಾಡಿ-ಗೋಪಾಡಿ, ಅಮೃತ ಮಹೋತ್ಸವ ಸಮಿತಿ ವತಿಯಿಂದ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಅಮೃತ ಮಹೋತ್ಸವ, ಸಹಸ್ರ ಕುಂಭಾಭಿಷೇಕ ಹಾಗೂ ಶ್ರೀರಾಮ ತಾರಕಮಂತ್ರ ಕೋಟಿ ಲೇಖನ ಮಹಾಯಜ್ಞದ ಮಹಾಪೂರ್ಣಾಹುತಿ ಸಂಭ್ರಮದಲ್ಲಿ ಅವರು ಮಾತನಾಡಿದರು.

 

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಎನ್ ನರಸಿಂಹ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಸಂಪ್ರದಾಯಬದ್ದವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದ ಈ ಭಜನಾ ಮಂದಿರದ ಅಮ್ರತಮಹೋತ್ಸವಕ್ಕೆ ಯುವಕರು ಕೈಜೋಡಿಸಿದ್ದು ಬೀಜಾಡಿ, ಗೋಪಾಡಿ ಹಾಗೂ ಸಮೀಪದೂರುಗಳ ಜನರು ಕಳೆದ ಹದಿನೈದು ದಿನಗಳಿಂದ ಸಸ್ಯಾಹಾರದ ಶುದ್ಧಾಚಾರದೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಂದರು.

ಉಡುಪಿ ಜಿಲ್ಲೆಯಲ್ಲೇ ಪ್ರಥಮವಾಗಿ ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಙ ಮತ್ತು ಸಹಸ್ರ ಕುಂಭಾಭಿಷೇಕ ನಡೆಯುತ್ತಿದ್ದು ಭಾನುವಾರ ರಾತ್ರಿಯವರೆಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ಹಿರಿಯಣ್ಣ ಚಾತ್ರಬೆಟ್ಟು, ಶ್ರೀರಾಮಾಮೃತ ಭವನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಆನಂದ ಸಿ. ಕುಂದರ್, ಶ್ರೀರಾಮ ಭಜನಾ ಮಂದಿರ ಆಡಳಿತ ಸಮಿತಿ ಗೌರವಾಧ್ಯಕ್ಷ ಶಂಕರ್ ಕಾಂಚನ್, ಅಧ್ಯಕ್ಷ ದಿನೇಶ್ ಸುವರ್ಣ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕ್ರಷ್ಣ ಶೆಟ್ಟಿ, ಗೋಪಾಡಿ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಬೀಜಾಡಿ ಮೀನುಗಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಯ್ಯ ಪುತ್ರನ್ ಕುಂಭಾಸಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ರಾಜು ಬಿ. ಅಜ್ಜಿಮನೆ, ಸುನೀಲ್ ಜಿ. ನಾಯಕ್, ಶ್ರೀಧರ್ ಚಾತ್ರಬೆಟ್ಟು ಇದ್ದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.