ಕರಾವಳಿ

ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸಮಾಡಿ ನಿಗದಿತ ಗುರಿ ಸಾಧಿಸಿ : ಸಚಿವ ಯು.ಟಿ.ಖಾದರ್

Pinterest LinkedIn Tumblr

ಮಂಗಳೂರು ಆಗಸ್ಟ್ 03: ರಾಜ್ಯದ ಆಡಳಿತಯಂತ್ರವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನಿಗದಿತ ಗುರಿಯನ್ನು ಸಮಯ ಮಿತಿಯೊಳಗೆ ಸಾಧಿಸಿ ಎಂದು ನಗರಾಭಿವೃದ್ದಿ, ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಶೇ: 40 ರಷ್ಟು ಹೆಚ್ಚು ಮಳೆಯಾಗಿದ್ದು, ಮಳೆಯಿಂದ 9 ಜೀವಹಾನಿ, 148 ಮನೆ ಹಾನಿಯಾಗಿದ್ದು, 11 ಜಾನುವಾರುಗಳು ಮೃತಪಟ್ಟಿದ್ದು, 1.95 ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ. ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಒಟ್ಟು 185.52 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕ ರಸ್ತೆ, ಸೇತುವೆ, ಕಾಲುಸಂಕ ಕಿರುಸೇತುವೆ ಹಾಗೂ ಮೂಲ ಸೌಕರ್ಯ ಹಾನಿಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸಿದ್ದು 26 ಕೋಟಿ ರೂ. ಅನುದಾನವನ್ನು ಕೋರಲಾಗಿದೆ. ತುರ್ತು ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳು ರೂ. 15 ಲಕ್ಷ ಮಂಜೂರು ಮಾಡಬಹುದಾಗಿದೆ. ಆದ್ದರಿಂದ ಎಲ್ಲವನ್ನು ಸರ್ಕಾರಕ್ಕೆ ಬರೆದು ಅನುದಾನ ತರಿಸುವುದು ವಿಳಂಬವಾಗಬಹುದು. ಹಲವಾರು ಅಂಗನವಾಡಿ, ಶಾಲೆಗಳಲ್ಲಿ ಸಣ್ಣ ಪುಟ್ಟ ದುರಸ್ತಿಯಾಗಬೇಕಿದ್ದಲ್ಲಿ ಶಿಕ್ಷಣಾಧಿಕಾರಿಗಳು ಇರುವ ಅನುದಾನದಲ್ಲಿ ದುರಸ್ತಿ ಪಡಿಸಿಎಂದು ಸಚಿವರು ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ 540 ಸರ್ಕಾರಿ ಶಾಲೆಗಳಿಗೆ ಆವರಣ ಗೋಡೆ ಇಲ್ಲದಿದ್ದು, ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಗಳಿಗೆ ಅನುದಾನ ಬಿಡುಗಡೆ ಮಾಡಿ ಆವರಣ ಗೋಡೆ ಕಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದ.ಕ.ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್ ರವಿ ಸಚಿವರಿಗೆ ಮಾಹಿತಿ ನೀಡಿದರು.

ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಶೇ. 86 ಸಾಧನೆ ಮಾಡಲಾಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜೂಲೈ. 2108 ರವರೆಗೆ 8750 ರೈತರು ನೊಂದಣಿ ಮಾಡಿ ಕೊಂಡಿರುತ್ತಾರೆ. ಸಂತ್ರಸ್ತ ರೈತ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಾಗೂ ಕುಟುಂಬ ಪಿಂಚಣಿ ರೂ. 2000 ಮಂಜೂರು ಮಾಡಲಾಗಿದೆ.

ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಒಟ್ಟು 5473 ವೃದ್ದಾಪ್ಯ ವೇತನ, 43600, ವಿಧವಾ ವೇತನ 18151, ಅಂಗವಿಕಲ ವೇತನ , 5547 ಮನಸ್ವಿನಿ, 27 ಮೈತ್ರಿ ಫಲಾನುಭವಿಗಳಿಗೆ ಪಿಂಚಣಿ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ 94ಸಿ ಮತ್ತು 94ಸಿ.ಸಿ ಅಡಿ ಶೇ. 85 ರ ಸಾಧನೆಯನ್ನು ಜಿಲ್ಲೆ ದಾಖಲಿಸಿದೆ.
ನಗರೋತ್ಥಾನ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಉಸ್ತುವಾರಿಸಚಿವರು ಈ ಸಂಬಂಧ ಮುಖ್ಯ ಇಂಜೀನಿಯರ್ ಹಾಗೂ ಕನ್ಸಲ್ಟ್‍ಂಟ್ ಜೊತೆಗೆ ಭಾನುವಾರ ಪ್ರತ್ಯೇಖ ಸಭೆ ಕರೆಯಲು ನಿರ್ಧರಿಸಿದರು.

ಜಿಲ್ಲೆಯಲ್ಲಿ ವಸತಿ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ಪಡೆದ ಅವರು ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ ಭೂಮಿಯನ್ನು ಗುರುತಿಸಿ ಆರ್.ಟಿ.ಸಿ ಯನ್ನು ಇಲಾಖೆಯ ಹೆಸರಿಗೆ ಮಾಡಿಸಿ ಸರಕಾರಿ ಜಮೀನು ಅಕ್ರಮ ಕಬಳಿಕೆಗೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಇಲಾಖೆ, ಮಲೆನಾಡು ಪ್ರದೇಶ ಅಭಿವೃದ್ಧಿ ಅನುದಾನ ಸಂಬಂಧಿಸಿದಂತೆ ಸಮಗ್ರ ವಿವರವನ್ನು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡರು.

Comments are closed.