ಕರಾವಳಿ

ಮೂರನೇ ದಿನಕ್ಕೆ ಕಾಲಿಟ್ಟ ಟಿಪ್ಪರ್ ಮುಷ್ಕರ; ಡಿಸಿಯಿಂದಲೂ ಸಿಕ್ಕಿಲ್ಲ ಇನ್ನೂ ಉತ್ತರ!

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಟಿಪ್ಪರ್ ಮಾಲಿಕರು ಹಾಗೂ ಚಾಲಕರು ಮುಷ್ಕರಕ್ಕಿಳಿದಿದ್ದು ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಸಾಲುಸಾಲಾಗಿ ಟಿಪ್ಪರ್ ನಿಲ್ಲಿಸಿದ್ದಾರೆ. ಈ ಮುಷ್ಕರ ಮೂರು ದಿನದಿಂದ ನಡೆಯುತ್ತಿದ್ದರೂ ಕೂಡ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ಹೆದ್ದಾರಿ ಸನಿಹ ಟಿಪ್ಪರ್ ಹಾಗೂ 407 ವಾಹನಗಳನ್ನು ನಿಲ್ಲಿಸಿ ಮಾಲಿಕರು ಮುಷ್ಕರ ನಡೆಸುತ್ತಿದ್ದಾರೆ. ಹೆಮ್ಮಾಡಿಯಲ್ಲಿ ನಡೇಯುತ್ತಿದ್ದ ಟಿಪ್ಪರ್ ಮುಷ್ಕರ ಪ್ರದೇಶಕ್ಕೆ ಶನಿವಾರ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಭೇಟಿ ನೀಡಿದರು.

ಜಿಲ್ಲೆಯಿಂದ ಮರಳು ಹೊರಭಾಗಕ್ಕೆ ಹೋಗದಂತೆ ತಡೆಯುವುದು, ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಮರಳುಗಾರಿಕೆಗೆ ಅನುಮತಿ ನೀಡಲು ಕ್ರಮಕೈಗೊಳ್ಳಿ. ಮರಳು ತೆಗೆದರೆ ಪರಿಸರ ಹಾನಿಯಾಗುತ್ತೆ ಎನ್ನುತ್ತಾರೆ ಆದರೆ ಎಂ ಸ್ಯಾಂಡ್ ಮಾಡಿದರೆ ಪರಿಸರ ಹಾಳಾಗೋದಿಲ್ಲವೇ? ಬೇರೆ ತಾಲೂಕುಗಳಿಗೆ ಸಿಗುವ ಮರಳುಗಾರಿಕೆ ಅನುಮತಿ ಕುಂದಾಪುರಕ್ಕೆ ಮಾತ್ರ ಯಾಕೆ ಸಿಗುತ್ತಿಲ್ಲವೆಂಬುದು ಅರ್ಥವಾಗುತ್ತಿಲ್ಲ. ಬ್ಯಾಂಕ್ ಹಾಗೂ ಇತರೆ ಕಡೆ ಮಾಡಿದ ಸಾಲ ಕಟ್ಟಲಾಗದೆ ಅತಂತ್ರರಾಗಿದ್ದೇವೆ ಎಂದು ಸಮಸ್ಯೆ ಬಗ್ಗೆ ಅವಲತ್ತುಕೊಂಡರು.

