ಕರಾವಳಿ

ಮೌತ್‌ವಾಷ್ ಬಳಸದೆ ಬಾಯಿಯ ಸಂಪೂರ್ಣ ಸ್ವಚ್ಛತೆ ಸಾಧ್ಯವಿಲ್ಲವೇ..ತಿಳಿಯಿರಿ.

Pinterest LinkedIn Tumblr


ಆರೋಗ್ಯಕರ ವಸಡುಗಳು ಮತ್ತು ಹಲ್ಲುಗಳಿಗಾಗಿ ಮೌತ್‌ವಾಷ್ ಬಳಕೆಯೊಂದಿಗೆ ಹಲವಾರು ತಪ್ಪುಗ್ರಹಿಕೆಗಳು ಗುರುತಿಸಿಕೊಂಡಿರುವದರಿಂದ ಜನರಲ್ಲಿ ಈ ಬಗ್ಗೆ ಅರಿವಿನ ಹೆಚ್ಚಿನ ಕೊರತೆಯಿದೆ. ಮೌತ್‌ವಾಷ್ ಬಳಕೆಯನ್ನು ನಿರ್ಧರಿಸುವಲ್ಲಿ ಬಾಯಿಯ ಆರೋಗ್ಯ ಮುಖ್ಯಪಾತ್ರ ವಹಿಸುತ್ತದೆ ಎನ್ನುವುದನ್ನು ಅಧ್ಯಯನಗಳು ಬೆಟ್ಟು ಮಾಡಿವೆ. ಮೌತ್‌ವಾಷ್ ಬಳಸದೆ ಬಾಯಿಯ ಸಂಪೂರ್ಣ ಸ್ವಚ್ಛತೆ ಸಾಧ್ಯವಿಲ್ಲವೆಂದು ನಮ್ಮನ್ನು ನಂಬಿಸಲು ಜಾಹೀರಾತುಗಳು ಪ್ರಯತ್ನಿಸುತ್ತಲೇ ಇವೆ. ಮೌತ್‌ವಾಷ್ ಕುರಿತು ಹೆಚ್ಚಿನ ಮಾಹಿತಿಗಳಿಲ್ಲಿವೆ…

ಮೌತ್‌ವಾಷ್ ಏನು ಮಾಡುತ್ತದೆ?
ಮೌತ್‌ವಾಷ್ ಬಾಯಿ ಮುಕ್ಕಳಿಸಿಕೊಳ್ಳುವ ದ್ರಾವಣವಾಗಿದೆ,ಆದರೆ ಇದು ನೀವು ದಿನಕ್ಕೆರಡು ಬಾರಿ ಹಲ್ಲುಜ್ಜುವ ಅಗತ್ಯವನ್ನು ನಿವಾರಿಸುವದಿಲ್ಲ. ಮೌತ್‌ವಾಷ್ ನ್ನು ಸಾಮಾನ್ಯವಾಗಿ ಉಸಿರನ್ನು ತಾಜಾ ಆಗಿರಿಸಲು ಬಳಸಲಾಗುತ್ತದೆ. ಕೆಲವು ವೌತ್‌ವಾಷ್‌ಗಳು,ವಿಶೇಷವಾಗಿ ಫ್ಲೋರೈಡ್‌ನ್ನು ಒಳಗೊಂಡಿರುವ ಮೌತ್‌ವಾಷ್ ಗಳು ಪಾಚಿಯ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಆಮ್ಲಗಳ ವಿರುದ್ಧ ಹಲ್ಲುಗಳಿಗೆ ರಕ್ಷಣೆ ನೀಡುತ್ತವೆ.

