ಕರಾವಳಿ

ಮೋದಿ ವಿರುದ್ಧ ಲಾಠಿ ತೋರಿಸಿ ಪ್ರತಿಭಟಿಸಿದ ಉಡುಪಿ ‘ಕೈ’ ಪಾಳಯ!

Pinterest LinkedIn Tumblr

ಉಡುಪಿ: ಪ್ರಧಾನಿ ಮೋದಿ ವಿರುದ್ಧ ಬೀದಿಗಿಳಿದಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಲಾಠಿ ಪ್ರದರ್ಶಿಸಿದ್ದಲ್ಲದೇ ಮೋದಿ ಭಾವಚಿತ್ರಕ್ಕೆ ಲಾಠಿಯೇಟು ನೀಡಿ ಧಿಕ್ಕಾರ ಕೂಗಿ ಪ್ರತಿಭಟಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಲಾಠಿ ಪ್ರದರ್ಶನ ಮಾಡಿದರು. ಮಣಿಪಾಲದ ಟೈಗರ್ ಸರ್ಕಲ್‍ನಿಂದ ಆರಂಭವಾದ ಪ್ರತಿಭಟನಾ ಜಾಥಾ ಜಿಲ್ಲಾಧಿಕಾರಿ ಕಚೇರಿ ತನಕ ಸಾಗಿತ್ತು. ಈ ವೇಳೆ ಕಾರ್ಯಕರ್ತರು ಲಾಠಿಯನ್ನು ನೆಲಕ್ಕೆ ಬಡಿಯುತ್ತಾ ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ರಫೆಲ್ ಹಗರಣ ಹಾಗೂ ವಿಮಾನಗಳಿಗೆ ತಗಲಿರುವ ಮೊತ್ತದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಹಗರಣದ ಬಗ್ಗೆ ಗೊತ್ತಿದ್ದರೂ, ಪ್ರಧಾನಿ ಮೋದಿಯವರ ಭಯದಿಂದಾಗಿ ಅವರು ತುಟಿ ಬಿಚ್ಚುತ್ತಿಲ್ಲ. ಇದು ಇಡೀ ದೇಶಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

ಕಾಂಗ್ರೆಸ್ಸಿನ ಲಾಠಿ ಪ್ರತಿಭಟನೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೆ ಏಕಾಏಕಿ ನೂರಾರು ಕಾರ್ಯಕರ್ತರು ರಸ್ತೆಯಲ್ಲೇ ಲಾಠಿ ಹಿಡಿದು ಮೆರವಣಿಗೆ ಹಮ್ಮಿಕೊಂಡಿದ್ದರಿಂದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.

ಪ್ರತಿಭಟನೆಯ ಮುಂದಾಳತ್ವವವನ್ನು ಮಾಜಿ ಸಚಿವ ವಿನಯ್‍ಕುಮಾರ್ ಸೊರಕೆ ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಮಾಜಿಶಾಸಕ ಕೆ. ಗೋಪಾಲ ಪೂಜಾರಿ ವಹಿಸಿದ್ದರು.

ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದರು.

Comments are closed.