ಕರಾವಳಿ

ಕುಂದಾಪುರ ಪೊಲೀಸರಿಗೆ ಸಿಕ್ಕ ಮಾನಸಿಕ ಅಸ್ವಸ್ಥ ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಡಿಮ್ಯಾನ್ಸ್ ಆಸ್ಪತ್ರೆಗೆ!

Pinterest LinkedIn Tumblr

ಕುಂದಾಪುರ: ಆತ ಊರೂರು ಅಲೆಯುತ್ತಿದ್ದ ಯುವಕ. ಕೊಂಚ ಮಾನಸಿಕ ಅಸ್ವಸ್ಥನಂತೆ ಕಂಡುಬಂದ ಹಿನ್ನೆಲೆ ಆತನನ್ನು ಪೊಲೀಸರಿಗೆ ಒಪ್ಪಿಸುತ್ತಾರೆ. ವಿಚಾರಣೆ ಬಳಿಕ ಈತನಿಗೆ ಚಿಕಿತ್ಸೆ ಅಗತ್ಯವಿದೆಯೆಂದು ತಿಳಿದ ಕುಂದಾಪುರ ಪೊಲೀಸರು ಆತನಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸೂಕ್ತ ಕ್ರಮಕೈಗೊಂಡಿದ್ದು ಈ ಕುರಿತ ಒಂದು ಸಣ್ಣ ರಿಪೋರ್ಟ್ ಇಲ್ಲಿದೆ ನೋಡಿ…

ಪೊಲೀಸರಿಗೂ ಮಾನವೀಯತೆ, ಸಮಯಪ್ರಜ್ನೆ ಇದೆ. ಅವರು ಇಚ್ಚಾಶಕ್ತಿ ತೋರಿದರೆ ಏನು ಬೇಕಾದ್ರು ಆಗುತ್ತೆ ಅನ್ನೋದಕ್ಕೆ ಕುಂದಾಪುರದಲ್ಲಿ ನಡೆದ ಒಂದು ಘಟನೆ ಸಾಕ್ಷಿ….ಹೀಗೆ ಕುಳಿತ ಈತನ ಹೆಸರು ಉಮೇಶ್ ಗೌಡರ್. ಬೆಳಗಾವಿ ಮೂಲದ ಇವನಿಗೆ ವಯಸ್ಸು ಇಪ್ಪತ್ತನಾಲ್ಕು ವರ್ಷ. ಮೊದಲೆಲ್ಲಾ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಈತ ತನ್ನ ಕುಟುಂಬದಲ್ಲಿ ನಡೆದ ಕೆಲ ಸಮಸ್ಯೆಗಳಿಂದ ಮಾನಸಿಕ ಅಸ್ವಸ್ಥನಂತಾಗಿದ್ದ. ಅದ್ಯಾಗೋ ಕುಂದಪುರ ತಾಲೂಕಿಗೆ ಬಂದ ಈತ ಗುರುವಾರ ಹೆಮ್ಮಾಡಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಈತನ ಚಲನವಲನದ ಬಗ್ಗೆ ಅನುಮಾನಬಂದ ಸ್ಥಳೀಯರು ಆತನನ್ನು ಕುಂದಾಪುರ ಪೊಲೀಸರಿಗೆ ಒಪ್ಪಿಸುತ್ತಾರೆ. ಠಾಣೆಗೆ ಕರೆತಂದ ಪೊಲೀಸರು ಆತನನ್ನು ಪಿಎಸ್ಐ ಹರೀಶ್ ಆರ್. ನಾಯ್ಕ್ ಅವರೆದುರು ಹಾಜರುಪಡಿಸುತ್ತಾರೆ. ಎಸ್ಐ ಆತನನ್ನು ವಿಚಾರಿಸುವಾಗ ಆತ ಬೆಳಗಾವಿಯವನಾಗಿದ್ದು ಆತನ ಮಾತಿನ ದಾಟಿ ನೋಡುವಾಗ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದು ತಿಳಿದಿದೆ. ಕೂಡಲೇ ಡಿವೈಎಸ್ಪಿ ದಿನೇಶ್ ಕುಮಾರ್ ಅವರಿಗೆ ಮಾಹಿತಿ ನೀಡಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಅವರ ಗಮನಕ್ಕೆ ತಂದು ಯುವಕನನ್ನು ಪೊಲೀಸರು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಯ್ತು.