ಈ ಸಂದರ್ಭ ಟಿಪ್ಪರ್ ಮಾಲಿಕರ ನಿಯೋಗದ ಜೊತೆ ಮಾತನಾಡಿ ಸಮಸ್ಯೆ ಆಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮರಳು ಸಿಗದೆ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಈಗಾಗಲೇ ನೂರಾರು ಮಂದಿ ರೈತರು ಸಾಲದ ವಿಚಾರದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆಗಳು ನಡೆದಿದ್ದು ಒಂದೊಮ್ಮೆ ಮರಳುಗಾರಿಕೆ ಸಮಸ್ಯೆ ಹೀಗೆಯೇ ಮುಂದುವರಿದರೆ ಇದನ್ನು ನಂಬಿಕೊಂಡ ಮಂದಿಯೂ ಆತ್ಮಹತ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೂ ಜಿಲ್ಲಾಧಿಕಾರಿಗಳು ಬೆಲೆ ಕೊಡದಿರುವುದು ಸರಿಯಲ್ಲ. ಅತೀ ಶೀಘ್ರದಲ್ಲಿ ಮರಳು ಸಮಸ್ಯೆ ನಿವಾರಣೆ ಮಾಡದಿದ್ದಲ್ಲಿ ಜನರ ಪ್ರತಿಭಟನೆಗೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ. ನೀತಿ ಸಂಹಿತೆ ಬಳಿಕ ನಾವು ಉಘ್ರ ಹೋರಾಟಕ್ಕೂ ಬದ್ಧರಿದ್ದು ಜೈಲಿಗೂ ಹೋಗಲು ಸಿದ್ದ ಎಂದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ…
ಮುಷ್ಕರ ನಿರತ ಹೆಮ್ಮಾಡಿ ಪ್ರದೇಶಕ್ಕೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯ ಭೇಟಿ ನೀಡಿದ್ದು ಸುದ್ದಿಗಾರ ಜೊತೆ ಮಾತನಾಡಿದ ಅವರು, ಜನರು ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಸಿ.ಆರ್.ಝಡ್ ಅತೀಸೂಕ್ಷ್ಮ ಪ್ರದೇಶವೆಂದು ಹೇಳಿದ್ದು ಅದನ್ನು ನಿವಾರಿಸಿದಲ್ಲಿ ಮರಳು ತೆಗೆಯಲು ಸಸೂತ್ರವಾಗಲಿದ್ದು ಇದು ಸರ್ಕಾರಿ ಮಟ್ಟದಲ್ಲಿ ನಡೆಯಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಲಾರಿ ಹಾಗೂ ಟಿಪ್ಪರ್ ಮಾಲಿಕರ ನಿತ್ಯ ಉದ್ಯೋಗಕ್ಕೆ ಕಂಟಕ ಬಂದಿದೆ.  ದುಡಿಮೆ ಇಲ್ಲದೇ ಅತಂತ್ರರಾಗಿದ್ದು ಸದ್ಯ ಮುಷ್ಕರದ ದಾರಿ ಹಿಡಿದಿದ್ದು ಇದಕ್ಕೆ ಬೆಂಬಲ ನೀಡುವುದು ಮಾತ್ರವಲ್ಲದೇ ಸಂಬಂದಪಟ್ಟವರ ಗಮನಕ್ಕೆ ತರುವ ಕೆಲಸ ಮಾಡುವೆ ಎಂದರು.

ಕಾರ್ಮಿಕ ಮುಖಂಡ ರವಿ ಶೆಟ್ಟಿ ಭೇಟಿ..
ಕಾರ್ಮಿಕ ಮುಖಂಡ ರವಿ ಶೆಟ್ಟಿ ಬೈಂದೂರು ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಜಿಲ್ಲಾಡಳಿತ ವಿರುದ್ಧ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಸಮಸ್ಯೆ ಅನುಭವಿಸಿದ ಮಂದಿ ಯಾವುದೇ ಪ್ರತಿಭಟನೆ ನಿರ್ಧಾರ ತೆಗೆದುಕೊಂಡರೂ ಕೂಡ ಅದಕ್ಕೆ ಬೆಂಬಲವಿದೆ. ಬಡವರ ಕಷ್ಟವನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವಷ್ಟು ಸೌಜನ್ಯವಿಲ್ಲದ ರೀತಿಯ ಅಧಿಕಾರಿಗಳ ವರ್ತನೆ ಸರಿಯಲ್ಲ ಎಂದು ಗುಡುಗಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.