ನೀವು ವಸಡಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಶಿಲೀಂಧ್ರ ಸೋಂಕಿಗೊಳಗಾಗಿದ್ದರೆ ನಿಮ್ಮ ದಂತವೈದ್ಯರು ನಿರ್ದಿಷ್ಟ ಮೌತ್‌ವಾಷ್ ಗಳನ್ನು ಬಳಸುವಂತೆ ಶಿಫಾರಸು ಮಾಡಬಹುದು. ಕೆಲವು ಮೌತ್‌ವಾಷ್ ಗಳು ದಂತಕುಳಿಗಳಾಗುವುದನ್ನು ತಡೆಯಬಹುದು,ಇನ್ನು ಕೆಲವು ವೌತ್‌ವಾಷ್‌ಗಳು ಹಲ್ಲುಗಳು ಪಾಚಿಗಟ್ಟುವುದನ್ನು ತಡೆಯಬಲ್ಲ ಕೀಟಾಣುನಾಶಕ ಘಟಕಗಳನ್ನು ಒಳಗೊಂಡಿರಬಹುದು. ಹೆಚ್ಚಿನ ಮೌತ್‌ವಾಷ್ ಗಳು ಮದ್ಯಸಾರವನ್ನು ಒಳಗೊಂಡಿರುವುದರಿಂದ ಆಕಸ್ಮಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ನುಂಗಿದಾಗ ಸಮಸ್ಯೆಗಳನ್ನುಂಟು ಮಾಡಬಹುದು. ಆದರೆ ಮದ್ಯಸಾರ ಮುಕ್ತ ಮೌತ್‌ವಾಷ್ ಗಳೂ ಲಭ್ಯವಿವೆ. ಸೂಕ್ಷ್ಮ ವಸಡುಗಳನ್ನು ಹೊಂದಿದವರಿಗೆ ನೈಸರ್ಗಿಕ ಮೌತ್‌ವಾಷ್ ಗಳು ಹೆಚ್ಚು ಸೂಕ್ತವಾಗುತ್ತವೆ. ಇವು ಅಲೋವೆರಾ ಮತ್ತು ಚಮೋಲಿಯಂತಹ ಘಟಕಗಳನ್ನು ಒಳಗೊಂಡಿರುತ್ತವೆ.

ಆರೋಗ್ಯಕರ ಹಲ್ಲುಗಳು ಮತ್ತು ವಸಡುಗಳಿಗಾಗಿ ಮೌತ್‌ವಾಷ್ ನಿಜಕ್ಕೂ ಅಗತ್ಯವೇ?
ನೀವು ದಿನಕ್ಕೆರಡು ಬಾರಿ ಹಲ್ಲುಗಳ ಬ್ರಷಿಂಗ್ ಮತ್ತು ಫಾಸಿಂಗ್ ಮಾಡುತ್ತೀರಾದರೆ ಮತ್ತು ನಿಯಮಿತವಾಗಿ ದಂತವೈದ್ಯರಿಂದ ಅವುಗಳನ್ನು ಸ್ವಚ್ಛ ಮಾಡಿಸಿಕೊಳ್ಳುತ್ತೀರಾದರೆ ವೌತ್‌ವಾಷ್‌ಗಳು ನಿಜಕ್ಕೂ ಅಗತ್ಯವಿಲ್ಲ.

ಮೌತ್‌ವಾಷ್ ಗಳು ನಿಮ್ಮ ಹಲ್ಲುಗಳ ಮೇಲ್ಮೈ ಮೇಲೆ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಈಗಾಗಲೇ ಬ್ಯಾಕ್ಟೀರಿಯಾಗಳು ಮತ್ತು ಪಾಚಿ ಸಂಗ್ರಹಗೊಂಡಿದ್ದರೆ ಮೌತ್‌ವಾಷ್ ಬಳಕೆಯಿಂದ ಅವುಗಳ ನಿವಾರಣೆ ಸಾಧ್ಯವಿಲ್ಲ.

