ಕರಾವಳಿ

ಸಿಡಿಲ ಹೊಡೆತದಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ

Pinterest LinkedIn Tumblr

ಇನ್ನೇನು.. ಒಂದು ಕಡೆ ಬಿಸಿಲ ಧಗ ಧಗ ಉರಿಯುತ್ತಿದ್ದರೆ ಇನ್ನೊಂದೆಡೆ ಗುಡುಗು, ಸಿಡಿಲುಗಳಿಂದ ಕೂಡಿದ ಮಳೆ ಅಬ್ಬರಿಸುತ್ತಿದೆ. ಮಳೆಗಾಲದಲ್ಲಿ ಗುಡುಗು, ಸಿಡಿಲಿಗೆ ಬಲಿಯಾಗುವವರ ಸುದ್ದಿ ಓದುತ್ತಲೇ ಇರುತ್ತೇವೆ. ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ. ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು.

ಇದಕ್ಕಾಗಿ ಕರ್ನಾಟಕ ಸರಕಾರದ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ಸಿಡಿಲ ಹೊಡೆತದಿಂದ ತಪ್ಪಿಸಿಕೊಳ್ಳಲು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದೆ.

ರಕ್ಷಣೆ ಹೇಗೆ?
ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.)
ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ
ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ, ನಿಲ್ಲ ಬೇಡಿ.
ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.
ಕೆರೆಯಲ್ಲಿ ಈಜುವುದು,ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .
ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ( ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.)
ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.
ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ, ಕಾಂಕ್ರೀಟ್ ಗೋಡೆಗಳನ್ನು ಸ್ಪೆರ್ಶಿಸದೆ, ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.
ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೊರವಿರಿ.
ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.
ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಾಹಸವೂ ಬೇಡ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
ಕಂಪ್ಯೂಟರ್ ಗಳಿಂದ ದೂರ ಇರಿ

Comments are closed.