ಕುಂದಾಪುರ: ನಿಮ್ಮ ಮನೆಯ ಜಾಗದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುತ್ತೇವೆ. ತಿಂಗಳಿಗೆ 15-20 ಸಾವಿರ ಹಣ ಮನೆಯಲ್ಲಿ ಕುಳಿತು ಸಂಪಾದನೆ ಮಾಡಲು ಅವಕಾಶವಿದೆ ಎಂದು ತನ್ನ ಬಣ್ಣದ ಮಾತುಗಳ ಮೂಲಕ ನಂಬಿಸುತ್ತಿದ್ದ ನಯವಂಚಕನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬೆಳಗಾಂ ಮೂಲದ ಇಲಿಯಾಸ್ ಪಾಟಾನ್ (55) ಬಂಧಿತ ಆರೋಪಿಯಾಗಿದ್ದು ಈತ ಖಾಸಗಿ ಟವರ್ ಕಂಪೆನಿಯ ಅಧಿಕಾರಿಯೆಂದು ಹಲವೆಡೆ ಜನರನ್ನು ವಂಚಿಸಿದ್ದು ಕುಂದಾಪುರದಲ್ಲಿನ ಒಂದು ಪ್ರಕರಣದಲ್ಲಿ ಆತನನ್ನು ಮಂಗಳವಾರ ಬಂಧಿಸಲಾಗಿದೆ. ಆರೋಪಿಯಿಂದ ಆಲ್ಟೋ ಕಾರು, 20 ಸಿಮ್, 3,880 ರೂ. ನಗದು, ಒಂದು ಮೊಬೈಲ್ ಫೋನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ತಾಲೂಕಿನ ಕನ್ಯಾನದ ಕಲ್ಲುಕಂಬ ನಿವಾಸಿ ಹಸೈನಾರ್ ಎಂಬ ವೃದ್ಧರೋರ್ವರ ಮನೆಗೆ ಬಂದ ಇಲಿಯಾಸ್ ಪಾಟಾನ್ ತನ್ನನ್ನು ತಾನು ಟವರ್ ಕಂಪೆನಿ ಅಧಿಕಾರಿಯೆಂದು ಪರಿಚಯಿಸಿಕೊಂಡು ತಮ್ಮ ಮನೆಯ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಅನುಮತಿ ಕೊಟ್ಟಲ್ಲಿ ಟವರ್ ನಿರ್ಮಿಸಲಿದ್ದು ಇದರಿಂದ ಮಾಸಿಕ ತಮಗೆ 15 ಸಾವಿರ ಆದಾಯ ಬರಲಿದೆ. ತಾವು ಒಪ್ಪಿದಲ್ಲಿ ತಹಶಿಲ್ದಾರ್ ಕಚೇರಿಯಲ್ಲಿ ಜಾಗದ ರಿಜಿಸ್ಟ್ರೇಶನ್ ಕೆಲಸ ಮಾಡುವೆ, ಇದಕ್ಕೆ ಸ್ವಲ್ಪ ಹಣ ಖರ್ಚಾಗಲಿದೆ ಎಂದು ಜಾಗದ ಆರ್.ಟಿ.ಸಿ. ಸಮೇತ ಕುಂದಾಪುರದ ಮಿನಿ ವಿಧಾನಸೌಧಕ್ಕೆ ಅವರನ್ನು ಕರೆತಂದಿದ್ದ. ಇದೇ ವೇಳೆ ರಿಜಿಸ್ಟ್ರೇಶನ್ ಖರ್ಚಿಗೆ 7 ಸಾವಿರ ಹಣ ಹಾಗೂ ಕರೆ ಮಾಡಿಕೊಡುವುದಾಗಿ ಹಸೈನಾರ್ ಮೊಬೈಲ್ ಫೋನ್ ಪಡೆದು ದಾಖಲೆಗಳನ್ನು ಟೈಪ್ ಮಾಡಿಸಿ ತರುವುದಾಗಿ ನಂಬಿಸಿ ಅವರನ್ನು ಅಲ್ಲಿಯೇ ಬಿಟ್ಟು ತೆರಳಿದ್ದ. ಕೆಲವು ಗಂಟೆಯಾದರೂ ಆ ಅಪರಿಚಿತನ ಪತ್ತೆಯಾಗದ ಹಿನ್ನೆಲೆ ತಾನು ಮೋಸ ಹೋಗಿದ್ದು ತಿಳಿದ ಹಸೈನಾರ್ ಮನೆಗೆ ವಾಪಾಸ್ಸಾಗಿದ್ದು ವೃದ್ಧರಾದ ಹಿನ್ನೆಲೆ ದೂರು ದಾಖಲಿಸಿರಲಿಲ್ಲ.
ಇಂದು ಸಿಕ್ಕಿಬಿದ್ದ ವಂಚಕ..