ಮೌತ್‌ವಾಷ್ ಗಳು ಮುಖ್ಯವಾಗಿ ಕೆಟ್ಟ ಉಸಿರಿಗೆ ತಾತ್ಕಾಲಿಕವಾಗಿ ತಡೆ ಹಾಕಬಲ್ಲವು ಅಷ್ಟೇ, ಕೆಟ್ಟ ಉಸಿರನ್ನು ಕಾಯಂ ಆಗಿ ನಿವಾರಿಸುವಲ್ಲಿ ಅವು ಪರಿಣಾಮಕಾರಿಯಲ್ಲ. ಆದರೂ ನೀವು ಮೌತ್‌ವಾಷ್ ಬಳಕೆಯನ್ನು ಮುಂದುವರಿಸಲು ಬಯಸುತ್ತೀರಾದರೆ ಅದು ಪಾಚಿಯ ವಿರುದ್ಧ ಹೋರಾಡುವಂತಾಗಲು ಬ್ಯಾಕ್ಟೀರಿಯಾ ನಿರೋಧಕ ಘಟಕಗಳನ್ನು ಹೊಂದಿರುವ ಮೌತ್‌ವಾಷ್ ನ್ನು ಆಯ್ಕೆ ಮಾಡಿಕೊಳ್ಳಿ.

ಮೌತ್‌ವಾಷ್ ಬಳಕೆಯ ಧನಾತ್ಮಕ ಅಂಶಗಳು
ಮೌತ್‌ವಾಷ್ ಗಳು ದಂತಕುಳಿಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವು ದಂತಕ್ಷಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತವೆ. ನಿಮ್ಮ ಮೌತ್‌ವಾಷ್ ಫ್ಲೋರೈಡ್ ಒಳಗೊಂಡಿದ್ದರೆ ಅದು ಹೆಚ್ಚುವರಿ ಲಾಭವಾಗುತ್ತದೆ. ಫ್ಲೋರೈಡ್ ಒಳಗೊಂಡಿರುವ ಮೌತ್‌ವಾಷ್ ಗಳು ಹಲ್ಲುಗಳ ಎನಾಮಲ್‌ಗಳನ್ನು ಗಟ್ಟಿಗೊಳಿಸುವ ಮೂಲಕ ದಂತಕುಳಿಗಳ ವಿರುದ್ಧ ರಕ್ಷಣೆ ನೀಡುತ್ತವೆ. ಮೌತ್‌ವಾಷ್ ಗಳು ವಸಡುಗಳನ್ನು ಆರೋಗ್ಯಕರವಾಗಿರಿಸುತ್ತವೆ. ಅವು ಹಲ್ಲುಗಳನ್ನು ಬಿಳಿಯಾಗಿಸುವಲ್ಲಿ ಮತ್ತು ಅವುಗಳ ಮೇಲಿನ ಕಲೆಗಳನ್ನು ನಿವಾರಸುವಲ್ಲಿ ನೆರವಾಗುತ್ತವೆ. ಅವು ಉಸಿರನ್ನು ತಾಜಾ ಆಗಿರಿಸುವ ಮೂಲಕ ಆತ್ಮವಿಶ್ವಾಸವನು ಹೆಚ್ಚಿಸಬಲ್ಲವು. ಅವು ಬಾಯಿಹುಣ್ಣುಗಳನ್ನು ಶಮನಗೊಳಿಸುತ್ತವೆ. ಮದ್ಯಸಾರ ಮುಕ್ತ ಮೌತ್‌ವಾಷ್ ಗಳು ಉರಿಯೂತಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಮೂಲಕ ಇಂತಹ ಹುಣ್ಣುಗಳು ಬೇಗ ಮಾಯುವಂತೆ ಮಾಡುತ್ತವೆ.