ಆಸ್ಪತ್ರೆಯಲ್ಲಿ ಮಾನಸಿಕ ರೋಗ ತಜ್ಞರು ತಪಾಸಣೆ ನಡೆಸಿ ಸರ್ಟಿಪಿಕೇಟ್ ನೀಡಿದ್ದು, ಉಮೇಶ ಗುಣಮುಖನಾಗಲು ಹೆಚ್ಚಿನ ಚಿಕಿತ್ಸೆಗೆ ಆತನನ್ನು ಧಾರವಾಡದ ಡಿಮ್ಯಾನ್ಸ್ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿತ್ತು. ಇದಕ್ಕೂ ಕೂಡ ಪೊಲೀಸ್ ಇಲಾಖೆಯವರು ಅದರಲ್ಲಿಯೂ ಎಸ್ಐ ಹರೀಶ್ ಸ್ವತಃ ಮನಸ್ಸು ಮಾಡಿದ್ದರು. ಕೆಲವು ಕಾನೂನು ತೊಡಕುಗಳಿದ್ದ ಕಾರಣ ಅಂದು ರಾತ್ರಿ ಆತನಿಗೆ ಪುನರ್ವಸತಿ ಕಲ್ಪಿಸಿ ಇಂದು ಬೆಳಿಗ್ಗೆ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಆಂಬುಲೆನ್ಸ್ ಮೂಲಕ ಆತನನ್ನು ಇಬ್ಬರು ಪೊಲೀಸರ ಸುಪರ್ದೀಯಲ್ಲೇ ಮಧ್ಯಾಹ್ನದ ಬಳಿಕ ಧಾರವಾಡ ಆಸ್ಪತ್ರೆಗೆ ಕಳುಹಿಸಿಲಾಗಿದೆ. ಇನ್ನು ಪೊಲೀಸರ ಮನವಿಗೆ ಆರೋಗ್ಯ ಇಲಾಖೆ ಸ್ಪಂದಿಸಿದಂತೆಯೇ ಕೋಡಿಯ ಸಮಾಜ ಸೇವಾ ಸಂಸ್ಥೆ ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ ಉಮೇಶ್ ನನ್ನು ಧಾರಾವಾಡಕ್ಕೆ ಸಾಗಿಸಲು ಉಚಿತ ಆಂಬುಲೆನ್ಸ್ ಸೇವೆ ನೀಡಿದ್ದು ಅವರದ್ದೇ ಆಂಬುಲೆನ್ಸ್‌ನಲ್ಲಿ ಉಮೇಶ್‌ನನ್ನು ಧಾರವಾಡಕ್ಕೆ ಕರೆದೊಯ್ಯಲಾಗಿದೆ. ಆಂಬುಲೆನ್ಸ್ ಚಾಲಕ ಅಬ್ಬಾಸ್ ಕೋಡಿ, ಸಿಬ್ಬಂದಿ ಸಮದ್ ಠಾಣೆಗೆ ಆಗಮಿಸಿ ಆಸ್ಪತ್ರೆಗೆ ಸಾಗಿಸುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಈ ವೇಳೆಯಲ್ಲಿ ಎನ್.ಎಮ್.ಎ ತಾಲೂಕು ಅಧ್ಯಕ್ಷ ಸರ್ಧಾರ್ ಗುಲ್ವಾಡಿ, ಉಪಾಧ್ಯಕ್ಷ ಸಾಬಾನ್ ಹಂಗಳೂರು, ಕಾರ್ಯದರ್ಶಿ‌ ಆಸೀಫ್ ಕೋಡಿ, ಜೊತೆ ಕಾರ್ಯದರ್ಶಿ ಹಾಜಿ ಅಬುಶೇಕ್ ಹಾಗೂ ಪೊಲೀಸರು ಇದ್ದರು.

ಒಟ್ಟಿನಲ್ಲಿ ಉಮೇಶ್ ಸ್ಥಿತಿಯನ್ನು ಕಂಡ ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಲು ಮುಂದಾಗಿದ್ದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬಾರದಿದ್ದರಂದ ಉಮೇಶ್‌ಗೊಂದು ಹೊಸಜೀವನ ಕಲ್ಪಿಸಿಕೊಡಬೇಕು ಎಂದು ಪಣತೊಟ್ಟು ಹಗಲು ರಾತ್ರಿಯೆನ್ನದೇ ಉಮೇಶ್ ಚಿಕಿತ್ಸೆಗಾಗಿ ಹೋರಾಟ ನಡೆಸಿದ್ದು ಉಮೇಶ್ ಶೀಘ್ರ ಗುಣಮುಖನಾಗಿ ಬರಲಿ.

ಇದನ್ನೂ ಓದಿರಿ- ಮಾನಸಿಕ ಅಸ್ವಸ್ಥ ಯುವಕನ ಚಿಕಿತ್ಸೆಗೆ ಸ್ಪಂದಿಸಿ ಮಾನವೀಯತೆ ಮೆರೆದ ಕುಂದಾಪುರ ಪೊಲೀಸರು

ವರದಿ- ಯೋಗೀಶ್ ಕುಂಭಾಸಿ

 

Comments are closed.