ಪ್ರಕರಣ ನಡೆದು ಬರೋಬ್ಬರಿ ಒಂದು ತಿಂಗಳಾಗಿದ್ದು ಹಸೈನಾರ್ ಇಂದು ಪತ್ನಿ ಜೊತೆ ಕುಂದಾಪುರಕ್ಕೆ ಆಗಮಿಸಿದ್ದ ವೇಳೆ ಕುಂದಾಪುರದ ಪಾರಿಜಾತ ಸರ್ಕಲ್ ಬಳಿ ಇಲಿಯಾಸ್ ತನ್ನ ಆಲ್ಟೋ ಕಾರಿನಲ್ಲಿ ನಿಂತಿದ್ದು ಕಂಡುಬಂದಿದ್ದು ಕೂಡಲೇ ಕುಂದಾಪುರ ಪೊಲೀಸ್ ಠಾನೆಗೆ ತೆರಳಿದ ಅವರು ವ್ಯಕ್ತಿಯೋರ್ವನಿಂದ ತಾನು ಈ ಪರಿಯಾಗಿ ವಂಚನೆಗೊಳಗಾಗಿದ್ದು ಆತ ನಗರದಲ್ಲಿದ್ದಾನೆಂದು ಪ್ರಕರಣ ದಾಖಲು ಮಾಡುತ್ತಾರೆ. ಕೂಡಲೇ ಪೊಲಿಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಕಾರು ಸಮೇತ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆಕೈಗೊಂಡಿದ್ದು ಆತ ತಾನು ವಂಚಿಸಿದ್ದು ನಿಜವೆಂದು ತಪ್ಪೊಪ್ಪಿಕೊಂಡಿದ್ದಾನೆ. ಈತ ರಾಜ್ಯದ ಹಲವು ಕಡೆಗಳಲ್ಲಿ ಇಂತಹ ಕೃತ್ಯವೆಸಗಿದ್ದು ಅಪರಿಚಿತನಾದ ಕಾರಣ ಯಾರೂ ಕೂಡ ಈತನ ಬಗ್ಗೆ ದೂರು ದಾಖಲು ಮಾಡಿರಲಿಲ್ಲ.
ಐಷಾರಾಮಿ ಬದುಕಿನ ಹಪಾಹಪಿ!?
ತನ್ನ ಮಾತಿನ ಶೈಲಿಯಲ್ಲೇ ಜನರನ್ನು ವಂಚಿಸುತ್ತಿದ್ದ ಈ ಇಲಿಯಾಸ್ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಿದ್ದ. ಈತ ಧರಿಸುತ್ತಿದ್ದ ದುಬಾರಿ ಬೆಲೆಯ ಬಟ್ಟೆಬರೆಗಳನ್ನು ಕಂಡ ಜನರು ಈತನನ್ನು ಅಧಿಕಾರಿಯೇ ಎಂದು ನಂಬುವಷ್ಟರ ಮಟ್ಟಿಗೆ ಈತನ ವರ್ತನೆಯಿರುತ್ತಿತ್ತು. ಕಾರಿನಲ್ಲಿಯೇ ತನಗೆ ಬೇಕಾದ ಅಷ್ಟೂ ಬಟ್ಟೆಬರೆ, ಇಸ್ತ್ರಿಪೆಟ್ಟಿಗೆ ಮೊದಲಾದವುಗಳನ್ನು ಇರಿಸಿಕೊಂಡಿರುತ್ತಿದ್ದ ಈತ ಪಕ್ಕಾ ಶೋಕಿವಾಲನಂತೆ ಕಾಣುತ್ತಾನೆ. ಒಬ್ಬೊಬ್ಬರನ್ನು ಒಂದೊಂದು ರೀತಿ ಯಾಮಾರಿಸುತ್ತಿದ್ದ ಈತ ಸಹಾಯುಕ ಆಯುಕ್ತ, ತಹಸಿಲ್ದಾರ್, ಆರ್.ಐ. ಮುಂತಾದ ಸರಕಾರಿ ಅಧಿಕಾರಿಯೆಂದು ಜನರನ್ನು ವಂಚಿಸಿದ್ದು ಕೂಡ ತನಿಖೆ ವೇಳೆ ಬಹಿರಂಗವಾಗಿದೆ ಎನ್ನಲಾಗಿದೆ.
ಕಾರ್ಯಾಚರಣೆಯಲಿದ್ದವರು…
ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಬಿ.ಪಿ. ಮಾರ್ಗದರ್ಶನದಲ್ಲಿ ಸಿಪಿಐ ಮಂಜಪ್ಪ ನೇತೃತ್ವದಲ್ಲಿ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್., ಕ್ರೈಮ್ ವಿಭಾಗದ ಪಿಎಸ್ಐ ರಮೇಶ್ ಪವಾರ್, ಎ.ಎಸ್.ಐ ಸುಧಾಕರ, ಹೆಡ್ಕಾನ್ಸ್ಟೇಬಲ್ಗಳಾದ ವೆಂಕಟರಮಣ, ಚಂದ್ರಶೇಖರ್, ಸುಬ್ಬಣ್ಣ ಶೆಟ್ಟಿ, ಜಗನ್ನಾಥ, ಜೋಸೆಫ್, ಸಿಬ್ಬಂದಿಗಳಾದ ಚೇತನ್, ಪ್ರಸನ್ನ, ಮಂಜುನಾಥ, ನಾಗರಾಜ್, ಪ್ರವೀಣ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು.
ವರದಿ- ಯೋಗೀಶ್ ಕುಂಭಾಸಿ
Comments are closed.