ಮೌತ್‌ವಾಷ್ ಬಳಕೆಯ ಋಣಾತ್ಮಕ ಅಂಶಗಳು
ಮೌತ್‌ವಾಷ್ ಗಳು ಕೆರಳಿಕೆಯನ್ನುಂಟು ಮಾಡಬಲ್ಲವು. ಹೆಚ್ಚಿನ ಪ್ರಮಾಣದಲ್ಲಿ ಮದ್ಯಸಾರವನ್ನು ಒಳಗೊಂಡಿರುವ ಇಂತಹ ದ್ರಾವಣಗಳು ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿರುತ್ತವೆ. ಇದು ಬಾಯಿಯೊಳಗಿನ ಅಂಗಾಂಶಗಳನ್ನು ಕೆರಳಿಸುತ್ತದೆ. ಹೀಗಾಗಿ ಮದ್ಯಸಾರವನ್ನು ಒಳಗೊಂಡಿರುವ ಮೌತ್‌ವಾಷ್ ಗಳು ಬಾಯಿ ಹುಣ್ಣುಗಳು ಗುಣವಾಗುವುದನ್ನು ವಿಳಂಬಿಸುತ್ತವೆ. ಹೆಚ್ಚಿನ ಮೌತ್‌ವಾಷ್ ಗಳು ಅಧಿಕ ಪ್ರಮಾಣದಲ್ಲಿ ಮದ್ಯಸಾರವನ್ನು ಒಳಗೊಂಡಿರುವುದರಿಂದ ನೀವು ಆಕಸ್ಮಿಕವಾಗಿ ಮೌತ್‌ವಾಷ್ ನುಂಗಿದರೆ ಅದು ಅಪಾಯಕಾರಿಯಾಗಬಹುದು. ಹೀಗಾಗಿ ದಂತವೈದ್ಯರು ಆರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ವೌತ್‌ವಾಷ್ ಬಳಕೆಯನ್ನು ಶಿಫಾರಸು ಮಾಡುವುದಿಲ್ಲ. ಮದ್ಯಸಾರವನ್ನು ಹೊಂದಿರುವ ಮೌತ್‌ವಾಷ್ ಗಳ ಅತಿಯಾದ ಬಳಕೆ ಬಾಯಿ ಒಣಗಲು ಕಾರಣವಾಗುತ್ತವೆ. ಇದು ಹಲ್ಲುಗಳನ್ನು ಅತಿಸಂವೇದನಾಶೀಲವಾಗಿಸುವ ಜೊತೆಗೆ ದಂತಕುಳಿಗಳು ಮತ್ತು ಕೆಟ್ಟ ಉಸಿರಿಗೂ ಕಾರಣವಾಗುತ್ತದೆ. ಮೌತ್‌ವಾಷ್ ಗಳ ಬಳಕೆಯಿಂದಾಗಿ ಸಂಭಾವ್ಯ ಬಾಯಿ ಆರೋಗ್ಯ ಸಮಸ್ಯೆಗಳು ಮರೆಮಾಚಲ್ಪಡುತ್ತವೆ. ಮೌತ್‌ವಾಷ್ ಗಳನ್ನು ನಿಯಮಿತವಾಗಿ ಬಳಸುತ್ತಿದ್ದರೆ ದೀರ್ಘಕಾಲೀನ ದುರ್ಗಂಧ ಶ್ವಾಸ ಸಮಸ್ಯೆಯು ಮರೆಯಲ್ಲಿಯೇ ಉಳಿದುಕೊಳ್ಳುತ್ತದೆ. ಈ ಸಮಸ್ಯೆಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯು ಅಗತ್ಯವಾಗುತ್ತದೆ ಮತ್ತು ಮೌತ್‌ವಾಷ್ ಬಳಕೆಯ ಮೂಲಕ ಅದನ್ನು ಬಚ್ಚಿಡುವುದು ಆರೋಗ್ಯಕರವಲ್ಲ.

ದುರ್ಗಂಧ ಶ್ವಾಸಕ್ಕೆ ನಾಲಿಗೆಯ ಹಿಂಭಾಗದ ಪುಟ್ಟಜಾಗವನ್ನು ವಾಸಸ್ಥಾನವನ್ನಾಗಿ ಮಾಡಿಕೊಂಡಿರುವ ಬ್ಯಾಕ್ಟೀರಿಯಾಗಳು ಕಾರಣ ವಾಗಿದ್ದು, ಟೂತ್‌ಬ್ರಷ್ ಮೂಲಕ ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು,ಹೀಗಾಗಿ ಮೌತ್‌ವಾಷ್ ಬಳಕೆ ಅಗತ್ಯ ಎಂದೇನಿಲ್ಲ ಎನ್ನುವುದು ಕೆಲವು ವೈದ್ಯರ ಅಭಿಪ್ರಾಯ.

Comments are closed.